ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10(BBK SEASON 10) 60 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಟಿಆರ್‌ಪಿಯಲ್ಲೂ ದಾಖಲೆ ನಿರ್ಮಿಸಿದೆ. ಶೋದ ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಡ್ರೋನ್ ಪ್ರತಾಪ್ ವಿರುದ್ಧ ಬಿಬಿಎಂಪಿ ನೋಡಲ್ ಅಧಿಕಾರಿಯಾಗಿದ್ದ ಡಾ. ಪ್ರಯಾಗ್ ಗಂಭೀರ ಆರೋಪ ಮಾಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ವಿಸ್ತಾರ ನ್ಯೂಸ್ ಜತೆ ಈ ಬಗ್ಗೆ ಅವರು ವಿಸ್ತೃತವಾಗಿ ಮಾತನಾಡಿ, ಪ್ರತಾಪ್ ಬಗೆಗಿನ ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಈ ಹಿಂದೆ ಪ್ರತಾಪ್ ಮಾತನಾಡಿ, ವಿವಾದದಲ್ಲಿ ಸಿಲುಕಿದಾಗ ಏನೆಲ್ಲ ಕಷ್ಟಗಳನ್ನು ಎದುರಿಸಿದೆ ಎಂದು ವಿವರಿಸಿದ್ದರು. ಮಾತಿನ ಮಧ್ಯೆ ಅಧಿಕಾರಿಗಳು ʻಮೆಂಟಲಿ ಅನ್‌ಸ್ಟೇಬಲ್ ಎಂದು ಬರೆದುಕೊಡು’ ಎಂದು ತಲ್ ತಲೆ ಮೇಲೆ ಹೊಡೆದರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ಬಗ್ಗೆ ಡಾ. ಪ್ರಯಾಗ್ ಮಾತನಾಡಿದ್ದಾರೆ.
ಡಾ. ಪ್ರಯಾಗ್ ಹೇಳಿದ್ದೇನು?
ಯುವ ವಿಜ್ಞಾನಿ ಎಂದೇ ತನ್ನನ್ನು ಕರೆದುಕೊಳ್ಳುವ ಪ್ರತಾಪ್ ಕೊರೊನಾ ಸಮಯದಲ್ಲಿ ಕ್ವಾರಂಟೈನ್ ನಿಯಮವನ್ನೂ ಮೀರಿ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಬಳಿಕ ಈ ಬಗ್ಗೆ ದೂರು ಬಂದು ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ, ಅದನ್ನು ತನಿಖೆ ನಡೆಸುವಂತೆ ನನಗೆ ಸೂಚನೆ ಬಂದಿತ್ತು. ಅದರ ಪರಿಶೀಲನೆಗಾಗಿ ಅವರು ಕೊಟ್ಟಿದ್ದ ವಿಳಾಸಕ್ಕೆ ಹೋದಾಗ ಮನೆಗೆ ಬೀಗ ಹಾಕಿತ್ತು. ಫೋನ್ ನಂಬರ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಎಫ್‌ಐಆರ್ ದಾಖಲಿಸಿದ್ದೆವು. ಅವರು ಸಂದರ್ಶನಕ್ಕೆ ಹಾಜರಾಗಿದ್ದ ಚಾನಲ್‌ಗೆ ಹೋಗಿ ವಿಚಾರಿಸಿದ್ದೆವು ಎಂದು ಡಾ. ಪ್ರಯಾಗ್ ವಿವರಿಸಿದ್ದಾರೆ.
ಬಳಿಕ ಎರಡು ತಂಡಗಳನ್ನು ರಚಿಸಿದ್ದೆವು. ಈ ಮಧ್ಯೆ ಪ್ರತಾಪ್ ಅವರ ಇನ್ನೊಂದು ನಂಬರ್ ಲಭಿಸಿತ್ತು. ಅದನ್ನು ಟ್ರ್ಯಾಕ್ ಮಾಡಲು ಆರಂಭಿಸಿದೆವು. ಅದರ ಪರಿಶೀಲನೆ ವೇಳೆ ಆತ ಚಿಕ್ಕಮಗಳೂರಿನಲ್ಲಿರುವುದು ಪತ್ತೆಯಾಗಿತ್ತು. ಬಳಿಕ ಯೋಜನೆ ರೂಪಿಸಿ ಅವರ ತಂದೆ-ತಾಯಿ ವಿಚಾರಿಸಿದರೆ ಸತ್ಯ ಹೊರಗೆ ಬರಬಹುದು ಅಂದುಕೊಂಡು ಅವರ ಊರು ನೆಟ್ಕಲ್‌ಗೆ ತೆರಳಿದ್ದವು. ತಂದೆಯ ಬಳಿ, ನಿಮ್ಮ ಮಗ ನಿಯಮ ಉಲ್ಲಂಘಿಸಿದ್ದಾನೆ. ಅವನನ್ನು ಕರೆಯಿಸಿ. ಕ್ವಾರಂಟೈನ್ ಮಾಡಬೇಕಾಗಿದೆ ಎಂದು ಹೇಳಿದ್ದೆವು. ಆಗ ಸಹೋದರಿ ಪ್ರತಾಪ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಬಳಿಕ ತಂದೆ ವಿಚಾರಣೆಗೆ ಕರೆದುಕೊಂಡು ಬಂದೆವು ಎಂದು ಪ್ರಯಾಗ್ ತಿಳಿಸಿದ್ದಾರೆ.
ತಂದೆಯನ್ನು ಕರೆದುಕೊಂಡು ಬಂದ ಬಳಿಕ ಪ್ರತಾಪ್ ನನಗೆ ಕರೆ ಮಾಡಿದ್ದರು. ಆಗ ನಾನು ಪರಿಸ್ಥಿತಿಯನ್ನು ವಿವರಿಸಿದ್ದೆ. ನಿಯಮ ಉಲ್ಲಂಘಿಸಿರುವುದು ಬಹು ದೊಡ್ಡ ಇಶ್ಶೂ ಆಗಿದೆ. ಕೂಡಲೇ ಬಂದು ಸರೆಂಡರ್ ಆಗು ಎಂದು ತಿಳಿಸಿದ್ದೆ. ಆಗ ಪ್ರತಾಪ್, ಬೆಂಗಳೂರಿಗೆ ಬಂದರೆ ಮಾಧ್ಯಮದವರೆಲ್ಲ ಮುಗಿ ಬೀಳುತ್ತಾರೆ. ಹೀಗಾಗಿ ಮೈಸೂರಿಗೆ ಬರುತ್ತೇನೆ ಎಂದು ಹೇಳಿದ್ದರು. ನಾನು ಅಧಿಕಾರಿಗಳೊಂದಿಗೆ ಚರ್ಚಿಸಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದೆ. ಬಳಿಕ ಮೈಸೂರಿನಿಂದ ರಹಸ್ಯವಾಗಿ ಕರೆದುಕೊಂಡು ಬಂದೆವು. ಪ್ರತಾಪ್ ಹೆಸರು ಆಗಲೇ ಚಾಲ್ತಿಯಲ್ಲಿದ್ದರಿಂದ ಸಾಮಾನ್ಯ ಹೋಟೆಲ್‌ನಲ್ಲಿ ಅವರನ್ನು ಇರಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವರಿಗೆ ಬೇರೆ ವ್ಯವಸ್ಥೆ ಮಾಡಲು ಮುಂದಾದೆವು ಎಂದು ಪ್ರಯಾಗ್ ಅಂದಿನ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರತಾಪ್ ಬಿಗ್‌ಬಾಸ್ ಮನೆಯಲ್ಲಿ, ತಾನು ಹೋಟೆಲ್‌ಗೆ ತೆರಳುವಾಗ ಪೊಲೀಸರು ಸುತ್ತ ನೆರೆದಿದ್ದರು ಎಂದು ಹೇಳಿಕೆ ನೀಡಿದ್ದರು. ಇದು ಶುದ್ಧ ಸುಳ್ಳು. ಯಾಕೆಂದರೆ ಪೊಲೀಸ್ ಠಾಣೆಗೆ ಪ್ರತಾಪ್ ಆಗಮಿಸುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಯಾವ ಮಾಧ್ಯಮಕ್ಕೂ ಸುಳಿವು ನೀಡಿರಲಿಲ್ಲ. ನಾವು ನಾಲ್ಕು ಮಂದಿ ಮಾತ್ರ ಇದ್ದೆವು. ಆಗಿನ ನಿಯಮ ಪ್ರಕಾರ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗುವವರೇ ಬಿಲ್ ಪಾವತಿ ಮಾಡಬೇಕಿತ್ತು. ಪ್ರತಾಪ್‌ಗೆ ಯಾವ ಸಮಸ್ಯೆಯೂ ಆಗಬಾರದೆಂದು ಉತ್ತಮ ಆಹಾರದ ವ್ಯವಸ್ಥೆ ಮಾಡಿದ್ದೆವು. ಇನ್ನು 14 ದಿನ ಯಾವುದೇ ವಿಚಾರಕ್ಕೆ ತಲೆ ಹಾಕದೆ ಕ್ವಾರಂಟೈನ್‌ನಲ್ಲಿರಿ ಎಂದು ಹೇಳಿ ಬಂದಿದ್ದೆವು ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಪ್ರತಾಪ್ ಪರ ಪೋಸ್ಟ್
ಆ ಸಮಯದಲ್ಲಿ ಪ್ರತಾಪ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿತ್ತು. ಅದರ ಬಗ್ಗೆ ಪ್ರಸ್ತಾವಿಸಿ, ಟ್ರೋಲ್‌ನಿಂದಾಗಿ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು. ನಾನು ಸಮಾಧಾನ ಮಾಡಿಸಿ, ಪ್ರತಾಪ್ ಪರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಕೂಡ ಹಾಕಿದ್ದೆ ಎಂದು ಡಾ. ಪ್ರಯಾಗ್ ಹೇಳಿದ್ದಾರೆ.
ಬಕ್ರಾಗಳು!
ಸುಳ್ಳಿನ ಮಹಲನ್ನೇ ಕಟ್ಟುವ ಪ್ರತಾಪ್ ಬೆಂಬಲಕ್ಕೆ ನಿಲ್ಲುತ್ತಾರಲ್ಲ ಅವರನ್ನು ನಾನು ಬಕ್ರ ಎಂದು ಕರೆಯಲು ಇಷ್ಟಪಡ್ತೇನೆ. ಯಾಕೆಂದರೆ ಅವರೆಲ್ಲ ಆತನ ಅಭಿಮಾನಿಗಳಲ್ಲ. ಆತನ ಸುಳ್ಳಿನ ಮೋಸದ ಜಾಲಕ್ಕೆ ಬೀಳುವ ಬಲಿಪಶುಗಳು ಎಂದು ಡಾ. ಪ್ರಯಾಗ್ ವ್ಯಾಖ್ಯಾನಿಸಿದ್ದಾರೆ. ಆತನ ಸುಳ್ಳನ್ನು ನಾನು ನಂಬಿಲ್ಲ ಎನ್ನುವ ಕಾರಣಕ್ಕೆ ನನ್ನ ಮೇಲೆ ಪ್ರತಾಪ್ ಆರೋಪ ಹೊರಿಸಿದ್ದಾರೆ. ನಾನು ಮಾಧ್ಯಮ ಕರೆಯಿಸಿಕೊಂಡಿದ್ದೇನೆ ಎನ್ನುವುದು ಕೂಡ ಸುಳ್ಳು. ನನ್ನ ವಿರುದ್ಧ ಸಾಕ್ಷಿ ಕೊಡುತ್ತೇನೆ ಎಂದಿದ್ದರು. ಅದನ್ನೂ ಅವರು ಕೊಟ್ಟಿಲ್ಲ. ಇನ್ನೊಂದು ಮುಖ್ಯ ವಿಚಾರ ಎಂದರೆ ಪ್ರತಾಪ್ ಕ್ವಾರಂಟೈನ್ ಸಮಯದಲ್ಲಿ ನಿಯಮ ಮೀರಿ ಲಾಯರ್ ಅನ್ನು ಕರೆಯಿಸಿಕೊಳ್ಳದಿದ್ದರೆ ಇಷ್ಟೆಲ್ಲ ರಾದ್ಧಾಂತ ಆಗುತ್ತಲೇ ಇರಲಿಲ್ಲ. ತಪ್ಪನ್ನು ಎಲ್ಲರೂ ಮಾಡುತ್ತಾರೆ. ಆದರೆ ಅದನ್ನು ತಿದ್ದಿಕೊಂಡು ನಡೆಯಬೇಕು. ಪ್ರತಾಪ್ ಮೊದಲ ಬಾರಿ ತಪ್ಪು ಮಾಡಿದಾಗ ನಾವು ಕ್ರಮ ಕೈಗೊಂಡಿರಲಿಲ್ಲ. ಪದೇ ಪದೆ ತಪ್ಪು ಮಾಡಿದಾಗ ಕಾನೂನಿನಂತೆ ಕ್ರಮ ಕೈಗೊಂಡಿದ್ದೆವು ಎಂದು ಡಾ. ಪ್ರಯಾಗ್ ವಿವರಿಸಿದ್ದಾರೆ.
ಇದನ್ನೂ ಓದಿ: BBK SEASON 10: ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ, ಆತ ಬಡವನೇ ಅಲ್ಲ ಎಂದ ಅಧಿಕಾರಿ!