Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಔಟ್!

Bigg Boss

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಒಟಿಟಿ ರಿಯಾಲಿಟಿ ಶೋ ಮುಗಿಯಲು ಕೇವಲ ಎರಡು ವಾರ ಬಾಕಿ ಇರುವಾಗಲೇ ಅಕ್ಷತಾ ಕುಕ್ಕಿ ಹಾಗೂ ಚೈತ್ರಾ ಹಳ್ಳಿಕೇರಿ ಎಲಿಮಿನೇಟ್‌ ಆಗಿದ್ದಾರೆ. ರಾಕೇಶ್‌ ಅಡಿಗ, ಸಾನ್ಯ, ಸೋನು ಗೌಡ, ಜಶ್ವಂತ್‌, ನಂದಿನಿ ಮತ್ತು ಜಯಶ್ರೀ ಈ ವಾರ ನಾಮಿನೇಟ್‌ ಆಗಿದ್ದರು. ಆದರೆ, ಕಡಿಮೆ ವೋಟ್‌ ಪಡೆದ ಕಾರಣ ಅಕ್ಷತಾ ಹಾಗೂ ಚೈತ್ರಾ ಎಲಿಮಿನೇಟ್‌ ಆಗಿದ್ದಾರೆ.

ಮಾಡೆಲ್​ ಆಗಿದ್ದ ಅಕ್ಷತಾ ಕುಕ್ಕಿ ಚಿತ್ರರಂಗದಲ್ಲೂ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೊದಲಿಗೆ ಫ್ಯಾಷನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾಗೆ ಸಿನಿಮಾ ಆಫರ್ ಕೂಡ ಬಂದು ಅದರಲ್ಲಿ ಯಶಸ್ಸು ಸಾಧಿಸಿದ್ದರು. ಸೈಡ್​ ಆ್ಯಕ್ಟರ್ ಆಗಿಯೂ ಇವರು ನಟಿಸಿದ್ದಾರೆ. ಆದರೆ, ಬಿಗ್‌ ಬಾಸ್‌ನಲ್ಲಿ ಇವರ ಬಗ್ಗೆ ಹಲವಾರು ನೆಗೆಟಿವ್‌ ಕಮೆಂಟ್‌ಗಳು ಸ್ಪರ್ಧಿಗಳಿಂದ ಕೇಳಿ ಬಂದಿದ್ದವು. ಅಕ್ಷತಾ ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಜಯಶ್ರೀ ಈ ಹಿಂದೆ ಹೇಳಿಕೊಂಡಿದ್ದರು.

ಅಕ್ಷತಾ ನನಗೆ ಸ್ವಲ್ಲವೂ ಇಷ್ಟವಿಲ್ಲ ಎಂದಿದ್ದ ಜಯಶ್ರೀ

ʻʻಅಕ್ಷತಾ ಮನೆಯ ಸದಸ್ಯರೊಂದಿಗೆ ನ್ಯೂಟ್ರಲ್‌ ಆಗುತ್ತಿದ್ದಾರೆ. ಎಲ್ಲರೊಂದಿಗೆ ಚೆನ್ನಾಗಿ ಇರಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ನಡೆ ಸರಿಯಲ್ಲ. ನನಗೆ ಆಕೆ ಕಂಡರೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದರೆ, ಚೈತ್ರಾ ನನಗೆ ತುಂಬಾ ಇಷ್ಟ. ಏಕೆಂದರೆ ಸ್ಪರ್ಧಿಗಳು ನನಗೆ ಟಾರ್ಗೆಟ್‌ ಮಾಡಿದರೂ ಅವರು ನನ್ನ ಜತೆ ಇರುತ್ತಾರೆ. ಒಂದು ವೇಳೆ ನಾನೂ ತಪ್ಪು ಮಾಡಿದರೂ ನನ್ನನ್ನು ವಹಿಸಿಕೊಂಡು ಮಾತನಾಡುತ್ತಾರೆ. ನಾನು ಫ್ರೆಂಡ್‌ಶಿಪ್‌ ಮಾಡಿಕೊಳ್ಳುವುದು ತುಂಬಾ ರೇರ್‌. ಆದರೆ, ಒಂದು ಸಲ ಒಬ್ಬರೊಂದಿಗೆ ಕ್ಲೋಸ್‌ ಆದೆನೆಂದರೆ, ಅವರನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲʼʼ ಎಂದು ಆರ್ಯವರ್ಧನ್‌ ಗುರೂಜಿ ಅವರೊಂದಿಗೆ ಹೇಳಿಕೊಂಡಿದ್ದರು.

ಫೇವರಿಟ್‌ ಆದರೂ ಚೈತ್ರಾಗೆ ಮುಳುವಾದ ವೋಟ್

ಬೆಳ್ಳಿತೆರೆಯಲ್ಲಿ ಮಿಂಚಿದ ಚೆಲುವೆ ಚೈತ್ರಾ ಹಳ್ಳಿಕೇರಿ ಅವರು ಕೆಲ ದಿನಗಳ ಹಿಂದೆ ವೈಯಕ್ತಿಕ ವಿಷಯವಾಗಿ ಒಂದಷ್ಟು ಚರ್ಚೆಯಲ್ಲಿದ್ದರು. ಆದರೆ, ಬಿಗ್‌ ಬಾಸ್‌ ಮನೆಯಲ್ಲಿ ಇವರು ಎಲ್ಲರಿಗೂ ಫೇವರಿಟ್‌ ಆಗಿದ್ದರು. ಮನೆಯಲ್ಲಿ ಸ್ಪರ್ಧಿಗಳು ಇವರನ್ನು ಅಕ್ಕ ಎಂದು ಕರೆಯುವಷ್ಟರ ಮಟ್ಟಿಗೆ ಪ್ರೀತಿ ಗಳಿಸಿದ್ದರು. ಸೋನು ಗೌಡ ಜತೆ ಆಗಾಗ ಜಗಳವಾಡಿದರೂ ಅದು “ಕೋಳಿ ಜಗಳ” ಎನಿಸಿತ್ತು. ಅಡುಗೆ ಮನೆಯಲ್ಲೂ ಚೈತ್ರಾ ತಮ್ಮ “ಕೈಚಳಕ” ತೋರಿಸಿದ್ದರು. ಅಷ್ಟೇ ಅಲ್ಲ, ಜಯಶ್ರೀ ಅವರು ಈ ಹಿಂದೆ “ಚೈತ್ರಾ ನನ್ನ ಬೆಸ್ಟ್‌‌ ಫ್ರೆಂಡ್” ಎಂದು ಹೇಳಿಕೊಂಡಿದ್ದರು. ಆದರೆ, ಕಡಿಮೆ ವೋಟ್‌ ಪಡೆದ ಕಾರಣ ಬಿಗ್‌ ಬಾಸ್‌ ಮನೆಯಿಂದ ಹೊರಬರುವಂತಾಗಿದೆ.

ಒಟ್ಟಿನಲ್ಲಿ ಒಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಿ, ಜನಮನ್ನಣೆಗೆ ಪಾತ್ರವಾಗಿರುವ ಬಿಗ್‌ ಬಾಸ್‌ ಶೋ ಮುಗಿಯಲು ದಿನಗಣನೆ ಆರಂಭವಾಗಿದ್ದು, ಜನರ ಕುತೂಹಲ ಹೆಚ್ಚಿಸಿದೆ. ಅಕ್ಷತಾ ಹಾಗೂ ಚೈತ್ರಾ ಅವರು ಹೊರಬಂದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರೂ ಮುಂದಿನ ದಿನಗಳಲ್ಲಿ ಯಾರು ಉಳಿಯಲಿದ್ದಾರೆ, ಯಾರು ಹೊರಬರಲಿದ್ದಾರೆ ಹಾಗೂ ಅಂತಿಮವಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸೋನು ಗೌಡರ ಟೊಮ್ಯಾಟೋ ಗೊಜ್ಜು!

Exit mobile version