Site icon Vistara News

Ayodhya Rama Mandir: ಜ. 22ರಂದೇ ಹೆರಿಗೆ ಆಗುವಂತೆ ಮಾಡಿ ಪ್ಲೀಸ್; ವೈದ್ಯರಿಗೆ ಗರ್ಭಿಣಿಯರ ಮೊರೆ!

ram mandir

ram mandir

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Rama Mandir) ಪ್ರಾಣ ಪ್ರತಿಷ್ಠೆ ಸಮಾರಂಭ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಹಿತ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಡೀ ದೇಶಾದ್ಯಂತ ರಾಮ ಜಪ ಮೊಳಗುತ್ತಿದೆ. ಈ ಮಧ್ಯೆ ಗರ್ಭಿಣಿಯರು ವೈದ್ಯರ ಬಳಿ ವಿಶೇಷ ಬೇಡಿಕೆ ಇಡುತ್ತಿದ್ದು, ಪ್ರಾಣ ಪ್ರತಿಷ್ಠೆಯ ದಿನದಂದೇ ಹೆರಿಗೆ ಮಾಡಿಸುವಂತೆ ಮನವಿ ಸಲ್ಲಿಸುತ್ತಿದ್ದಾರೆ.

ಗರ್ಭಿಣಿಯರ ಮನವಿ

ಜನವರಿ 22ರಂದು ಸಿಸೇರಿಯನ್ ಮಾಡುವಂತೆ ಹಲವರು ಅಯೋಧ್ಯೆಯ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ದುಂಬಾಲು ಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಈ ಬೇಡಿಕೆ ಹೆಚ್ಚುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಈ ಬೆಳವಣಿಗೆ ಅಯೋಧ್ಯೆ ಮಾತ್ರವಲ್ಲ ದೇಶಾದ್ಯಂತ ಕಂಡು ಬಂದಿದೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಶುಭ ದಿನದಂದು ಮಗುವಿಗೆ ಜನ್ಮ ನೀಡುವುದಕ್ಕೆ ಹಲವರು ಕಾಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಜನವರಿಯಲ್ಲಿ ಹೆರಿಗೆಯಾಗುತ್ತದೆ ಎಂದು ವೈದ್ಯರಿಂದ ದಿನಾಂಕ ಪಡೆದವರು, 22ರಂದೇ ಹೆರಿಗೆ ಮಾಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರಸೂತಿ ತಜ್ಞರ ಬಳಿ ಏನಾದರೂ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ. ಮಗುವಿನ ಜನನಕ್ಕೆ ಇದಕ್ಕಿಂತ ಉತ್ತಮ ಸಮಯ ಮತ್ತೆಂದೂ ಬರುವುದಿಲ್ಲ ಎಂಬುದು ಕೆಲವು ಮಹಿಳೆಯರ ಅಭಿಪ್ರಾಯ. ಹೀಗಾಗಿ ಜ. 22ರಂದು ದೇಶದಲ್ಲಿ ಎಂದಿಗಿಂತಲೂ ಹೆಚ್ಚಿನ ಹೆರಿಗೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅವಸರ ಸರಿಯಲ್ಲ ಎಂದು ವೈದ್ಯರು ಸಲಹೆ ನೀಡುತ್ತಿದ್ದರೂ ಇದರ ಕುರಿತು ಹೆಚ್ಚು ಮಂದಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಜನವರಿ 22ರಂದೇ ಹೆರಿಗೆ ಮಾಡಿಸುವಂತೆ ಪ್ರತಿ ದಿನ ಹಲವರು ಮನವಿ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಲಕ್ನೋ ಲೋಕ್‌ ಬಂಧು ರಾಜ್‌ ನಾರಾಯಣ್‌ ಆಸ್ಪತ್ರೆಯ ತಜ್ಞ ವೈದ್ಯರು ತಿಳಿಸಿದ್ದಾರೆ. “ಜನವರಿ 22ರಂದೇ ಹೆರಿಗೆ ಮಾಡಿಸುವಂತೆ ಪ್ರಸವ ಕೊಠಡಿಯಲ್ಲಿ ನಮಗೆ ಪ್ರತಿ ದಿನವೂ 14-15 ಕುಟುಂಬಗಳಿಂದ ಮನವಿ ಬರುತ್ತಿದೆ. ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ದಿನಾಂಕ ಹೊಂದಾಣಿಕೆ ಮಾಡುತ್ತೇವೆ ಎಂದು ಮನವರಿಕೆ ಮಾಡಲು ಯತ್ನಿಸುತ್ತಿದ್ದೇವೆ” ಎಂದು ಮೀರತ್‌ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದ ಮುಖ್ಯಸ್ಥೆ ಡಾ. ಸೀಮಾ ದ್ವಿವೇದಿ ವಿವರಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಮಲಲ್ಲಾ ಮೂರ್ತಿಯ ಫೋಟೊ ಹಂಚಿಕೊಂಡ ಪಾಕ್​ ಕ್ರಿಕೆಟಿಗ

ʼʼಮಗುವಿಗೆ ಜನ್ಮ ನೀಡಲು ಭವ್ಯ ಮಂದಿರಲ್ಲಿ ರಾಮ ವಿರಾಜಮಾನವಾಗುವ ದಿನಕ್ಕಿಂತ ಬೇರೆ ಒಳ್ಳೆಯ ದಿನವಿಲ್ಲ. ಹೀಗಾಗಿ ನಾವು ಆ ದಿನದಂದೇ ಹೆರಿಗೆ ಮಾಡಿಸುವಂತೆ ಮನವಿ ಸಲ್ಲಿಸಿದ್ದೇವೆʼʼ ಎಂದು ಗರ್ಭಿಣಿಯೊಬ್ಬರು ತಿಳಿಸಿದ್ದಾರೆ. ಇನ್ನೊಂದು ಉದಾಹರಣೆ ಎಂದರೆ ಮತ್ತೊಬ್ಬ ಗರ್ಭಿಣಿಯ ಹೆರಿಗೆ ದಿನಾಂಕ ಫೆಬ್ರವರಿ 7. ಆದರೆ ಅವರು ಎರಡು ವಾರಗಳ ಮುಂಚೆಯೇ ಹೆರಿಗೆ ಮಾಡಿಸುವಂತೆ ವೈದ್ಯರ ಬಳಿ ಆಗ್ರಹಿಸಿದ್ದಾರೆ. ಇದನ್ನು ʼಮುಹೂರ್ತ ಹೆರಿಗೆʼ ಎಂದು (Muhurat deliveries) ಕರೆಯಲಾಗುತ್ತಿದ್ದು, ʼʼಎಲ್ಲ ಸಮಯದಲ್ಲಿ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ. ತಾಯಿ ಮತ್ತು ಮಗುವಿನ ವೈದ್ಯಕೀಯ ಸ್ಥಿತಿ, ಆರೋಗ್ಯವನ್ನು ಗಮನದಲ್ಲಿರಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆʼʼ ಎಂದು ತಜ್ಞರೊಬ್ಬರು ವಿವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version