Site icon Vistara News

BBK SEASON 10: ಬಿಗ್‌ಬಾಸ್‌ ಮನೆಯ ಪಾಠಶಾಲೆಯಲ್ಲಿ ಮೈಕಲ್ ಕನ್ನಡ ಮೇಷ್ಟ್ರು!

bigg boss school

bigg boss school

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ(BBK Season 10) 11ನೇ ವಾರದ ಆಟ ಆರಂಭವಾಗಿದೆ. ಈ ಬಾರಿಯ ಟಾಸ್ಕ್‌ನ ಭಾಗವಾಗಿ ಬಿಗ್‌ಬಾಸ್‌ ಮನೆಯಲ್ಲಿ ಶಾಲೆ ತೆರೆಯಲಾಗಿದೆ. ‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ. ಅದರಂತೆ ಬಿಗ್‌ಬಾಸ್‌ ಮನೆಯಲ್ಲಿ ‘ಪ್ರಾಥಮಿಕ ಶಾಲೆ’ ಪ್ರಾರಂಭವಾಗಿದ್ದು, ಕಳೆದ ವಾರ ರಕ್ಕಸರ ಹಾಗೆ ಕಿತ್ತಾಡಿದ್ದವರೇ ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟು ಮಾಡುತ್ತಿದ್ದಾರೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಕೌಮಾರ್ಯದ ಮುಗ್ಧತೆ ಅರಳುತ್ತಿದೆ.

ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇನೂ ಭರ್ತಿಯಾಗಿಯಾಯ್ತು. ಹಾಗಾದ್ರೆ ಅವರಿಗೆ ಪಾಠ ಮಾಡುವ ಗುರುಗಳು ಯಾರು? ಮೊದಲ ತರಗತಿಯಲ್ಲಿ ‘ವ್ಯಕ್ತಿತ್ವ ವಿಕಸನ’ದ ಬಗ್ಗೆ ಪಾಠ ಮಾಡಲು ಬಂದವರು, ತನಿಷಾ ಟೀಚರ್! ಅಷ್ಟು ಸುಂದರ ಟೀಚರ್ ಪಾಠ ಮಾಡಲು ಬಂದರೆ ಹಾಜರಿಗೇನು ಕಮ್ಮಿ? ಅದರಲ್ಲಿಯೂ ಲಾಸ್ಟ್‌ ಬೆಂಚ್‌ ಹುಡುಗ ವರ್ತೂರು ಸಂತೋಷ್‌ ಅಂತೂ, ‘ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್‌’ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. ಅದಕ್ಕೆ ತನಿಷಾ ಮಿಸ್ ನಾಚಿ ನೀರಾಗಿದ್ದರು. ಆದರೆ ನಾಚಿಕೆಯನ್ನು ಮುಚ್ಚಿಟ್ಟುಕೊಂಡ ಮಿಸ್‌, ವರ್ತೂರ್‌ ಅವರಿಗೆ ಬೆಂಚ್‌ ಮೇಲೆ ನಿಂತುಕೊಳ್ಳುವ ಶಿಕ್ಷೆ ಕೊಟ್ಟಿದ್ದಾರೆ. ಅಲ್ಲದೇ ಸ್ಲೇಟಿನ ಮೇಲೆ, ‘ಐ ಲವ್ ಯೂ’ ಎಂದು ಬರೆದು ಓದುವಂತೆ ಹೇಳಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡಿಲ್ಲವೆಂದರೆ ಹೇಗೆ? ಕನ್ನಡ ಕಲಿಸಲು ಬಂದ ಮೇಷ್ಟ್ರು ಯಾರು ಗೊತ್ತೆ? ವಿದೇಶದಿಂದ ಬಂದಿರುವ ಮೈಕಲ್‌, ಕೋಟು ತೊಟ್ಟು ‘ಕನ್ನಡ ತರಗತಿ’ ಮಾಡಲು ಸಜ್ಜಾಗಿದ್ದಾರೆ. ವಿದೇಶದಿಂದ ಬಂದಿದೀನಿ. ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ’ ಎಂದಿದ್ದಾರೆ ಮೈಕಲ್ ಮೇಷ್ಟ್ರು. ಅಷ್ಟೇ ಅಲ್ಲ, ಪುಂಡ ಹುಡುಗ ಕಾರ್ತಿಕ್‌ಗೆ, ‘ಆಂಗ್ಲ ಭಾಷೆ ಬಳಕೆ ಮಾಡಿದರೆ ಶಿಕ್ಷೆ ಕೊಡ್ತೀನಿ’ ಎಂದು ಎಚ್ಚರಿಕೆ ಬೇರೆ ನೀಡಿದ್ದಾರೆ. ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಮೈಕಲ್ ಹೇಳುತ್ತಿದ್ದರೆ ವಿದ್ಯಾರ್ಥಿಗಳ ಬಾಯಲ್ಲಿ ‘ಕನ್ನಡ… ರೋಮಾಂಚನವೀ ಕನ್ನಡ’ ಎಂಬ ಹಾಡು ತಂತಾನೆಯೇ ಹೊಮ್ಮಿದೆ. ಮಾತ್ರವಲ್ಲ ಅವರು ಬೋರ್ಡ್‌ ಮೇಲೆ ಕನ್ನಡ ಅಕ್ಷರ ಬರೆದಿದ್ದಾರೆ.

ಮೈಕಲ್‌ ತನ್ನ ಕನ್ನಡ ಪ್ರೀತಿಯಿಂದಲೇ ಗಮನ ಸೆಳೆದಿದ್ದಾರೆ. ಈ ಹಿಂದೆ ಸುದೀಪ್‌ ಕೂಡ ಮೈಕಲ್‌ ಮಾತನಾಡುವ ಕನ್ನಡಕ್ಕೆ ಮೆಚ್ಚುಗೆ ಸೂಚಿಸಿದ್ದರು. ವಿದೇಶದಲ್ಲಿ ಹುಟ್ಟಿದ್ದರೂ ಮೈಕಲ್‌ ಕನ್ನಡದಲ್ಲೇ ಮಾತನಾಡುತ್ತಿರುವುದಕ್ಕೆ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version