Site icon Vistara News

BBK SEASON 10: ಬಿಗ್‌ಬಾಸ್‌ ಮನೆಗೆ ರಕ್ಷಿತ್ ಶೆಟ್ಟಿ ಅವರನ್ನು ಕರೆಸಿ ಎಂದ ಸಂಗೀತಾ; ಉಳಿದವರ ಆಸೆ ಏನು?

big boss

big boss

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಹಲವು ವಿಶೇಷತೆಗಳೊಂದಿಗೆ ಆರಂಭವಾದ ಈ ಶೋ ಬಹುಬೇಗ ವೀಕ್ಷಕರನ್ನು ಸೆಳೆದು ಟಿಆರ್‌ಪಿಯಲ್ಲಿಯೂ ದಾಖಲೆ ಸೃಷ್ಟಿಸಿದೆ. ಈ ಕೊನೆಯ ಹಂತದಲ್ಲಿ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಒಂದು ಅಪರೂಪದ ಅವಕಾಶ ನೀಡಿದ್ದಾರೆ. ಅದರಂತೆ ಪ್ರತಿಯೊಬ್ಬ ಸದಸ್ಯರು ತಮ್ಮ ಆಸೆಗಳನ್ನು ಹೇಳಿಕೊಳ್ಳಬಹುದಾಗಿತ್ತು. ಹಾಗಾದರೆ ಯಾರು, ಯಾವ ಆಸೆಗಳನ್ನು ಹೇಳಿಕೊಂಡರು ಎನ್ನುವ ವಿವರ ಇಲ್ಲಿದೆ.

ಯಾರಿಗೆ ಯಾವ ಆಸೆ?

ಒಂದು ಬಾವಿಯನ್ನು ಬಿಗ್‌ಬಾಸ್‌ ನಿರ್ಮಿಸಿದ್ದರು. ಸ್ಪರ್ಧಿಗಳು ತಮ್ಮ ಐದು ಆಸೆಗಳನ್ನು ಹೇಳಿ ಕಾಯಿನ್ ಒಂದನ್ನು ಅದರ ಒಳಗೆ ಹಾಕಬೇಕು. ಡ್ರೋನ್‌ ಪ್ರತಾಪ್, ʼʼನಾನು ಇದುವರೆಗೆ ಮನೆಯ ಕ್ಯಾಪ್ಟನ್‌ ಆಗಿಲ್ಲ. ಹೀಗಾಗಿ ಐದು ನಿಮಿಷಕ್ಕಾದರೂ ಈ ಮನೆಯ ಕ್ಯಾಪ್ಟನ್ ಆಗಬೇಕುʼʼ ಎಂದು ಹೇಳಿಕೊಂಡರು. ಜತೆಗೆ ತಮ್ಮ ಡ್ರೋನ್ ಅನ್ನು ಬಿಗ್‌ಬಾಸ್‌ ಮನೆಗೆ ಕಳುಹಿಸಿ ಕೊಡಬೇಕು, ತಮ್ಮನ್ನು ಪ್ರೀತಿಸುವ ಇಷ್ಟಪಡುವ ಅಗಂತುಕ ವ್ಯಕ್ತಿಯೊಡನೆ ಒಮ್ಮೆ ಮಾತನಾಡಬೇಕು ಎಂದು ಹೇಳಿದರು.

ಇನ್ನು ಕಾರ್ತಿಕ್‌ ಅವರಿಗೆ ತಮ್ಮ ತಂಗಿಯ ಜತೆಗೆ ಮಾತನಾಡಬೇಕು ಎನಿಸಿದ್ದು, ಅದಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಅಲ್ಲದೆ ತಾವು ಕಲಿತ ಡೊಳ್ಳು ಕುಣಿತ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು ಎಂದು ಹೇಳಿದರು. ವರ್ತೂರು ಸಂತೋಷ್ ಮಾತನಾಡಿ ಹಳ್ಳಿಕಾರ್ ಹೋರಿಗಳನ್ನು ಮನೆಯೊಳಗೆ ಕರೆ ತರಲು ಕೋರಿದರು. ಹಳ್ಳಿಕಾರ್ ಟಿ-ಶರ್ಟ್ ಹಾಗೂ ಚೈನ್ ಅನ್ನು ಕೊಡಿ ಎಂದರು. ಜತೆಗೆ ಬಿಗ್​ಬಾಸ್ ಅನ್ನು ನೋಡಬೇಕೆಂಬ ಆಸೆ ವ್ಯಕ್ತಪಡಿಸಿದರೂ ಅದು ಅಸಾಧ್ಯ ಎಂಬ ಉತ್ತರ ಬಂತು.

ನಟರಾದ ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್‌ ಮನೆಗೆ ಬಂದರೆ ಖುಷಿಯಾಗುತ್ತದೆ ಎಂದವರು ಸಂಗೀತಾ ಶೃಂಗೇರಿ. ಇಲ್ಲಿಗೆ ಅವರ ಆಸೆ ಮುಗಿದಿಲ್ಲ. ʼʼನನ್ನ ಇಷ್ಟದ ನಟ ಯಶ್ ಅವರಿಂದ ಹಾಗೂ ರಾಧಿಕಾ ಪಂಡಿತ್ ಅವರಿಂದ ಒಂದು ಸಂದೇಶ ಬಂದರೆ ಇನ್ನಷ್ಟು ಸ್ಪೂರ್ತಿ ತುಂಬಿದಂತಾಗುತ್ತದೆ. ನನ್ನ ಅತ್ತಿಗೆಯೊಟ್ಟಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ, ಅವರನ್ನು ಕಳಿಸಿ ಹಾಗೂ ನಟಿ ಶ್ರುತಿ ಅವರಿಂದ ಟಿಪ್ಸ್‌ ತೆಗೆದುಕೊಳ್ಳುವ ಆಸೆಯಿದೆʼʼ ಎಂದು ಸಂಗೀತಾ ಹೇಳಿದರು.

ವಿನಯ್ ಮಾತನಾಡಿ, ʼʼಮನೆಯ ಎಲ್ಲ ಸದಸ್ಯರ ಮೀಮ್​ಗಳನ್ನು ಹಾಕಿ. ಒಂದು ಮೂವಿ ನೈಟ್ ಅರೇಂಜ್ ಮಾಡಿ ಸುದೀಪ್ ಅವರ ಯಾವುದಾದರೂ ಒಂದು ಸಿನಿಮಾ ತೋರಿಸಿ. ಗಿಚ್ಚಿ-ಗಿಲಿಗಿಲಿ ತಂಡವನ್ನು ಕರೆಸಿ ಕಾಮಿಡಿ ಸ್ಕಿಟ್ ಮಾಡಿಸಿ. ಫೈರ್ ಕ್ಯಾಂಪ್ ಒಂದನ್ನು ಮಾಡಿʼʼ ಎಂದು ಮನವಿ ಮಾಡಿದರು.

ಇದನ್ನೂ ಓದಿ: BBK SEASON 10: ಸ್ಪರ್ಧಿಗಳ ಉತ್ಸಾಹ ಹೆಚ್ಚಿಸೋಕೆ ಕಿಚ್ಚ ತಂದ್ರು ʻಬಿಗ್ ಬಾಸ್ ಕನ್ನಡʼ ಸೀಸನ್ 10ರ ಟ್ರೋಫಿ!

ತುಕಾಲಿ ಸಂತು ಕೂಡ ತಾವು ಕ್ಯಾಪ್ಟನ್ ಆಗಬೇಕು ಎಂದರು. ಅದರ ಬಳಿಕ ʼʼಉಂಡೆ ಕೋಳಿ ತಿನ್ನುವ ಆಸೆಯಾಗಿದೆ. ಮನೆಯ ಎಲ್ಲ ಸದಸ್ಯರು ಒಂದು ದಿನ ನನ್ನ ಮಾತನ್ನು ಕೇಳುವಂತೆ ಮಾಡಿ. ತಮಗೆ ಒಳ್ಳೆಯ ಬಟ್ಟೆಗಳನ್ನು ಧರಿಸಿ ಹೀರೋ ರೀತಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿದೆʼʼ ಎಂದು ಹೇಳಿಕೊಂಡರು. ಈ ಪೈಕಿ ಪ್ರತಾಪ್ ಹಾಗೂ ತುಕಾಲಿ ಸಂತು ಅವರನ್ನು ಕ್ಯಾಪ್ಟನ್ ಮಾಡಲು ಬಿಗ್​ಬಾಸ್ ಓಟಿಂಗ್ ಮಾಡಿಸಿದರು. ಆದರೆ ಇಬ್ಬರಿಗೂ ಸಮಾನವಾದ ಮತ ಸಿಕ್ಕಿದ್ದರಿಂದ ಇಬ್ಬರೂ ಕ್ಯಾಪ್ಟನ್ ಆಗಲು ಸಾಧ್ಯವಾಗಲಿಲ್ಲ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version