Site icon Vistara News

Ram Mandir: ರಾಮ ಮಂದಿರಕ್ಕೆ ಆಗಮಿಸಿ ವ್ಯವಸ್ಥೆ ಪರಿಶೀಲಿಸಿದ ಸಿಎಂ ಯೋಗಿ ಆದಿತ್ಯನಾಥ್

yogi

yogi

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರಲ್ಲಿ (Ram Mandir) ರಾಮಲಲ್ಲಾ (Ram lalla) ವಿಗ್ರಹದ ಪ್ರಾಣ ಪ್ರತಿಷ್ಠೆ ಸಾಂಗವಾಗಿ ನೆರವೇರಿದೆ. ಜನವರಿ 23ರಿಂದ ದೇಗುಲ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ಮೊದಲ ದಿನವೇ ಲಕ್ಷಾಂತರ ಮಂದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನೂಕುನುಗ್ಗಲು, ತಳ್ಳಾಟ ಹಾಗೂ ಕಾಲ್ತುಳಿತ ಸಂಭವಿಸಿ ಕೆಲ ಭಕ್ತರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಯೋಧ್ಯೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ವೈಮಾನಿಕ ಸಮೀಕ್ಷೆ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಯೋಗಿ, ಭಕ್ತರು ತಾಳ್ಮೆಯಿಂದಿರಬೇಕು ಮತ್ತು ಸುಗಮ ದರ್ಶನಕ್ಕಾಗಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರತಿಯೊಬ್ಬ ಭಕ್ತನಿಗೂ ದೈವಿಕ ಅನುಭವವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಜ. 23ರಂದು ರಾಮ ಮಂದರದ ಬಾಗಿಲು ತೆರೆಯುತ್ತಿದ್ದಂತೆ ಚಳಿಯನ್ನು ಲೆಕ್ಕಿಸದೆ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು. ದೇವಾಲಯದ ಆವರಣದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಎಟಿಎಸ್ ಮತ್ತು ಆರ್‌ಎಎಫ್‌ ಕಮಾಂಡೋಗಳನ್ನು ನಿಯೋಜಿಸಲಾಗಿತ್ತು.

ಭಕ್ತರ ಸುರಕ್ಷತೆಗೆ ಆದ್ಯತೆ

ಯೋಗಿ ಅವರ ನಿರ್ದೇಶನದಂತೆ ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಆಡಳಿತ ಮತ್ತು ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಂತರ್‌ ಜಿಲ್ಲಾ ಗಡಿಗಳು, ಹೋಟೆಲ್‌ಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ಕಠಿಣ ತಪಾಸಣೆಯನ್ನು ಜಾರಿಗೆ ತರಲಾಗಿದೆ.

ಮುಂಜಾನೆಯಿಂದಲೇ ಜನ ಸಂದಣಿ

ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ರಾಮನ ದರ್ಶನಕ್ಕಾಗಿ ಸಾವಿರಾರು ಭಕ್ತರು ಜಮಾಯಿಸಿದ್ದರು. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾಮನ ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದರು. ಬೆಳಗ್ಗೆ 7 ಗಂಟೆಯಿಂದ ದರ್ಶನದ ವ್ಯವಸ್ಥೆ ಮಾಡಿದ್ದರೂ ಮುಂಜಾನೆಯಿಂದಲೇ ಭಕ್ತರು ಕಾದು ನಿಂತಿದ್ದರು.

ಇದನ್ನೂ ಓದಿ: Ram Mandir: ರಾಮಲಲ್ಲಾ ದರ್ಶನಕ್ಕೆ ಬೆಳಗ್ಗೆಯೇ ಸಾವಿರಾರು ಭಕ್ತರ ದಂಡು; ವಿಡಿಯೊ ನೋಡಿ

ಜ. 22ರಂದು ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿಕ ಮಾತನಾಡಿ, ʼʼರಾಮ ವಿವಾದ ಅಲ್ಲ, ಸಮಾಧಾನ. ರಾಮ ವರ್ತಮಾನ ಅಲ್ಲ ಅನಂತ ಕಾಲ. ರಾಮ ಎಲ್ಲರಿಗೂ ಸೇರಿದವನು. ಇದು ಕೇವಲ ವಿಗ್ರಹದ ಪ್ರಾಣ ಪ್ರತಿಷ್ಠೆ ಅಲ್ಲ. ಸಾಕ್ಷಾತ್‌ ಭಾರತೀಯರ ಮಾನವೀಯ ಮೌಲ್ಯದ, ಸರ್ವೋಚ್ಚ ಆದರ್ಶದ ಪ್ರಾಣ ಪ್ರತಿಷ್ಠಾಪನೆ. ಇದು ಕೇವಲ ದೇವ ಮಂದಿರ ಅಲ್ಲ, ಭಾರತದ ದೃಷ್ಟಿಯ, ಭಾರತದ ದರ್ಶನದ ಮಂದಿರ. ರಾಷ್ಟ್ರ ಚೇತನ ಮಂದಿರ. ರಾಮ ಪ್ರವಾಹ, ಪ್ರಭಾವ. ರಾಮ ನಿತ್ಯ ನಿರಂತರ. ರಾಮ ವಿಶ್ವಾತ್ಮ. ಕಾಲ ಚಕ್ರ ಬದಲಾಗಿದೆ. ಮುಂದಿನ ಸಾವಿರ ಸಾವಿರ ವರ್ಷಗಳ ಕಾಲ ಈ ಸಂಭ್ರಮ ಮುಂದುವರಿಯಲಿದೆ. ಇದು ಸರಿಯಾದ ಸಮಯ. ಇದು ಪವಿತ್ರ ಸಮಯ. ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ನಾವೀಗ ಮುನ್ನುಡಿ ಬರೆಯಬೇಕು. ಭವ್ಯ ದಿವ್ಯ ಭಾರತದ ನಿರ್ಮಾಣಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು” ಎಂದು ಕರೆ ನೀಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version