ತಿರುವನಂತಪುರಂ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandir) ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ಧತೆ ಕೈಗೊಳ್ಳಲಾಗುತ್ತದೆ. ಸಮಾರಂಭದ ಹಿನ್ನೆಲೆಯಲ್ಲಿ ಬಿಜೆಪಿ (BJP) ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ವಿಶೇಷ ಎಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಅದ್ಧೂರಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ಬಿಜೆಪಿ ಹಿರಿಯ ಮುಖಂಡ ಪ್ರಕಾಶ್ ಜಾವಡೇಕರ್ ಅವರು ವಯನಾಡು ಜಿಲ್ಲೆಯ ಪೊನ್‌ಕುಝಿ ಶ್ರೀ ರಾಮ ದೇವಸ್ಥಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇತರ ಎನ್‌ಡಿಎ ನಾಯಕರೊಂದಿಗೆ ಅಯೋಧ್ಯೆಯಿಂದ ನೇರ ಪ್ರಸಾರವಾಗುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ಇವರ ಜತೆಗೆ ಸ್ಥಳೀಯ ನಾಯಕರಾದ ತುಷಾರ್ ವೆಲ್ಲಪಳ್ಳಿ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯಾರು ಈ ತುಷಾರ್ ವೆಲ್ಲಪಳ್ಳಿ?
ಈಳವ ಸಮುದಾಯದ ನಾಯಕ ಮತ್ತು ಎಸ್‌ಎನ್‌ಡಿಪಿ ಮುಖಂಡ ವೆಲ್ಲಪಳ್ಳಿ ನಟೇಶ್ ಅವರ ಪುತ್ರ ತುಷಾರ್ ವೆಲ್ಲಪಳ್ಳಿ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸ್ಪರ್ಧಿಯಾಗಿ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದರು. ಮಾತ್ರವಲ್ಲ ಅವರು ಕೇರಳದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಭಾರತ್ ಧರ್ಮ ಜನಸೇನಾ (ಬಿಡಿಜೆಎಸ್)ದ ನಾಯಕ. ಅಯೋಧ್ಯೆಯ ದೇವಾಲಯ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ಮತ್ತು ಅದರ ನಾಯಕರಿಗೆ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮವು ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಿದೆ ಈ ದೇಗುಲ?
ಪೊನ್‌ಕುಝಿ ಶ್ರೀ ರಾಮ ದೇವಸ್ಥಾನ ಸುಲ್ತಾನ್ ಬತ್ತೇರಿ-ಮೈಸೂರು ರಸ್ತೆಯಲ್ಲಿದ್ದು, ರಾಮಾಯಣದೊಂದಿಗೆ ಸಂಬಂಧ ಹೊಂದಿದೆ. ಈ ದೇವಾಲಯವನ್ನು ಮುತ್ತಂಗ ವನ್ಯಜೀವಿ ಅಭಯಾರಣ್ಯದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಪೊನ್‌ಕುಝಿ ನದಿಯ ದಡದ ಬಳಿಯ ಪ್ರಶಾಂತ ವಾತಾವರಣದಲ್ಲಿ ಸ್ಥಾಪಿಸಲಾಗಿದೆ. ಪೊನ್‌ಕುಝಿ ದೇಗುಲದಲ್ಲಿ ರಾಮನ ಜತೆಗೆ ಸೀತಾ ಮಾತೆ, ಲಕ್ಷ್ಮಣ ಮತ್ತು ಹನುಮಂತನನ್ನೂ ಪೂಜಿಸಲಾಗುತ್ತದೆ.
ರಾಮಲಲ್ಲಾ ವಿಗ್ರಹ ಬಾಲಕ ರಾಮನಂತೆ ಕಾಣುತ್ತಿಲ್ಲ ಎಂದ ಕಾಂಗ್ರೆಸ್ ನಾಯಕ
ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ರಾಮಲಲ್ಲಾ ವಿಗ್ರಹವು ಬಾಲಕ ರಾಮನಂತೆ ಕಾಣುತ್ತಿಲ್ಲ ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ರಾಮ ಲಲ್ಲಾ ವಿಗ್ರಹವನ್ನು ಗರ್ಭ ಗುಡಿಯ ಪೀಠದಲ್ಲಿ ಗುರುವಾರ ಇರಿಸಲಾಯಿತು. ಈ ರಾಮ ಲಲ್ಲಾ ವಿಗ್ರಹದ ಫೋಟೋಗಳನ್ನು ಬಿಡುಗಡೆ ಮಾಡಲಾಗಿದ್ದು, ದಿಗ್ವಿಜಯ್ ಅವರು ಬಾಲಕ ರಾಮನನ್ನು ಈ ವಿಗ್ರಹ ಹೋಲುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Ram Mandir: ನಗುಮೊಗದ ರಾಮಲಲ್ಲಾ, ನೀನೇ ಮನದ ತುಂಬೆಲ್ಲ; ಹೊಸ ಫೋಟೊ ಕಣ್ತುಂಬಿಕೊಳ್ಳಿ
ನಮ್ಮ ಗುರುಗಳಾದ ದ್ವಾರಕಾ ಮತ್ತು ಜೋಶಿಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ ಮಹಾರಾಜ್ ಅವರು, ರಾಮ ಜನ್ಮಭೂಮಿ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹವು ಬಾಲಕ ರಾಮನಾಗಿರಬೇಕು ಮತ್ತು ತಾಯಿ ಕೌಶಲ್ಯಾ ಮಡಿಲಲ್ಲಿ ಇರುವಂತಿರಬೇಕು ಎಂದು ಸಲಹೆ ನೀಡಿದ್ದರು. ಆದರೆ, ಪ್ರತಿಷ್ಠಾಪನೆ ಮಾಡಲಾಗುತ್ತಿರುವ ವಿಗ್ರಹವು ಬಾಲಕ ರಾಮನ ರೀತಿಯಲ್ಲಿ ಕಾಣಿಸುತ್ತಿಲ್ಲ ಎಂದು ದಿಗ್ವಿಜಯ್ ಸಿಂಗ್ ಅವರು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ