Site icon Vistara News

BBK SEASON 10: ಬಿಗ್‌ಬಾಸ್‌ ಮನೆಯೊಳಗೆ ಹಾರಿಬಂತು ಡ್ರೋನ್‌; ಹೆಮ್ಮೆಯಿಂದ ಬೀಗಿದ ಪ್ರತಾಪ್‌

drone

drone

ಬೆಂಗಳೂರು: ಒಂದಷ್ಟು ವಿಶೇಷತೆಗಳನ್ನು ಹೊತ್ತು ಬಂದ ಕನ್ನಡ ಬಿಗ್‌ಬಾಸ್‌ (BBK SEASON 10) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆರಂಭದಲೇ ಸ್ಪರ್ಧಿಗಳ ಜಗಳ, ವಿವಾದಗಳಿಂದ ಸದ್ದು ಮಾಡಿದ್ದ ಬಿಗ್‌ಬಾಸ್‌ ಹಲವರನ್ನು ಆಕರ್ಷಿಸಿತ್ತು. ಇದೀಗ ಬಿಗ್‌ಬಾಸ್‌ ಮನೆಯೊಳಗೆ ಡ್ರೋನ್‌ ಹಾರಿ ಬಂದಿದ್ದು, ʼʼಪ್ರತಾಪ್‌ ನಂದೇ ಡ್ರೋನ್‌ʼʼ ಎಂದು ಸಂತಸದಿಂದ ಕೂಗಿದ್ದಾರೆ.

ಈ ವಾರ ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳ ಕುಟುಂಬದ ಸದಸ್ಯರು ಆಗಮಿಸಿದ್ದರು. ಸುಮಾರು ಮೂರು ವರ್ಷಗಳ ಬಳಿಕ ಡ್ರೋನ್‌ ಪ್ರತಾಪ್‌ ತನ್ನ ತಂದೆ ತಾಯಿಯನ್ನು ಭೇಟಿ ಮಾಡಿದ್ದರು. ತಂದೆ-ತಾಯಿಯನ್ನು ನೋಡಿದ ಪ್ರತಾಪ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ಕೆಲ ಸಮಯ ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಹಗುರವಾಗಿದ್ದರು. ಪೋಷಕರೊಡನೆ ಪ್ರತಾಪ್​ ಸಮಾಗಮ ಕಂಡು ಸಂತಸಪಟ್ಟ ಉಳಿದ ಸದಸ್ಯರು ಪ್ರತಾಪ್​ಗೆ ಧೈರ್ಯ ತುಂಬಿ, ಪ್ರೋತ್ಸಾಹಿಸಿದ್ದರು.

ಈ ಮಧ್ಯೆ ಪ್ರತಾಪ್‌ಗೆ ಇನ್ನೊಂದು ಸರ್‌ಪ್ರೈಸ್‌ ಎದುರಾಗಿತ್ತು. ಮನೆಯೊಳಗೆ ಕುಳಿತಿದ್ದ ಪ್ರತಾಪ್‌ ಇದ್ದಕ್ಕಿದ್ದಂತೆ ʼʼನನ್ನದೇ ಡ್ರೋನ್‌ʼʼ ಎಂದು ಸಂತಸದಿಂದ ಕೂಗುತ್ತಾ ಎದ್ದು ನಿಂತರು. ಅವರ ಈ ಸಂತಸಕ್ಕೆ ಕಾರಣವಾಗಿದ್ದು ಬಿಗ್‌ಬಾಸ್‌ ಮನೆ ಮೇಲೆ ಸದ್ದು ಮಾಡುತ್ತಾ ಹಾರಿ ಬಂದ ಅವರದ್ದೇ ಡ್ರೋನ್‌. ಗೇಟ್‌ ಮೇಲಿನಿಂದ ಹಾರಿ ಬಂದ ಡ್ರೋನ್‌ ನೋಡಿದ ಪ್ರತಾಪ್‌ ಖುಷಿಯಿಂದ ಈ ವಿಚಾರವನ್ನು ಮನೆಮಂದಿಗೆಲ್ಲ ತಿಳಿಸಿದರು. ಮನೆಯ ಇತರ ಸ್ಪರ್ಧಿಗಳೂ ಪ್ರತಾಪ್‌ ಜತೆ ಈ ಸಂತಸದ ಕ್ಷಣವನ್ನು ಕಳೆದರು. ಎಲ್ಲರೂ ಅಂಗಳಕ್ಕೆ ಓಡಿ ಬಂದು ಡ್ರೋನ್‌ ಹಾರಾಟವನ್ನು ಕಣ್ತುಂಬಿಕೊಂಡರು. ʼʼಈ ಡ್ರೋನ್‌ ನಂದೇʼʼ ಎನ್ನುವಾಗ ಪ್ರತಾಪ್‌ ಧ್ವನಿಯಲ್ಲಿ ಮೂಡಿದ್ದ ಹೆಮ್ಮೆಯನ್ನು ಇತರ ಸ್ಪರ್ಧಿಗಳು ಗಮನಿಸಿ ತಾವು ಈ ಸಂತಸದ ಕ್ಷಣದಲ್ಲಿ ಭಾಗಿಯಾದರು.

ಪ್ರತಾಪ್‌ ಮದುವೆ ಮಾತು

ಪ್ರತಾಪ್​ ತಮ್ಮ ಪೋಷಕರನ್ನು ಮತ್ತೆ ಸೇರಿದ್ದು ಮನೆಯ ಸದಸ್ಯರನ್ನು ಭಾವುಕಗೊಳಿಸಿತು. ಈ ನಡುವೆ ಪ್ರತಾಪ್​ ಮದುವೆ ವಿಷಯವೂ ಮನೆಯಲ್ಲಿ ಚರ್ಚೆಯಾಯಿತು. ಮೊದಲು ಈ ವಿಚಾರವನ್ನು ಪ್ರಸ್ತಾಪಿಸಿದವರು ವರ್ತೂರು ಸಂತೋಷ್. ‘‘ಯಜಮಾನ್ರೆ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿʼʼ ಎಂದು ಪ್ರತಾಪ್‌ ತಂದೆ ಬಳಿ ಹೇಳಿದರು. ಅದಕ್ಕೆ ಪ್ರತಾಪ್​ ಅವರ ತಂದೆ ʼʼನನ್ನ ಅಭ್ಯಂತರವೇನೂ ಇಲ್ಲʼʼ ಎಂದು ಸಮ್ಮತಿ ಸೂಚಿಸಿದರು. ʼʼನಿಮ್ಮ ಊರಲ್ಲೇ ಒಂದು ಒಳ್ಳೆ ಹೆಣ್ಣು ನೋಡಪ್ಪʼʼ ಎಂದು ಪ್ರತಾಪ್‌ ತಂದೆ ಜವಾಬ್ದಾರಿಯನ್ನು ವರ್ತೂರು ಸಂತೋಷ್ ಹೆಗಲಿಗೆ ಹೊರಿಸಿದರು.

ಇದನ್ನೂ ಓದಿ: BBK SEASON 10: ವಿನಯ್ ಸ್ಟ್ರಾಟಜಿಗೆ ಸಂಗೀತಾ ಅಣ್ಣ ಜೈಕಾರ!

ಈ ಮಧ್ಯೆ ಬಳಿಕ ತುಕಾಲಿ ಸಂತು ಮಾತನಾಡಿ, ʼʼನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ. ನೀವು ಹೂ ಅನ್ನಿ ನಾನು ಮಾತಾಡ್ತೀನಿʼʼ ಎಂದರು. ʼʼಅಯ್ಯೋ ನಾವು ಹೂ ಅಂದರೆ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲʼʼ ಎನ್ನುವುದು ಪ್ರತಾಪ್‌ ತಂದೆಯ ಅನುಮಾನ. ಆಗ ತುಕಾಲಿ ಸಂತು, ʼʼನನ್ನ ಮಾತೇ ಅಂತಿಮ. ನಾನು ಮಾತನಾಡಿದರೆ ಮುಗಿದಂತೆʼʼ ಎಂದರು. ಆ ಮಾತಿಗೆ ಎಲ್ಲರೂ ಸೇರಿ ತುಕಾಲಿಯ ಕಾಲೆಳೆದರು. ಹೀಗೆ ಮನೆ ಮಂದಿಯೆಲ್ಲ ನಗು ನಗುತ್ತಾ ಒಂದಷ್ಟು ಹೊತ್ತು ಸಮಯ ಕಳೆದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version