Site icon Vistara News

Rama Mandir : ಧೈರ್ಯವಾಗಿ ಶುಭಾಶಯ ಕೋರಿದ ಡಿಕೆಶಿ, ಹೆಬ್ಬಾಳ್ಕರ್; ಸಿದ್ದರಾಮಯ್ಯ‌ ಮೌನ!

Rama DK Shivkumar11

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ (Ayodhye Rama Mandir) ಲೋಕಾರ್ಪಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಬಹುತೇಕ ಎಲ್ಲ ನಾಯಕರು ಮೌನವಾಗಿದ್ದಾರೆ. ಆದರೆ, ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು ಧೈರ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರು ರಾಮ ಮಂದಿರ ಮತ್ತು ರಾಮ ರಾಜ್ಯಕ್ಕೂ ಗ್ಯಾರಂಟಿ ಯೋಜನೆಗಳಿಗೂ (Guarantee Scheme) ಇರುವ ಸಂಬಂಧವನ್ನು ಪ್ರತಿಪಾದಿಸಿದ್ದಾರೆ.

ರಾಮರಾಜ್ಯದ ನಿರ್ಮಾಣ, ನಮ್ಮ ಕನಸು. ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರಂಟಿಗಳು ಇಂದು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರ ಕುಟುಂಬಿಕರು ತಮ್ಮದೇ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರೆ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರು ಕೂಡಾ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್‌ ಯು.ಟಿ. ಖಾದರ್‌ ಸೇರಿದಂತೆ ಯಾವ ಕಾಂಗ್ರೆಸ್‌ ನಾಯಕರೂ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿಲ್ಲ.

ಡಿ.ಕೆ.ಶಿ ಶುಭಾಶಯಕ್ಕೆ ಜನ ಏನಂದರು?

ಈ ನಡುವೆ, ಡಿ.ಕೆ. ಶಿವಕುಮಾರ್‌ ಅವರು ಶುಭಾಶಯ ಹೇಳಿದ್ದಕ್ಕೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಂದಿ ಡಿ.ಕೆ. ಶಿವಕುಮಾರ್‌ ಅವರ ಸೌಜನ್ಯವನ್ನು ಮೆಚ್ಚಿದ್ದಾರೆ. ಅವರು ನಿಜಕ್ಕೂ ದೈವಭಕ್ತರು ಎಂದಿದ್ದಾರೆ. ಕೆಲವರು ಅವರಿಗೆ ಚುಚ್ಚಿ ಮಾತನಾಡಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ಮೇಲೆ ಏನೇ ಆಪಾದನೆಗಳು ಇರಬಹುದು. ಆದರೆ, ಹಿಂದು ನಂಬಿಕೆಗಳನ್ನು ಗೌರವಿಸುವ ವಿಚಾರಕ್ಕೆ ಬಂದಾಗ ಅವರು ಹಿಂದೆ ಹಿಂದೆ ಮುಂದೆ ನೋಡುವುದಿಲ್ಲ. ಒಂದು ರೀತಿಯ ಗೌರವವನ್ನು ಕಾಪಾಡುತ್ತಾರೆ. ಡಿ.ಕೆ.ಶಿವಕುಮಾರ್‌ ಅವರೇ ಸಿಎಂ ಆಗಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸುವ ಹಲವು ಕಾರಣಗಳಲ್ಲಿ ಇದೂ ಒಂದು ಎಂದು ಒಬ್ಬರು ಹೇಳಿದ್ದಾರೆ.

ಟ್ರೈನ್‌ ಹೋದ ಮೇಲೆ ಟಿಕೆಟ್‌ ಎಂದು ಗೇಲಿ

ʻʻಪ್ರಧಾನ ಮಂತ್ರಿ ಆವಾಸ ಯೋಜನೆ, ಸ್ವನಿಧಿ ಯೋಜನೆ ಆಯುಷ್ಮಾನ ಭಾರತ, ಐದು ಕೇಜಿ ಕೇಂದ್ರದ ಅಕ್ಕಿ, ಕಿಸಾನ್‌ ಸಮ್ಮಾನ್ ಯೋಜನೆ, ಒಳ್ಳೆ ರಸ್ತೆಗಳು, ನೀವು ತಪ್ಪು ಸರಿ ಮಾಡಿಕೊಳ್ಳಲಿದ್ದ ಅವಕಾಶ ತಪ್ಪಿಸಿಕೊಂಡಿದ್ದಿರಾ…ಫೋಟೊ ಹಾಕಿ ಟ್ರೈನ್ ಹೋದ ಮೆಲೆ ಟಿಕೆಟ್ ತೊಗೊಳೊ ಪ್ರಯತ್ನ ಮಾಡಬೇಡಿʼ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ʻʻನಿಮ್ಮ ಈ ಡೋಂಗಿತನಕ್ಕೆ ನಗಬೇಕು ಅಥವಾ ವಿರೋಧ ಮಾಡಬೇಕೆನ್ನುವುದೇ ಮತದಾರರಿಗೆ ಅರ್ಥವಾಗುತ್ತಿಲ್ಲ ರಾಮರಾಜ್ಯ ನಿಮ್ಮ ಕನಸಲ್ಲ. ಅದು ಭ್ರಮೆ ನಿಮ್ಮ ಡೋಂಗಿತನ ಏನೆಂದು ಇಂದು ರಜೆ ನೀಡದೆ ತೋರಿಸಿದ್ದೀರಿ. ನಿಮ್ಮ ಸಿದ್ದರಾಮಯ್ಯನವರ ಪಂಚೆಯೊಳಗೆ ಟೌರಜ್‌ ಇದೆ ಬೇಕಾದರೆ ಪಂಚೇ ಎತ್ತಿ ನೋಡಿʼʼ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರೇಮವೇ ರಾಮ.. ರಾಮನೇ ಪ್ರೇಮ ಎಂದ ಹೆಬ್ಬಾಳ್ಕರ್‌

ಭರತ ಖಂಡದ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಮೂರ್ತಿಯ ‘ಪ್ರಾಣ ಪ್ರತಿಷ್ಠಾಪನೆ ಹಾಗೂ ಭವ್ಯ ರಾಮ ಮಂದಿರದ ಲೋಕಾರ್ಪಣೆಯ’ ಭಕ್ತಿಪೂರ್ವಕ ಶುಭಾಶಯಗಳು. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಬದುಕಿನ ಆದರ್ಶಗಳು ಹಾಗೂ ರಾಜಧರ್ಮ ಎಲ್ಲರಿಗೂ ಪ್ರೇರಣೆಯಾಗಲಿ… ರಾಜ್ಯ ಸುಭಿಕ್ಷವಾಗಲೆಂದು… ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ. “ಪ್ರೇಮವೇ ರಾಮ… ರಾಮನೇ ಪ್ರೇಮ… ಇದುವೇ ನೇಮ…” ಜೈ ಶ್ರೀ ರಾಮ್‌ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹೇಳಿದ್ದಾರೆ.

ದೇವಸ್ಥಾನದಲ್ಲಿ ಪೂಜೆ ಮಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಶಿವಮೊಗ್ಗ : ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಗರದ ರಥಬೀದಿಯಲ್ಲಿರುವ ಕೋದಂಡರಾಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.

KN Rajanna11

ತೀರ್ಥಹಳ್ಳಿಯ ರಥ ಬೀದಿಯಲ್ಲಿರುವ ಶ್ರೀ ರಾಮನ ದೇವಸ್ಥಾನವನ್ನು ಎರಡು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರೇ ಸ್ವಚ್ಛಗೊಳಿಸಿದ್ದರು. ಸೋಮವಾರ ಕಿಮ್ಮನೆ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಾನಕ ವಿತರಣೆ ಮಾಡಲಾಯಿತು.

ಕೆ.ಎನ್‌. ರಾಜಣ್ಣ ಕುಟುಂಬದ ದೇವಸ್ಥಾನದಲ್ಲಿ ವಿಶೇಷ ಪೂಜೆ

ತುಮಕೂರಿನಲ್ಲಿ ಸಚಿವ ಕೆ.ಎನ್.ರಾಜಣ್ಣ ಕುಟುಂಬದಿಂದ ರಾಮ ಮಂದಿರದಲ್ಲಿ ವಿಶೇಷ ಪೂಜೆ ನಡೆದಿದೆ. ಕಿತ್ತಗಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನದಲ್ಲಿ ಕೆ.ಎನ್ ರಾಜಣ್ಣ ಕುಟುಂಬದವರು ಪೂಜೆ ನೆರವೇರಿಸಿದರು.

KN Rajanna11

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕಿತ್ತಗಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಹೋಮದಲ್ಲಿ ಕೆ.ಎನ್.ರಾಜಣ್ಣ ಪತ್ನಿ ಶಾಂತಲಾ ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದಾರೆ. ಇದು ಕೆ.ಎನ್ ರಾಜಣ್ಣ ಅವರೇ 2006-07ರಲ್ಲಿ ನಿರ್ಮಾಣ ಮಾಡಿರುವ ದೇವಸ್ಥಾನವಾಗಿದೆ.

ಪಾಳು ಬಿದ್ದಿದ್ದ ದೇವಸ್ಥಾನವನ್ನುಕೆ.ಎನ್ ರಾಜಣ್ಣ ಜೀರ್ಣೋದ್ಧಾರ ಮಾಡಿಸಿದ್ದರು. ಅಂದಾಜು 20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನ ಇದಾಗಿದ್ದು, ಅಯೋಧ್ಯೆ ದೇವಸ್ಥಾನದ ಉದ್ಘಾಟನೆಯ ಸಮಯಕ್ಕೆ ಸರಿಯಾಗಿ ಪೂಜೆ ನಡೆಯಲಿದೆ. ಪೂಜೆಯಲ್ಲಿ ರಾಜಣ್ಣ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡಾ ಭಾಗವಹಿಸಿದ್ದಾರೆ.

ಶ್ರೀರಾಮನಂತೆ ಕಾಂಗ್ರೆಸ್‌ನಿಂದಲೂ ಜನಪರ ಹೋರಾಟ ಎಂದ ಸಚಿವ ಬೋಸರಾಜು

ಶ್ರೀರಾಮನ ಆದರ್ಶ ಎಂದಿಗೂ ಪ್ರಸ್ತುತ. ಇದೇ ನಿಟ್ಟಿನಲ್ಲಿ ರಾಜ್ಯದಲ್ಲಿ ಆದರ್ಶ ಆಡಳಿತ ನೀಡುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜನರಿಗಾಗಿ ಶ್ರೀರಾಮ ಹೋರಾಟ ನಡೆಸಿದಂತೆ ಕಾಂಗ್ರೆಸ್‌ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಸಚಿವ ಎನ್‌ ಎಸ್‌ ಬೋಸರಾಜು ಶುಭಾಶಯ ಕೋರಿದ್ದಾರೆ.

Exit mobile version