ಅಯೋಧ್ಯಾ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಯ ಸೋಮವಾರ ನಡೆದಿದ್ದು, ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಜ.22, ಸೋಮವಾರ ಉದ್ಘಾಟನೆಯಾಗಿರುವ ರಾಮ ಮಂದಿರವು ಜ.23, ಮಂಗಳವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ(Opens To Public). ಜನರು ರಾಮ ಲಲ್ಲಾನ (Ram Lalla)ದರ್ಶನವನ್ನು ಪಡೆದುಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಈ ವೇಳೆ, ಬಾಲಿವುಡ್ ಗಣ್ಯರಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಆಲಿಯಾ ಭಟ್, ರಣಬೀರ್ ಕಪೂರ್ ಹಾಗೂ ಉದ್ಯಮಿ ದಂಪತಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಕೂಡ ಹಾಜರಿದ್ದರು.
ಅಯೋಧ್ಯೆಯ ರಾಮ ಮಂದಿರವು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಲಾಗಿದೆ. ಇದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿರ್ವಹಿಸುತ್ತದೆ.
ದರ್ಶನ ಮತ್ತು ಆರತಿ ಸಮಯ ಹೀಗಿದೆ…
ಬೆಳಗ್ಗೆ 7 ಗಂಟೆಯಿಂದ 11.30 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 7 ಗಂಟೆಯವರೆಗೆ ರಾಮ ಲಲ್ಲಾ ದರ್ಶನ ಪಡೆಯಬಹುದು. ಜಾಗರಣ/ಶೃಂಗಾರ ಆರತಿಯನ್ನು ಬೆಳಗ್ಗೆ 6.30 ಮತ್ತು ಸಂಜೆ ಸಂಧ್ಯಾರತಿ 7.30ಕ್ಕೆ ನಡೆಯುತ್ತದೆ.
ಪಾಸ್ ಪಡೆಯುವುದು ಹೇಗೆ?
ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಆರತಿ ಅಥವಾ ದರ್ಶನಕ್ಕಾಗಿ ಪಾಸ್‌ಗಳನ್ನು ಪಡೆಯಬಹುದು. ಆನ್‌ಲೈನ್ ಬುಕ್ ಮಾಡಲು, ಅಯೋಧ್ಯಾ ರಾಮ ಮಂದಿರ ಜಾಲತಾಣಕ್ಕೆ ಲಾಗಿನ್ ಆಗಬೇಕು. ಇದಕ್ಕಾಗಿ ನಿಮ್ಮ ಮೊಬೈಲ್ ನಂಬರ್ ಬಳಸಬೇಕಾಗುತ್ತದೆ. ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುವ ಒಟಿಪಿ ಮೂಲಕ ನಿಮ್ಮ ಗುರುತು ದೃಢೀಕರಿಸಬೇಕಾಗುತ್ತದೆ. ಬಳಿಕ ಮೈ ಪ್ರೊಫೈಲ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ. ಹೀಗೆ ನಿಮ್ಮ ಪಾಸ್ ಅನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು.
ರಾಮ ಮಂದಿರ ನಿರ್ಮಾಣ ಕಾರ್ಮಿಕರಿಗೆ ಪುಷ್ಪವೃಷ್ಟಿ ಮಾಡಿದ ಪ್ರಧಾನಿ ಮೋದಿ
ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ನಿರ್ಮಾಣ ತಂಡದ ಭಾಗವಾಗಿದ್ದ ಕಾರ್ಮಿಕರ ಮೇಲೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪುಷ್ಪ ವೃಷ್ಟಿ ಮಾಡಿದರು. ಆ ಬಳಿಕ ಅವರು ರಾಮ ಮಂದಿರದ ಆವರಣದಲ್ಲಿರುವ ಜಟಾಯು ವಿಗ್ರಹದ ಮೇಲೆ ಪ್ರಧಾನಿ ಹೂವುಗಳನ್ನು ಸಿಂಪಡಿಸಿದರು ಮತ್ತು ಅಯೋಧ್ಯೆ ಧಾಮದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಯೋಧ್ಯೆಯ ರಾಮ ದೇವಾಲಯದ ಆವರಣದಲ್ಲಿರುವ ಕುಬೇರ ತಿಲಾಕ್ಕೆ ಭೇಟಿ ನೀಡಿ ಅಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರು.
ಪ್ರಧಾನಿ ‘ಜಲಾಭಿಷೇಕ’ ಮಾಡಿದರು ಮತ್ತು ದೇವಾಲಯದ ಪ್ರದಕ್ಷಿಣೆ ಮಾಡಿದರು. ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಕುಬೇರ ತಿಲಾ ಮೇಲಿರುವ ಪ್ರಾಚೀನ ಶಿವ ದೇವಾಲಯವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನವೀಕರಿಸುತ್ತಿದೆ.
ಈ ಸುದ್ದಿಯನ್ನೂ ಓದಿ: Ram Mandir : ರಾಮ ಮಂದಿರ ನಿರ್ಮಾಣ ಕಾರ್ಮಿಕರಿಗೆ ಪುಷ್ಪವೃಷ್ಟಿ ಮಾಡಿದ ಪ್ರಧಾನಿ ಮೋದಿ