ಬೆಂಗಳೂರು: ಈ ವಾರವಿಡೀ ಬಿಗ್ಬಾಸ್ (BBK SEASON 10) ಮನೆ ಪ್ರಕ್ಷುಬ್ದವಾಗಿಯೇ ಇತ್ತು. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು. ಪರಿಣಾಮವಾಗಿ ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದ ಪರಿಣಾಮವಾಗಿ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಈ ವಾರ ಕಿಚ್ಚ ಸುದೀಪ್ ಪಂಚಾಯಿತಿ ನಡೆಸಲಿದ್ದು ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಹಾಗೂ ಯಾರಿಗೆ ಸುದೀಪ್ ನ್ಯಾಯ ತೀರ್ಮಾನ ಮಾಡುತ್ತಾರೆ ಎಂಬುದನ್ನು ಗೊತ್ತಾಗಲಿದೆ.
ಈ ವಾರ ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ವಿನಯ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ನಮ್ರತಾ ಈ ನಾಲ್ಕು ಮಂದಿ ಮಾತ್ರ ಸೇವ್ ಆಗಿದ್ದಾರೆ. ಇನ್ನುಳಿದಿರುವ ಕಾರ್ತಿಕ್, ಸಂಗೀತಾ, ಪ್ರತಾಪ್, ಅವಿನಾಶ್ ಶೆಟ್ಟಿ, ಪವಿ, ತನಿಷಾ, ಸ್ನೇಹಿತ್, ಮೈಕಲ್, ಸಿರಿ ಇಷ್ಟು ಮಂದಿ ನ್ಯಾಮಿನೇಟ್ ಆಗಿದ್ದು ಈ ವಾರ ಮನೆಯಿಂದ ಹೊರಗೆ ಹೋಗೋರು ಯಾರು? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕಳೆದ ವಾರ ಹೊಸಬರು ಮನೆಗೆ ವೈಲ್ಡ್ಕಾರ್ಟ್ ಎಂಟ್ರಿ ಕೊಟ್ಟಿದ್ದಕ್ಕೆ ಕಿಚ್ಚ ಸುದೀಪ್ ತಮ್ಮ ಸೂಪರ್ ಪವರ್ ಬಳಸಿ ಎಲಿಮಿನೇಷನ್ ರದ್ದು ಮಾಡಿದ್ದರು.
ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್, ‘ಪಂಚಾಯ್ತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್ನಲ್ಲಿ ಗಾಯಗೊಂಡು ತುರ್ತಾಗಿ ಪ್ರತಾಪ್-ಸಂಗೀತಾ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ತನಿಷಾ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮನೆಯೊಳಗೆ ಬಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರ ಕಣ್ಣಿಗೂ ಬಿಸಿಲು ರಕ್ಷಕ ಕಡುಗಪ್ಪು ಕನ್ನಡಕವನ್ನು ಹಾಕಲಾಗಿದೆ. ಟಾಸ್ಕ್ನಲ್ಲಿ ಉಂಟಾದ ಹಾನಿಯ ಪರಿಣಾಮವಾಗಿ ಅವರು ಕನ್ನಡಕ ಧರಿಸಿಯೇ ಮನೆಯೊಳಗೆ ಪ್ರವೇಶಿಸಿದ್ದಾರೆ. ಹಾಗಾದರೆ, ಪ್ರತಾಪ್ ಮತ್ತು ಸಂಗೀತಾ ಆರೋಗ್ಯ ಈಗ ಹೇಗಿದೆ? ಅವರು ಬಿಗ್ಬಾಸ್ ಮನೆಯಲ್ಲಿ ಮುಂದುವರಿಯುವಷ್ಟು ಆರೋಗ್ಯವಂತರಾಗಿದ್ದಾರೆಯೇ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ