ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ (Ayodhya Ram Mandir)ದಲ್ಲಿ ನಡೆಯುವ ‘ಪ್ರಾಣ ಪ್ರತಿಷ್ಠಾ’ (Pran prathishta) ಸಮಾರಂಭದ ಹಿನ್ನಲೆಯಲ್ಲಿ ಜನವರಿ 22ರಂದು ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಎಲ್ಲ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಕಂಪೆನಿ ಶುಕ್ರವಾರ (ಜನವರಿ 19) ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ರಜೆ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಮಹಾರಾಷ್ಟ್ರ ಸರ್ಕಾರ ಒಂದು ದಿನದ ಸಾರ್ವಜನಿಕ ರಜೆಯನ್ನು ಈಗಾಗಲೇ ಘೋಷಿಸಿದೆ. ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಜನವರಿ 22ರ ದಿನವನ್ನು ‘ಶ್ರೀ ರಾಮ್ ಲಲ್ಲಾ ಪ್ರಾಣ್-ಪ್ರತಿಷ್ಠಾ ದಿನ್’ ಎಂದು ಘೋಷಿಸುತ್ತಿದೆ ಎಂದು ರಾಜ್ಯ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ಉದ್ಯಮಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಕಚೇರಿ, ಬ್ಯಾಂಕ್‌ಗಳಿಗೆ ಅರ್ಧ ದಿನ ರಜೆ
ಇನ್ನು ಕೇಂದ್ರ ಸರ್ಕಾರ ಆದೇಶ ಹೊರಡಿಸಿ, ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಜನವರಿ 22ರಂದು ಅರ್ಧ ದಿನ ರಜೆ ಇರಲಿದೆ ಎಂದು ತಿಳಿಸಿದೆ.
ದೇಶದ ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಕಚೇರಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠೆಯನ್ನು ಭಾರತದಾದ್ಯಂತ 22ನೇ ಜನವರಿ 2024ರಂದು ಆಚರಿಸಲಾಗುತ್ತದೆ. ಆಚರಣೆಯಲ್ಲಿ ಭಾಗವಹಿಸಲು ನೌಕರರನ್ನು ಸಕ್ರಿಯಗೊಳಿಸಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಮಧ್ಯಾಹ್ನ 12.40 ಗಂಟೆಯವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ” ಎಂದು ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಾಣ ಪ್ರತಿಷ್ಠೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ, ಜನವರಿ 22ರಂದು ಅಪರಾಹ್ನ 2.30ರ ವರೆಗೆ ಬ್ಯಾಂಕ್ ಮುಚ್ಚಿರುತ್ತವೆ ಎಂದು ಹಣಕಾಸು ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇತ್ತ ಖಾಸಗಿ ವಲಯದ ಬ್ಯಾಂಕ್‌ಗಳು ಎಂದಿನಂತೆ ಪೂರ್ತಿ ದಿನ ತೆರೆದಿರುತ್ತವೆ. ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಮುಂದುವರಿಯಲಿದೆ.
ಇದನ್ನೂ ಓದಿ: Ayodhya Ram Mandir: ದೊಡ್ಡ ಪರದೆಯಲ್ಲೆ ಲೈವ್ ರಾಮ ಮಂದಿರ ಕಾರ್ಯಕ್ರಮ ವೀಕ್ಷಿಸಿ; ಟಿಕೆಟ್ ದರ ಎಷ್ಟು?
ಜನವರಿ 22ರಂದು ಮಧ್ಯಾಹ್ನ 12.30ಕ್ಕೆ ರಾಮ ಮಂದಿರದ ಪ್ರಾಣ-ಪ್ರತಿಷ್ಠಾ ಸಮಾರಂಭ ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಾಜದ ಎಲ್ಲ ವರ್ಗಗಳ ಹಲವಾರು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಭಾರತ ಮತ್ತು ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆ ಅಳವಡಿಸಿ ಈ ಸಮಾರಂಭದ ನೇರ ಪ್ರದರ್ಶನಕ್ಕೆ ಈಗಾಗಲೇ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ