Site icon Vistara News

BBK SEASON 10: ಬಿಗ್‌ಬಾಸ್ ಮನೆಯೊಳಗೆ ʼಬೆಂಕಿ ಬಂತೋʼ; ಯಾರು ಈ ಬೆಂಕಿ?

tanisha kuppunda

tanisha kuppunda

ಬೆಂಗಳೂರು: ಹಲವು ಕಾರಣಗಳಿಂದ ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಪ್ರೇಕ್ಷಕರ ಗಮನ ಸೆಳೆದಿದೆ. ಬಿಗ್‌ಬಾಸ್‌ ಮನೆಯೊಳಗೆ ಇರುವ ನಟಿ ತನಿಷಾ ಕುಪ್ಪಂಡ ಮೊದಲಿನಿಂದಲೂ ಪ್ರಬಲ ಸ್ಪರ್ಧಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಬೆಂಕಿ ಎಂದೇ ಕರೆಯಲಾಗುತ್ತದೆ. ಇದೀಗ ಬೆಂಕಿಯಂತೆ ಪ್ರಬಲ ಪೈಪೋಟಿ ಕೊಡುತ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

ʼಬೆಂಕಿ ಬಂತೋʼ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನ ಬಜಾನಕ್ಕೆ ಧ್ವನಿಯಾಗುವುದರ ಜತೆಗೆ ಸಂಗೀತದ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗಳಿಗೆ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್‌ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್. ಈ ಮಸ್ತ್ ಸಿಂಗಿಂಗ್ ಸೆನ್ಸೇಷನ್ ನೋಡಿದವರೆಲ್ಲ ʼಪೆಂಟಗನ್‌ ಬ್ಯೂಟಿʼ ತನಿಷಾ ಗೆಲ್ಲಬೇಕು ಅಂತ ಕಮೆಂಟ್ ಮಾಡುತ್ತಿದ್ದಾರೆ.

ʼಮಂಗಳಗೌರಿʼ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತರ ʼಪೆಂಟಗನ್ʼ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟಿದ್ದರು. ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿದ್ದರು. ನಂತರ ನಟ ಕೋಮಲ್ ಅವರ ʼಉಂಡೆನಾಮʼ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಸದ್ಯ ಬಿಗ್‌ಬಾಸ್ ಸೀಸನ್ 10ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಪಟ್ಟ ತನಿಷಾ ಅವರಿಗೇ ಸಿಗಬೇಕು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಬಿಗ್‌ಬಾಸ್‌ ಮನೆಯೊಳಗೆ ಹವಾ ಸೃಷ್ಟಿಸಿಕೊಂಡಿದ್ದ ತನಿಷಾ ಇದೀಗ ಈ ಹಾಡಿನ ಮೂಲಕ ದೊಡ್ಮನೆ ಹೊರಗೂ ಸದ್ದು ಮಾಡುತ್ತಿದ್ದಾರೆ.

ಬಿಗ್‌ಬಾಸ್‌ ಮನೆ ತುಂಬ ತನಿಷಾ ಸದ್ದು

ಕೆಲವು ದಿನಗಳ ಹಿಂದೆ ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ ನಿರ್ವಹಿಸುವ ವೇಳೆ ತನಿಷಾ ಅವರಿಗೆ ಗಾಯವಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಅವರು ಹೊರ ಬಂದಿದ್ದರು. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಬಳಿಕ ಚೇತರಿಸಿಕೊಂಡ ಅವರು ಸ್ಪರ್ಧೆಗೆ ಮರಳಿದ್ದರು. ಈ ಹಿಂದೆ ಟಾಸ್ಕ್‌ನಲ್ಲಿ ಸವಾಲು ಸ್ವೀಕರಿಸಿದ್ದ ತನಿಷಾ 20 ಮೆಣಸಿನಕಾಯಿಯನ್ನು ತಿಂದು ಗಮನ ಸೆಳೆದಿದ್ದರು.

ವಿವಾದ

ಇತರ ಸ್ಪರ್ಧಿಗಳಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿರುವ ತನಿಷಾ ಬಿಗ್‌ಬಾಸ್‌ ಮನೆಯೊಳಗೆ ವಿವಾದವನ್ನೂ ಹುಟ್ಟು ಹಾಕಿದ್ದರು. ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಅವರ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ದೂರು ನೀಡಿದ್ದರು. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಪಿ.ಪದ್ಮಾ ಆರೋಪಿಸಿದ್ದರು. ವಡ್ಡ ಎಂಬ ಪದ ಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: BBK SEASON 10: ವಿನಯ್ ಜೆನ್ಯೂನ್ , ‘ಸಂಗೀತಾʼ ವಿನ್ನರ್‌; ಮೈಕಲ್‌!

ತನಿಷಾ ಮಾತಿನ ವೇಳೆ ಪ್ರತಾಪ್‌ಗೆ ಒಡ್ಡನೋ ನೀನು ಒಡ್ಡನ ತರಹ ಆಕ್ಟ್‌ ಮಾಡ್ತೀಯಾ ಎಂದು ಪದ ಬಳಕೆ ಮಾಡಿದ್ದೇ ವಿವಾದ ಉಂಟಾಗಲು ಕಾರಣವಾಗಿತ್ತು. ಇದು ಬೋವಿ ಜನಾಂಗಕ್ಕೆ ಮಾಡಿದ ಅವಮಾನ ಎಂದು ಹಲವರು ಆರೋಪಿಸಿದ್ದರು. ಜಾತಿ ಹಾಗೂ ಜನಾಂಗದ ಬಗ್ಗೆ ಮಾತಾಡಿರುವುದು ಸರಿಯಲ್ಲ. ಉದ್ದೇಶಪೂರ್ವಕವಾಗಿಯೇ ವಡ್ಡರ ಜನಾಂಗದ ಬಗ್ಗೆ ಅವಮಾನಕರವಾಗಿ ಮಾತನಾಡಿದ್ದಾರೆ. ಇವರನ್ನು ಕೂಡಲೇ ಬಿಗ್‌ಬಾಸ್‌ ಮನೆಯಿಂದ ಹೊರಹಾಕಬೇಕು ಜತೆಗೆ ಬಂಧಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version