Site icon Vistara News

BBK Season 10: ಡಬಲ್‌ ಶಾಕ್‌ ನೀಡಿದ ಬಿಗ್‌ ಬಾಸ್‌; ಭಾಗ್ಯಶ್ರೀಗೆ ಕೈಕೊಟ್ಟ ಅದೃಷ್ಟ

bhagya shree

bhagya shree

ಬೆಂಗಳೂರು: ದಿನ ಕಳೆದಂತೆ ಬಿಗ್ ಬಾಸ್ ಕನ್ನಡ ಸೀಸನ್‌ 10 (BBK Season 10) ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಟಿಆರ್‌ಪಿಯಲ್ಲೂ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಬಿಗ್‌ ಬಾಸ್‌ ಮನೆ ಮಂದಿಗೆ ಡಬಲ್‌ ಶಾಕ್‌ ಕೊಟ್ಟಿದ್ದಾರೆ. ಅಂದರೆ ಈ ವಾರ ಎರಡು ಎಲಿಮಿನೇಷನ್‌ ನಡೆಸಲಾಗಿದೆ. ಇಶಾನಿ (Eshani) ಬಳಿಕ ಇದೀಗ ಭಾಗ್ಯಶ್ರೀ ಕೂಡ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದಿದ್ದಾರೆ.

ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಈ ಬಾರಿ ವಾರಾಂತ್ಯದ ಮೊದಲ ಪಂಚಾಯಿತಿಯಲ್ಲೇ ಕಿಚ್ಚ ಸುದೀಪ್‌ ಎಲಿಮಿನೇಷನ್‌ನ ಶಾಕ್ ಕೊಟ್ಟಿದ್ದರು. ಕಳೆದ ವಾರ ವರ್ತೂರ್ ಸಂತೋಷ್‌ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್ ಇತ್ತು. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಮೊದಲೇ ಹೇಳಿದ್ದರು. ಇಶಾನಿ ಕಳಪೆ ಆಟದಿಂದ ಮೊದಲು ಔಟ್‌ ಆಗಿದ್ದರೆ, ಭಾನುವಾರ ಭಾಗ್ಯಶ್ರೀ ಅವರ ಆಟ ಅಂತ್ಯವಾಗಿದೆ.

ಈ ಹಿಂದೆ ಬಚಾವಾಗಿದ್ದ ಭಾಗ್ಯಶ್ರೀ

ಭಾಗ್ಯಶ್ರೀಗೆ ಶಾಕ್‌ ಎದುರಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅವರು ನಾಮಿನೇಟ್‌ ಆಗಿದ್ದರು. ದಸರಾ ಹಬ್ಬವಿದ್ದ ಕಾರಣ ಅವರು ಅಂದು ಬಚಾವಾಗಿದ್ದರು. ಬಳಿಕ ಎಚ್ಚೆತ್ತಿದ್ದ ಭಾಗ್ಯಶ್ರೀ ಉತ್ತಮ ಪ್ರದರ್ಶನ ನೀಡ ತೊಡಗಿದ್ದರು. ಆದರೆ ಇದೀಗ ಭಾಗ್ಯಶ್ರೀಯ ʼಭಾಗ್ಯʼ ಕೈ ಕೊಟ್ಟಿದೆ. ಈ ಹಿಂದೆ ವಿನಯ್ ಬಾಯಿಗೆ ಆಹಾರವಾಗಿದ್ದ ಭಾಗ್ಯಶ್ರೀ ಇತ್ತೀಚೆಗೆ ಸ್ನೇಹಿತ್‌ ಕೆಂಗಣ್ಣಿಗೂ ಗುರಿಯಾಗಿದ್ದರು. ಅವರು ಎಲ್ಲ ವಿಚಾರದಲ್ಲಿ ಮೂಗು ತೂರಿಸುತ್ತಾರೆ ಎಂದು ಸ್ನೇಹಿತ್‌ ಆರೋಪಿಸಿ ಕಳಪೆ ಪಟ್ಟ ನೀಡಿದ್ದರು. ಸ್ನೇಕ್ ಶ್ಯಾಮ್, ಗೌರೀಶ್‌ ಅಕ್ಕಿ, ರಕ್ಷಕ್, ಇಶಾನಿ ನಂತರ ಇದೀಗ ಭಾಗ್ಯಶ್ರೀ ತಮ್ಮ ಸ್ಪರ್ಧೆಯನ್ನು ಕೊನೆಗೊಳಿಸಿದ್ದಾರೆ.

BBK Season 10: ಆರನೇ ವಾರ ಬಿಗ್‌ ಬಾಸ್‌ ಮನೆಯಿಂದ ಇಶಾನಿ ಔಟ್‌

ಆಟ ಕೊನೆಗೊಳಿಸಿದ್ದ ರ‍್ಯಾಪರ್‌ ಇಶಾನಿ

ಈ ಹಿಂದಿನ ಎಲಿಮಿನೇಷನ್‌ನಲ್ಲಿ ರ‍್ಯಾಪರ್‌ ಇಶಾನಿ ಔಟ್‌ ಆಗಿದ್ದರು. ಉತ್ತಮವಾಗಿ ಆಡುತ್ತಿದ್ದ, ರ‍್ಯಾಪ್‌ ಸಾಂಗ್‌ಗಳ ಮೂಲಕವೇ ಮನಗೆದ್ದಿದ್ದ ಇಶಾನಿ ಆರನೇ ವಾರಕ್ಕೇ ಬಿಗ್‌ ಬಾಸ್‌ ಮನೆಯಲ್ಲಿ ಆಟ ನಿಲ್ಲಿಸಿದ್ದರು. ಎಲಿಮಿನೇಷನ್‌ ಬಾಣದಿಂದ ತಪ್ಪಿಸಿಕೊಳ್ಳಲು ಆಗದ ಇಶಾನಿ ದೊಡ್ಮನೆಯಿಂದ ಹೊರಬಂದಿದ್ದರು. ಶನಿವಾರದ ಎಪಿಸೋಡ್ ಕೊನೆಯಲ್ಲಿ, ಕಿಚ್ಚ, ʼ‘ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ʼ ಎಂದು ಹೇಳಿದರು. ಇಶಾನಿ ಎದ್ದು ನಿಂತುಕೊಂಡರು. ಕಿಚ್ಚ, ʼʼನಿಜ. ನಿಮ್ಮ ಪಯಣ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್ʼʼ ಎಂದು ಹೇಳಿದ್ದರು.

ಈ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದರು. ಭಾಗ್ಯಶ್ರೀ ಅವರನ್ನು ಮೈಕಲ್‌ ನೇರವಾಗಿ ನಾಮಿನೇಟ್‌ ಮಾಡಿದರೆ, ಉಳಿದವರು ಲುಡೋ ಗೇಮ್‌ನಿಂದಾಗಿ ನಾಮಿನೇಟ್‌ ಆದರು. ಲುಡೋ ಗೇಮ್‌ ಅನುಸಾರ ವಿನಯ್ ಗೌಡ, ಇಶಾನಿ, ನಮ್ರತಾ ಗೌಡ, ತನಿಷಾ ಕುಪ್ಪಂಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್ ಹಾಗೂ ನೀತು ನಾಮಿನೇಟ್ ಆಗಿದ್ದರು. 

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version