Site icon Vistara News

BBK Season 10: ಸ್ಪರ್ಧಿಗಳ ನಡುವೆ ಹೊತ್ತಿಕೊಂಡ ನಾಮಿನೇಷನ್‌ ಕಿಚ್ಚಿಗೆ ಬಲಿಯಾಗಿದ್ದು ಯಾರು?

bigg boss

bigg boss

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10(Big Boss Season 10) ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್‌ ನಡೆದು ಚಾಂಪಿಯನ್‌ ಯಾರಾಗುತ್ತಾರೆ ಎನ್ನುವ ಬಹುದಿನಗಳ ಕುತೂಹಲಕ್ಕೆ ತೆರೆ ಬೀಳಲಿದೆ. ಈ ಮಧ್ಯೆ ನಾಮಿನೇಷನ್‌ ಕಿಚ್ಚು ಆರಂಭವಾಗಿದ್ದು, ಯಾರೆಲ್ಲ ನಾಮಿನೇಷ್‌ ಆಗಿದ್ದಾರೆ ಎನ್ನುವ ವಿವರ ಈಗ ಹೊರ ಬಂದಿರುವ ಪ್ರೋಮೊದಲ್ಲಿ ಕಂಡು ಬಂದಿದೆ.

ʼʼಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರು ಸದಸ್ಯರು ಬಲಿಯಾಗಬೇಕುʼʼ ಎಂದು ಬಿಗ್‌ಬಾಸ್‌ ಸೂಚಿಸಿದ್ದರು. ಅದರಂತೆ ಸದಸ್ಯರ ಫೋಟೊ ಮತ್ತು ಬೆಂಕಿಯ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಸದಸ್ಯರು ತಾವು ನಾಮಿಮೇಟ್‌ ಮಾಡುವ ಇಬ್ಬರ ಫೋಟೊ ಬೆಂಕಿಗೆ ಹಾಕಿ ಸುಡಬೇಕು ಎಂದು ಹೇಳಿದ್ದರು.

ಯಾರು ಯಾರನ್ನು ನಾಮಿನೇಟ್‌ ಮಾಡಿದರು?

ಈ ಹಿಂದೆ ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ಡ್ರೋನ್‌ ಪ್ರತಾಪ್‌ ಮಧ್ಯೆ ಉತ್ತಮ ಬಾಂಧವ್ಯ ಬೆಸೆದಿತ್ತು. ಅಕ್ಕ-ತಮ್ಮನಂತೆ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ ಕೆಲವು ದಿನಗಳಿಂದ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಹೀಗಾಗಿ ಪ್ರತಾಪ್‌ ಹೆಸರನ್ನು ನಾಮಿನೇಟ್‌ ಮಾಡಿದ ಸಂಗೀತಾ, ʼʼನಾನು ನೋಡಿರುವ ಪ್ರತಾಪ್‌ ಬೇರೆ, ಈಗಿರುವ ಪ್ರತಾಪ್‌ ಬೇರೆ. ನಾನು ಇಷ್ಟರವರೆಗೆ ಸಪೋರ್ಟ್‌ ಮಾಡುತ್ತಿದ್ದ ಪ್ರತಾಪ್‌ ಈಗ ಕಾಣಿಸುತ್ತಿಲ್ಲʼʼ ಎಂದು ಇದಕ್ಕೆ ಕಾರಣ ನೀಡಿದ್ದಾರೆ.

ಇನ್ನು ತನಿಷಾ, ತುಕಾಲಿ ಸಂತೋಷ್‌ ಅವರು ಕಾರ್ತಿಕ್‌ ಫೋಟೊವನ್ನು ಬೆಂಕಿಗೆ ಹಾಕಿದ್ದಾರೆ. ʼʼಕಾರ್ತಿಕ್‌ ಇತ್ತೀಚೆಗೆ ಉತ್ತಮವಾಗಿ ಆಟ ಆಡುತ್ತಿಲ್ಲ, ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಂಡು ಬರುತ್ತಿಲ್ಲʼʼ ಎಂದು ತುಕಾಲಿ ಸಂತೋಷ್‌ ತಿಳಿಸಿದರು.

ಇನ್ನು ತನಿಷಾ ಮಾತನಾಡಿ, ʼʼಕಾರ್ತಿಕ್‌ ಹೇಳುವಂತಹ ಮಾತನ್ನು ಉಳಿಸಿಕೊಳ್ಳುತ್ತಿಲ್ಲ. ಕಾರ್ತಿಕ್‌ ಎದೆಗೆ ಚುಚ್ಚಿದರೆ ನಾನು ನೇರವಾಗಿ ಬೆಂಕಿಗೆ ಹಾಕ್ತೇನೆ. ಸುಟ್ಟು ಪುಡಿ ಪುಡಿಯಾಗಿ ಬೂದಿಯೂ ಸಿಗದಷ್ಟು ಕ್ರೂರಿಯಾಗುತ್ತೇನೆʼʼ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದು ಸುತ್ತಿನ ಕಿಚ್ಚು ಹತ್ತಿಕೊಂಡಿರುವುದು ಸ್ಪಷ್ಟ.

ಕಾರ್ತಿಕ್‌ ಫ್ರೆಂಡ್‌ಶಿಪ್‌ ಬೇಡ ಎಂದ ಸಂಗೀತಾ

ಈ ಹಿಂದೆ ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್‌ ಮತ್ತು ಸಂಗೀತಾ ಉತ್ತಮ ಸ್ನೇಹಿತರಾಗಿದ್ದರು. ಆದರೆ ಇದೀಗ ಈ ಗೆಳೆತನದಲ್ಲಿಯೂ ಬಿರುಕು ಮೂಡಿದೆ. ವೀಕೆಂಡ್ ಎಪಿಸೋಡ್​ನಲ್ಲಿ ಇದು ಸ್ಪಷ್ಟವಾಗಿದೆ. ಒಂದು ಟಾಸ್ಕ್ ನೀಡಲಾಗಿತ್ತು. ಪ್ರತಿ ಸ್ಪರ್ಧಿಗೆ ಎರಡು ಫೋಟೋ ನೀಡಿ, ಈ ಪೈಕಿ ಯಾರ ಫ್ರೆಂಡ್​ಶಿಪ್​ ಅನ್ನು ಬಿಗ್‌ಬಾಸ್ ಮನೆಯ ಹೊರಗೂ ತೆಗೆದುಕೊಂಡು ಹೋಗುತ್ತಾರೆ, ಯಾರ ಫ್ರೆಂಡ್​ಶಿಪ್ ಇಲ್ಲಿಯೇ ಬಿಟ್ಟು ಹೋಗುತ್ತಾರೆ ಎನ್ನುವುದನ್ನು ಹೇಳಬೇಕಿತ್ತು. ಅದರಂತೆ ಸಂಗೀತಾ ಅವರಿಗೆ ವಿನಯ್ ಹಾಗೂ ಕಾರ್ತಿಕ್ ಜತೆಗಿನ ಫೋಟೊ ಬಂದಿತ್ತು. ಈ ಪೈಕಿ ತಮಗೆ ಇಬ್ಬರ ಫ್ರೆಂಡ್​ಶಿಪ್ ಬೇಡ ಎಂದು ಹೇಳಿದ್ದರು.

ಇದನ್ನೂ ಓದಿ: BBK Season 10: ಡ್ರೋನ್ ಪ್ರತಾಪ್​ಗೆ ಫಿನಾಲೆಯ ನೇರ ಟಿಕೆಟ್ ಕೈ ತಪ್ಪಿದ್ದೇಕೆ? ಸುದೀಪ್‌ ಕೊಟ್ರು ಸ್ಪಷ್ಟನೆ

ಇನ್ನು ಡ್ರೋನ್ ಪ್ರತಾಪ್​ ಸಂಗೀತಾ ಅವರ ಗೆಳೆತನವನ್ನು ಉಳಿಸಿಕೊಳ್ಳುವುದಾಗಿ ಹೇಳಿದರು. ತನಿಷಾ ವರ್ತೂರು ಸಂತೋಷ್‌ ಗೆಳೆತನವನ್ನು ಆರಿಸಿಕೊಂಡರು. ವಿನಯ್ ಅವರು ನಮ್ರತಾ ಗೆಳೆತನ ಆಯ್ಕೆ ಮಾಡಿಕೊಂಡರು. ವರ್ತೂರು ಸಂತೋಷ್ ಮಾತನಾಡಿ, ತುಕಾಲಿ ಸಂತೋಷ್‌ ಜತೆಗಿನ ಗೆಳೆತನ ಉಳಿಸಿಕೊಳ್ಳುವುದಾಗಿ ಹೇಳಿದರು. ಇತ್ತ ತುಕಾಲಿ ಸಂತೋಷ್‌ ಅವರು ವರ್ತೂರು ಸಂತೋಷ್‌ ಗೆಳೆತನ ಉಳಿಸಿಕೊಂಡರು. ನಮ್ರತಾ ಅವರು ವಿನಯ್ ಗೆಳೆತನ ಉಳಿಸಿಕೊಂಡರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version