Site icon Vistara News

Ram Mandir: ಹೀಗಿತ್ತು, ರಾಮ ಜನ್ಮಭೂಮಿಗಾಗಿ ನಡೆದ 496 ವರ್ಷಗಳ ಹೋರಾಟದ ರೋಚಕ ಹಾದಿ…

Struggling path of the 496-year struggle for the birth of Ram Mandir

ಮೊಘಲ್ ಸಾಮ್ರಾಜ್ಯದ (Mughal Empire) ಸಂಸ್ಥಾಪಕ ಬಾಬರ್ 1528ರಲ್ಲಿ (Babar) ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು (Ayodhya Ram Mandir) ಸಂಪೂರ್ಣ ಧ್ವಂಸ ಮಾಡುವಂತೆ ತನ್ನ ದಂಡ ನಾಯಕ ಮೀರ್ ಬಾಕಿಗೆ (mir baqi) ಆದೇಶ ನೀಡಿದ. ಆ ಜಾಗದಲ್ಲಿ ಮಸೀದಿ ನಿರ್ಮಿಸು. ಇನ್ನೆಂದೂ ಅಲ್ಲಿ ಹಿಂದೂಗಳ ಉತ್ಸವ, ಪೂಜೆ-ಭಜನೆಗಳು ನಡೆಯದಿರಲಿ. ಬದಲಾಗಿ ಅಲ್ಲಿ ಇಸ್ಲಾಂ ವಿಜ್ರಂಭಿಸಲಿ ಎಂದೂ ಆಜ್ಞಾಪಿಸಿದ. ಬಾಬರನ ಆದೇಶದಂತೆ ಮೀರ್‌ ಬಾಕಿ ರಾಮ ಮಂದಿರವನ್ನು ನೆಲಸಮ ಮಾಡಿದ. ಆನಂತರದ ಸುದೀರ್ಘ ಬೆಳವಣಿಗೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.

-ಮೊದಲ ಬಾರಿ 1850ರಲ್ಲಿ ಹಿಂದೂಗಳು ಈ ಕಟ್ಟಡವನ್ನು ಮರುವಶಪಡಿಸಿಕೊಳ್ಳಲು ಯತ್ನಿಸಿದರು. ಆಗ ಸ್ಥಳೀಯ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮು ಗಲಭೆ ಉಲ್ಬಣಿಸಿ ಅಪಾರ ಸಾವು ನೋವು ಉಂಟಾಯಿತು.

-1853ರಲ್ಲಿ ಮತ್ತೊಮ್ಮೆ ಸಂಘರ್ಷ ನಡೆಯಿತು. ಮುಂದೆ 1859ರಲ್ಲಿ ಬ್ರಿಟಿಷರು ಹಿಂದೂ-ಮುಸ್ಲಿಂ ಘರ್ಷಣೆ ತಪ್ಪಿಸಲು ಆ ಕಟ್ಟಡಕ್ಕೆ ಬೇಲಿ ಹಾಕಿದರು. ಕಟ್ಟಡದೊಳಗೆ ಮುಸ್ಲಿಮರು ಪ್ರಾರ್ಥನೆ ಮಾಡಲು ಅವಕಾಶ ನೀಡಿದರು. ಆದರೆ ಕಟ್ಟಡದ ಹೊರಗೆ ಹಿಂದೂಗಳು ಉತ್ಸವ ನಡೆಸಬಹುದು ಎಂಬ ಆದೇಶ ಹೊರಬಿತ್ತು.

-1885ರಲ್ಲಿ ಹಿಂದೂಗಳು ಮೊದಲ ಬಾರಿ ನ್ಯಾಯಾಲಯದ ಮೊರೆ ಹೋದರು. ಮಹಂತ ರಘುಬೀರ್‌ ದಾಸ್‌ ಅವರು ರಾಮನ ಗುಡಿ ಕಟ್ಟಲು ಅನುಮತಿ ನೀಡುವಂತೆ ಫೈಜಾಬಾದ್‌ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ಅವರ ಕೋರಿಕೆ ತಿರಸ್ಕೃತವಾಯಿತು. ‌

Supreme Court

ಮಧ್ಯರಾತ್ರಿ ರಾಮಲಲ್ಲಾ ಪ್ರತ್ಯಕ್ಷ!

1949ರ ಡಿ. 22ರ ಮಧ್ಯರಾತ್ರಿ ರಾಮಲಲ್ಲಾನ (ಬಾಲ ರಾಮ) ವಿಗ್ರಹ ವಿವಾದಿತ ಕಟ್ಟಡದಲ್ಲಿ ಪ್ರತ್ಯಕ್ಷವಾಯಿತು! ಇದು ಪವಾಡ, ಶ್ರೀ ರಾಮ ಮತ್ತೆ ಇಲ್ಲಿ ಪ್ರತ್ಯಕ್ಷನಾಗಿದ್ದಾನೆ ಎಂದು ಹಿಂದೂಗಳು ವಾದಿಸಿದರೆ, ಇದೊಂದು ಯೋಜಿತ ಪಿತೂರಿ ಎಂದು ಸ್ಥಳೀಯ ಮುಸ್ಲಿಮರು ವಾದಿಸಿದರು.

ಪ್ರಧಾನಿ, ಮುಖ್ಯಮಂತ್ರಿಯ ಆದೇಶ ಧಿಕ್ಕರಿಸಿದ ಜಿಲ್ಲಾಧಿಕಾರಿ!

ವಿವಾದಿತ ಕಟ್ಟಡದೊಳಗಿನ ರಾಮನ ವಿಗ್ರಹ ತೆರವುಗೊಳಿಸಬೇಕೆಂಬ ಪ್ರಧಾನಿ ನೆಹರೂ ಮತ್ತು ಆಗಿನ ಮುಖ್ಯಮಂತ್ರಿ ಗೋವಿಂದ್‌ ವಲ್ಲಭ್‌ ಪಂತ್‌ ಆದೇಶವನ್ನು ಜಿಲ್ಲಾಧಿಕಾರಿ ಕೆ ಕೆ ನಾಯರ್‌ ಸಾರಾಸಗಟಾಗಿ ತಿರಸ್ಕರಿಸಿದರು! ಹಾಗಾಗಿ ರಾಮಲಲ್ಲಾ ವಿಗ್ರಹ ಅಲ್ಲಿಯೇ ಉಳಿಯಿತು.

-1959ರಲ್ಲಿ ನಿರ್ಮೋಹಿ ಅಖಾರ, ಈ ಸ್ಥಳ ತನ್ನ ವಶಕ್ಕೆ ನೀಡುವಂತೆ ದಾವೆ ಹೂಡಿತು. ಈ ಮೂಲಕ ರಾಮ ಮಂದಿರಕ್ಕೆ ಸಂಬಂಧಿಸಿ ಮೂರನೇ ದಾವೆ ದಾಖಲಾಯಿತು. 1961ರಲ್ಲಿ ಸುನ್ನಿ ಸೆಂಟ್ರಲ್‌ ಬೋರ್ಡ್‌ ಆಫ್‌ ವಕ್ಫ್‌ ಆ ಕಟ್ಟಡ ಮತ್ತು ಸುತ್ತಲಿನ ಜಾಗವನ್ನು ತನ್ನ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

ವಿಶ್ವ ಹಿಂದೂ ಪರಿಷತ್‌ ಸ್ಥಾಪನೆ

1964ರಲ್ಲಿ ಆರ್‌ಎಸ್‌ಎಸ್‌ ನಾಯಕರಾದ ಎಂ ಎಸ್‌ ಗೋಳ್ವಾಳ್ಕರ್‌, ಎಸ್‌ ಎಸ್‌ ಅಪ್ಟೆ ಮತ್ತಿತರರು ವಿಶ್ವ ಹಿಂದೂ ಪರಿಷತ್‌ ಸ್ಥಾಪಿಸಿದರು. ಈ ಸಂಘಟನೆ ರಾಮ ಮಂದಿರದ ಕಡೆ ಹೆಚ್ಚು ಗಮನ ಹರಿಸತೊಡಗಿತು.
1984ರಲ್ಲಿ ವಿಶ್ವ ಹಿಂದೂ ಪರಿಷತ್‌ ರಾಮ ಮಂದಿರ ನಿರ್ಮಾಣ ಸಮಿತಿ ಸ್ಥಾಪಿಸಿತು. ಈ ಮೂಲಕ ಅಯೋಧ್ಯೆ ಆಂದೋಲನ ಮತ್ತೊಂದು ಮಜಲು ಪ್ರವೇಶಿಸಿತು.

ಧರ್ಮ ಸಂಸದ್‌

ದೆಹಲಿಯ ವಿಜ್ಞಾನ ಭವನದಲ್ಲಿ ಏ.7 ಮತ್ತು 8ರಂದು ವಿಶ್ವ ಹಿಂದೂ ಪರಿಷತ್‌ ಧರ್ಮ ಸಂಸದ್‌ ಆಯೋಜಿಸಿತು. ಇಲ್ಲಿ ಪೇಜಾವರ ಶ್ರೀ ಸೇರಿದಂತೆ ಸುಮಾರು 500 ಸಾಧು ಸಂತರು ಭಾಗವಹಿಸಿದ್ದರು.

ರಾಜೀವ್‌ ಗಾಂಧಿ ಅವಧಿಯಲ್ಲಿ ಗೇಟ್‌ ಓಪನ್‌!

1986ರಲ್ಲಿ ಮಹತ್ವದ ನಿರ್ಣಯ ಪ್ರಕಟಿಸಿದ ಫೈಜಾಬಾದ್‌ ಜಿಲ್ಲಾ ನ್ಯಾಯಾಲಯ, ವಿವಾದಿತ ಕಟ್ಟಡದ ಗೇಟ್‌ ತೆಗೆದು ಭಕ್ತರು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಈ ತೀರ್ಪಿನ ಹಿಂದೆ ಮುಸ್ಲಿಂ ವಿಚ್ಛೇದಿತ ಮಹಿಳೆ ಶಾ ಬಾನೊ ಪ್ರಕರಣ ಮತ್ತು ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆಯ ಪಾತ್ರ ಇರುವುದು ಚರ್ಚಿತವಾಯಿತು.

ಅಯೋಧ್ಯೆಯಲ್ಲಿ ಶಿಲಾನ್ಯಾಸ

ನವೆಂಬರ್‌ 9, 1989 ಅಯೋಧ್ಯೆ ಆಂದೋಲನದ ಚರಿತ್ರೆಯಲ್ಲಿ ಮತ್ತೊಂದು ಮಹತ್ವದ ದಿನ. ದೇಶದ 2 ಲಕ್ಷ ಗ್ರಾಮಗಳಲ್ಲಿ ಶ್ರೀ ರಾಮ್‌ ಎಂದು ಬರೆಯಲಾಗಿದ್ದ ಇಟ್ಟಿಗೆಗಳನ್ನು ಪೂಜಿಸಿ ಸಂಗ್ರಹಿಸಲಾಯಿತು. ಆಗ ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರಕಾರವಿತ್ತು. ಉತ್ತರ ಪ್ರದೇಶದಲ್ಲಿ ನಾರಾಯಣ್‌ ದತ್ತ ತಿವಾರಿ ನೇತೃತ್ವದ ಕಾಂಗ್ರೆಸ್‌ ಸರಕಾರವಿತ್ತು. ನವೆಂಬರ್‌ 9ರಂದು ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿತು.

ಹೈಕೋರ್ಟ್‌ ಮೊರೆ ಹೋದ ರಾಮನ ಮಿತ್ರ!

1989ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದೇವಕಿ ನಂದನ್‌ ಅಗರವಾಲ್‌ ಅವರು ರಾಮಲಲ್ಲಾನ ಪರವಾಗಿ, ರಾಮನ ಹೆಸರಲ್ಲೇ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು.

ಎಲ್‌ ಕೆ ಆಡ್ವಾಣಿ ಐತಿಹಾಸಿಕ ರಥ ಯಾತ್ರೆ

1990ರಲ್ಲಿ ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಆಡ್ವಾಣಿ ಅವರು ಆರಂಭಿಸಿದ್ದ ರಾಮ ರಥ ಯಾತ್ರೆ ಅಯೋಧ್ಯೆ ಚಳವಳಿಗೆ ಮಾತ್ರವಲ್ಲ, ಭಾರತದ ರಾಜಕೀಯ ಚರಿತ್ರೆಗೇ ಹೊಸ ತಿರುವು ನೀಡಿತು. ಆಡ್ವಾಣಿಯವರು ಸೆ.25ರಿಂದ ಅ.30ರವರೆಗೆ ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೆ ರಥ ಯಾತ್ರೆ ಆಯೋಜಿಸಿದರು. ಆದರೆ ಬಿಹಾರ ಸಮಷ್ಟಿಪುರದಲ್ಲಿ ಅ. 24ರಂದು ಅಂದಿನ ಜನತಾ ದಳದ ಲಾಲು ಪ್ರಸಾದ್‌ ಯಾದವ್‌ ಸರಕಾರ ಆಡ್ವಾಣಿಯವರನ್ನು ಬಂಧಿಸಿತು. ಈ ಮೂಲಕ ಯಾತ್ರೆ ಅಪೂರ್ಣವಾಯಿತು. ಆದರೆ ದೇಶಾದ್ಯಂತ ಸಂಚಲನ ಸೃಷ್ಟಿಸಲು ಯಶಸ್ವಿಯಾಯಿತು. ಇದರ ಪರಿಣಾಮವಾಗಿ ಕೇಂದ್ರದ ವಿ ಪಿ ಸಿಂಗ್‌ ಸರಕಾರ ಉರುಳಿತು.

Supreme Court

ಕರ ಸೇವಕರ ಮಾರಣ ಹೋಮ

1990 ಅಕ್ಟೋಬರ್‌ 30ರ ಕರಸೇವೆಗೆ ದೇಶದ ಮೂಲೆಮೂಲೆಗಳಿಂದ ಸುಮಾರು 2 ಲಕ್ಷ ಮಂದಿ ಅಯೋಧ್ಯೆಯತ್ತ ಹೆಜ್ಜೆ ಹಾಕಿದ್ದರು. ಆದರೆ ಅಂದಿನ ಸಿಎಂ ಮುಲಾಯಂ ಸಿಂಗ್‌ ಯಾದವ್‌ ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದರು. ಇದರ ಪರಿಣಾಮ 85ಕ್ಕೂ ಹೆಚ್ಚು ಕರಸೇವಕರು ಬರ್ಬರವಾಗಿ ಕೊಲ್ಲಲ್ಪಟ್ಟರು.

ವಿವಾದಾತ್ಮಕ ಕಟ್ಟಡ ಧ್ವಂಸ

1992ರ ಡಿಸೆಂಬರ್‌ 6ರಂದು ಬೃಹತ್‌ ಕರ ಸೇವೆಗೆ ವಿಶ್ವ ಹಿಂದೂ ಪರಿಷತ್‌ ಕರೆ ನೀಡಿತ್ತು. ಆಗ ಉತ್ತರ ಪ್ರದೇಶದಲ್ಲಿ ಕಲ್ಯಾಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರಕಾರವೇ ಅಸ್ತಿತ್ವದಲ್ಲಿ ಇದ್ದಿದ್ದರಿಂದ ಯಾವುದೇ ಅಡೆತಡೆಗಳಿರಲಿಲ್ಲ. ಅಂದು ಸುಮಾರು ಮೂರೂವರೆ ಲಕ್ಷ ಕರ ಸೇವಕರು ಅಯೋಧ್ಯೆಯಲ್ಲಿ ಸೇರಿದ್ದರು. ಕೆಲವೇ ಗಂಟೆಗಳಲ್ಲಿ ಬಾಬರಿ ಕಟ್ಟಡದ ಮೂರೂ ಗುಮ್ಮಟಗಳನ್ನು ಉರುಳಿಸಲಾಯಿತು. ಈ ಘಟನೆಯ ಬೆನ್ನಿಗೇ ದೇಶದ ವಿವಿಧ ಭಾಗಗಳಲ್ಲಿ ಹಿಂದೂ-ಮುಸ್ಲಿಂ ಗಲಭೆ ವ್ಯಾಪಿಸಿ ಸುಮಾರು 2000 ಮಂದಿ ಬಲಿಯಾದರು.

ಮತ್ತೆ ಮುಂದುವರಿಯಿತು ಕಾನೂನು ಹೋರಾಟ

1992ರ ಡಿಸೆಂಬರ್‌ 16ರಂದು, ಬಾಬರಿ ಕಟ್ಟಡ ಧ್ವಂಸ ಪ್ರಕರಣದ ತನಿಖೆ ನಡೆಸಲು ಕೇಂದ್ರದ ಅಂದಿನ ಪಿ ವಿ ನರಸಿಂಹ್‌ ರಾವ್‌ ಸರಕಾರ ಲಿಬರ್ಹಾನ್‌ ಆಯೋಗ ರಚಿಸಿತು.

-2002ರಲ್ಲಿ ಅಲಹಾಬಾದ್‌ ಹೈಕೋರ್ಟ್‌, ವಿವಾದಿತ ಕಟ್ಟಡ ಆವರಣದಲ್ಲಿ ಉತ್ಖನನ ನಡೆಸುವಂತೆ ಪುರಾತತ್ವ ಇಲಾಖೆಗೆ ಸೂಚಿಸಿತು.
-2003ರಲ್ಲಿ ಪುರಾತತ್ವ ಇಲಾಖೆ, ಬಾಬರಿ ಕಟ್ಟಡದ ಕೆಳಗೆ ದೇವಸ್ಥಾನ ಇರುವುದಕ್ಕೆ ಕುರುಹುಗಳಿವೆ ಎಂದು ವರದಿ ನೀಡಿತು.

ಗೋಧ್ರಾದಲ್ಲಿ ಕರಸೇವಕರ ಹತ್ಯಾಕಾಂಡ

2002, ಫೆಬ್ರುವರಿ 27ರ ಈ ದಿನ ಕರಾಳ ದಿನ. ಅಯೋಧ್ಯೆಯಿಂದ ಹಿಂತಿರಗುತ್ತಿದ್ದ ಕರಸೇವಕರಿದ್ದ ರೈಲ್ವೆ ಬೋಗಿಗೆ ಗುಜರಾತ್‌ನ ಗೋಧ್ರಾದಲ್ಲಿ ಬೆಂಕಿ ಹಚ್ಚಲಾಯಿತು. 59 ಕರಸೇವಕರು ಜೀವಂತ ದಹನಗೊಂಡರು. ಹಿಂದೂಗಳ ಪ್ರತಿಕಾರಕ್ಕೆ ಸುಮಾರು ಮೂರು ತಿಂಗಳ ಕಾಲ ಗುಜರಾತ್‌ ಹೊತ್ತಿ ಉರಿಯಿತು.

ಈ ಸುದ್ದಿಯನ್ನೂ ಓದಿ: Ram Mandir: ಅಯೋಧ್ಯೆಗೆ ತೆರಳಿದ ಸೂಪರ್‌ ಸ್ಟಾರ್‌ ರಜನಿಕಾಂತ್‌, ಧನುಷ್‌, ಪವನ್‌ ಕಲ್ಯಾಣ್‌!

2005ರಲ್ಲಿ ಭಯೋತ್ಪಾದಕ ದಾಳಿ, ಐವರು ಉಗ್ರರ ಹತ್ಯೆ

2005ರ ಜುಲೈ 5ರಂದು ಅಯೋಧ್ಯೆಯಲ್ಲಿ ಪಾಕಿಸ್ತಾನ ಮೂಲಕ ಜೈಷೆ ಎ ಮೊಹಮ್ಮದ್‌ ಸಂಘಟನೆಯ ಐವರು ಉಗ್ರರು ದಾಳಿ ಮಾಡಿದರು. ಇಬ್ಬರು ಸ್ಥಳೀಯರು ಮೃತಪಟ್ಟರು. 7 ಪೊಲೀಸ್‌ ಸಿಬ್ಬಂದಿ ಗಾಯಗೊಂಡರು. ಆದರೆ ಭದ್ರತಾ ಪಡೆಗಳು ಎಲ್ಲ ಐವರು ಉಗ್ರರನ್ನು ಹೊಡೆದುರುಳಿಸಿದರು.

17 ವರ್ಷಗಳ ಬಳಿಕ ಲಿಬರ್ಹಾನ್‌ ಆಯೋಗದ ವರದಿ:

28 ಬಾರಿ ವಿಸ್ತರಣೆಯ ಬಳಿಕ 2009ರಲ್ಲಿ ಲಿಬರ್ಹಾನ್‌ ಆಯೋಗ ವರದಿ ನೀಡಿತು. ಮನಮೋಹನ್‌ ಸಿಂಗ್‌ ನೇತೃತ್ವದ ಸರಕಾರ ಈ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿತು.

ಮೂರೂ ದಾವೆದಾರರಿಗೆ ಸಮಪಾಲು ಹಂಚಿದ ಹೈಕೋರ್ಟ್

2010ರ ಸೆ.30ರಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿತು. ವಿವಾದಿತ 2.77 ಎಕರೆ ಪ್ರದೇಶದಲ್ಲಿ 1/3ರಷ್ಟು ಜಾಗ ರಾಮ್‌ಲಲ್ಲಾನನ್ನು ಪ್ರತಿನಿಧಿಸುವ ಹಿಂದೂ ಮಹಾ ಸಭಾಗೆ, 1/3ರಷ್ಟು ಸುನ್ನಿ ಮಂಡಳಿಗೆ ಮತ್ತು 1/3ರಷ್ಟು ನಿರ್ಮೋಹಿ ಅಖಾರಕ್ಕೆ ವಿಂಗಡಿಸಿ ಹಂಚಿತು. ಆದರೆ ಈ ಮೂರೂ ದಾವೆದಾರರು ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದರು. 2011ರ ಮೇ 9ರಂದು ಸುಪ್ರೀಂ ಕೋರ್ಟ್‌ ಅಲಹಾಬಾದ್‌ ತೀರ್ಪಿಗೆ ತಡೆ ನೀಡಿತು. ಯಥಾಸ್ಥಿತಿ ಕಾಪಾಡುವಂತೆ ಹೇಳಿತು.

ಸಂಧಾನ ಸೂತ್ರಕ್ಕೆ ಸುಪ್ರೀಂ ಸಮಿತಿ

2019ರಲ್ಲಿ ಸುಪ್ರೀಂ ಕೋರ್ಟ್‌, ನ್ಯಾಯಾಲಯದ ಹೊರಗೆ ಸಂಧಾನ ಸೂತ್ರ ಸೂಕ್ತ ಎಂದು ಅಭಿಪ್ರಾಯಪಟ್ಟು ಮಧ್ಯಸ್ಥಿಕೆದಾರರ ಸಮಿತಿ ರಚಿಸಿ, 8 ವಾರದೊಳಗೆ ವರದಿ ನೀಡಲು ಸೂಚಿಸಿತು. ನಿಗದಿತ ಅವಧಿಯೊಳಗೆ ಮಧ್ಯಸ್ಥಿಕೆದಾರರ ಸಮಿತಿ ವರದಿ ನೀಡಿತು. ಆದರೆ ಇದು ಸುಪ್ರೀಂ ಕೋರ್ಟ್‌ಗೆ ತೃಪ್ತಿ ತರಲಿಲ್ಲ. ಈ ಸಂಧಾನ ಸೂತ್ರ ಜಾರಿಗೆ ಯೋಗ್ಯವಲ್ಲ ಎಂದ ಸುಪ್ರೀಂಕೋರ್ಟ್‌, 2019ರ ಆ.6ರಿಂದ ನಿತ್ಯ ವಿಚಾರಣೆ ಆರಂಭಿಸಿತು.

ಅಂತಿಮ ತೀರ್ಪು ಶ್ರೀರಾಮನ ಪರ

2019ರ ನವೆಂಬರ್‌ 9ರಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್‌, ಕಟ್ಟಡವೂ ಸೇರಿದಂತೆ ವಿವಾದಿತ ಎಲ್ಲ 2.77 ಎಕರೆ ಪ್ರದೇಶ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಿತು. ಆದರೆ ಈ ಭೂಮಿಯ ಹೊರಗೆ 5 ಎಕರೆ ಪ್ರದೇಶವನ್ನು ಮಸೀದಿ ನಿರ್ಮಿಸಲು ಮುಸ್ಲಿಮರಿಗೆ ನೀಡಬೇಕು ಎಂದೂ ಸೂಚಿಸಿತು. ಈ ಮೂಲಕ ರಾಮ ಜನ್ಮ ಭೂಮಿಯ ಸುದೀರ್ಘ ಕಾನೂನು ಸಂಘರ್ಷ ಕೊನೆಗೊಂಡಿತು.

ಈ ಸುದ್ದಿಯನ್ನೂ ಓದಿ: Ram Mandir: 9,999 ವಜ್ರಗಳನ್ನು ಬಳಸಿ ರಾಮ ಮಂದಿರ ಪ್ರತಿಕೃತಿ ನಿರ್ಮಾಣ!

Exit mobile version