ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೇಶದ ರಾಜಧಾನಿ ನವ ದೆಹಲಿಯಲ್ಲಿಯೂ ಅಂದು ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಜನವರಿ 22ರ ಕಾರ್ಯಕ್ರಮಗಳಿಗಾಗಿ ಮದುವೆ ವಾಲಗ, ಬ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
1,500ಕ್ಕೂ ಹೆಚ್ಚು ಕಾರ್ಯಕ್ರಮಗಳು ನಿಗದಿ
ದೆಹಲಿಯಲ್ಲಿ ಪ್ರಾಣ ಪ್ರತಿಷ್ಠೆ ದಿನ 1,500ಕ್ಕೂ ಕಾರ್ಯಕ್ರಮಗಳು ನಿಗದಿಯಾಗಿವೆ. ದೇಗುಲಗಳು, ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿವೆ ಎಂದು ಛೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿಯ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ. “‘ಸುಂದರ್ ಕಾಂಡ್’ ಮತ್ತು ‘ಧಾರ್ಮಿಕ್ ಪತ್’ ಪ್ರದರ್ಶಿಸುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ” ಎಂದು ಗೋಯಲ್ ಹೇಳಿದ್ದಾರೆ.
ಪ್ರತಿಷ್ಠಾಪನಾ ಸಮಾರಂಭ ಮತ್ತು ವಿವಾಹ ಋತು ಏಕಕಾಲಕ್ಕೆ ನಡೆಯುತ್ತಿರುವುದು ಕೂಡ ಬ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಲು ಇನ್ನೊಂದು ಕಾರಣ. ಇದು ಎಷ್ಟರ ಮಟ್ಟಿಗೆ ಎಂದರೆ ಸಾಮರ್ಥ್ಯಕ್ಕಿಂತ ಅಧಿಕ ಬುಕ್ಕಿಂಗ್ ನಡೆಯುತ್ತಿದೆ. ಬ್ಯಾಂಡ್ ಗ್ರೂಪ್‌ಗಳು ಬೇಡಿಕೆ ಈಡೇರಿಸಲು ಹೈರಾಣಾಗಿವೆ ಎಂದು ಮೂಲಗಳು ತಿಳಿಸಿವೆ.
“ಈ ವರ್ಷ ‘ರಾಮ್ ಭಾರತ್ʼ ಕೈಗೊಂಡ ಕಾರಣ ಡೋಲು, ಬ್ಯಾಂಡ್‌ಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿದೆ. ಬೇಡಿಕೆ ಪೂರೈಸಲು ನಾವು ಈಗ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಕೆಲಸ ಪ್ರಾರಂಭಿಸುತ್ತಿದ್ದೇವೆ. ಸಣ್ಣ ಮತ್ತು ದೊಡ್ಡ ಬ್ಯಾಂಡ್‌ಗಳೂ ವ್ಯಾಪಕ ತಯಾರಿ ನಡೆಸುತ್ತಿವೆ” ಎಂದು ಜೀಯಾ ಬ್ಯಾಂಡ್ ಮಾಲಕ ಸತ್ಯ ಅನಿಲ್ ತಡಾನಿ ಹೇಳಿದ್ದಾರೆ.
ಪ್ರಾಣ ಪ್ರತಿಷ್ಠಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿರುವ ಹಿನ್ನೆಲೆಯಲ್ಲಿ ಮದುವೆಯ ಹಾಡುಗಳನ್ನು ಹಾಡುತ್ತಿದ್ದ ಬ್ಯಾಂಡ್ ಸದಸ್ಯರು ಈಗ ಭಗವಾನ್ ರಾಮನಿಗೆ ಸಮರ್ಪಿತವಾದ ಭಕ್ತಿಗೀತೆಗಳನ್ನು ಸಿದ್ಧಪಡಿಸುತ್ತಿದ್ದಾರೆ.
“ನಾವು ದಿನವಿಡೀ ವಿಶೇಷ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದೇವೆ. ಆರತಿ ಸಮಯದಲ್ಲಿ ಜನಪ್ರಿಯ ಭಜನೆ ‘ರಾಮ್ ಆಯೆಂಗೆ ತೋ ಜ್ಞಾನ ಸಜೌಂಗಿ’ ಮತ್ತು ವಿಶೇಷ ಧೋಲ್ ಬೀಟ್‌ಗಳನ್ನು ನುಡಿಸಲು ತಯಾರಿ ನಡೆಸುತ್ತಿದ್ದೇವೆ” ಎಂದು ಬ್ಯಾಂಡ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ. ಅಂದು ಬ್ಯಾಂಡ್ ಸದಸ್ಯರು ಕೇಸರಿ ಬಣ್ಣದ ವಿಶೇಷ ಸಮವಸ್ತ್ರ ಧರಿಸಲಿದ್ದಾರೆ.
ಇದನ್ನೂ ಓದಿ: Ram Mandir: ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ; ಹವನ ಸೇರಿ ಇಂದಿನ ವಿಧಿವಿಧಾನ ಏನೇನು?
ಜ. 22ರಂದು ಹೆರಿಗೆ ಮಾಡಿಸುವಂತೆ ಹೆಚ್ಚಿದ ಬೇಡಿಕೆ
ಈ ಮಧ್ಯೆ ಪ್ರಾಣ ಪ್ರತಿಷ್ಠೆ ದಿನವಾದ ಜ. 22ರಂದೇ ಹೆರಿಗೆ ಮಾಡಿಸುವಂತೆ ಗರ್ಭಿಣಿಯರು ಮನವಿ ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶಾದ್ಯಂತ ಈ ಬೆಳವಣಿಗೆ ಕಂಡು ಬಂದಿದೆ. ಜನವರಿ 22ರಂದು ಸಿಸೇರಿಯನ್ ಮಾಡುವಂತೆ ಹಲವರು ಅಯೋಧ್ಯೆಯ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ದಂಬಾಲು ಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಈ ಬೇಡಿಕೆ ಹೆಚ್ಚುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ʼʼಎಲ್ಲ ಸಮಯದಲ್ಲಿ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ. ತಾಯಿ ಮತ್ತು ಮಗುವಿನ ವೈದ್ಯಕೀಯ ಸ್ಥಿತಿ, ಆರೋಗ್ಯವನ್ನು ಗಮನದಲ್ಲಿರಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆʼʼ ಎಂದು ತಜ್ಞರೊಬ್ಬರು ವಿವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ