ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10(BBK SEASON 10)ರ ಮೂರನೇ ರನ್ನರ್ ಅಪ್ ಈಗಿ ವಿನಯ್ ಗೌಡ ಹೊರ ಹೊಮ್ಮಿದ್ದಾರೆ. ನೇರಮಾತು, ಏಟಿಗೆ ಎದುರೇಟು, ನಿಷ್ಠುರ ನಡತೆಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿರುವ ವಿನಯ್ ಮನೆಯಿಂದ ಹೊರಬಂದ ಕೂಡಲೇ ಜಿಯೊಸಿನಿಮಾಗೆ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ: https://go.jc.fm/fRhd/ef3b33m7.
ಬಿಗ್‌ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದೀನಿ. ಚೆನ್ನಾಗಿ ಅನಿಸುತ್ತಿದೆ ಎಂದು ಖಂಡಿತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ನಾನು ಕನಿಷ್ಠ ಟಾಪ್ 3ನಲ್ಲಿ ಇರುತ್ತೇನೆ ಎಂದುಕೊಂಡಿದ್ದೆ. ನಮ್ಮ ಜನರೇ ವೋಟ್ ಮಾಡಿರುವುದು. ಇಲ್ಲಿ ತನಕ ಇಟ್ಟುಕೊಂಡಿರುವುದಕ್ಕೆ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಅಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ. ಇಲ್ಲಿದ್ದು ಸಾಕಷ್ಟು ಜನರ ಹೃದಯವನ್ನು ಗೆದ್ದಿದ್ದೇನೆ ಎಂದು ವಿನಯ್ ತಿಳಿಸಿದ್ದಾರೆ.
ಇಲ್ಲಿದ್ದು ಚಾಂಪಿಯನ್ ಎನಿಸಿಕೊಳ್ಳುವ ಬದಲು ಪೀಪಲ್ಸ್ ಚಾಂಪಿಯನ್ ಅಂತ ಹೇಳುವುದಕ್ಕೆ ತುಂಬ ಖುಷಿಯಾಗುತ್ತದೆ. ಯಾಕೆಂದರೆ ಹೊರಗಡೆ ಜನರು ತುಂಬ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಕೇಳಿದ್ದೀನಿ. ಹೊರಗೆ ಹೋಗಿ ಜನರ ಸ್ಪಂದನವನ್ನು ತಿಳಿಯಲು ಕಾಯುತ್ತಿದ್ದೇನೆ. ಹೌದು, ಮನೆಯೊಳಗೆ ಅಗ್ರೆಸಿವ್ ಆಗಿ ಆಡುತ್ತಿದ್ದೆ. ಆದರೆ ಅದು ಬೇಕು ಬೇಕಂತ ಮಾಡಿದ್ದಲ್ಲ. ಆ ಮೊಮೆಂಟ್‌ಗೆ ಆ ಟಾಸ್ಕ್‌ಗೆ ಏನು ಬೇಕಾಗಿತ್ತೋ ಅದನ್ನು ಮಾಡಿದ್ದೀನಿ. ಮತ್ತೆ ಡೇ ಒನ್‌ನಿಂದ ಬಿಗ್‌ಬಾಸ್ ಸ್ಟಾರ್ಟ್ ಆಯ್ತು ಅಂದ್ರೆ ಈ ಹಿಂದೆ ಇದ್ದ ಹಾಗೆಯೇ ಇರ್ತೀನಿ. ಹಾಗಾಗಿ ನಾನು ನಡೆದುಕೊಂಡ ರೀತಿಗೆ ಯಾವ ರಿಗ್ರೆಟ್ಸ್ ಕೂಡ ಇಲ್ಲ. ನನ್ನ ಆಟ, ನನ್ನ ತನವನ್ನು ನಾನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.
ಕೊನೆಯ ದಿನಗಳಲ್ಲಿ ಸೋಬರ್ ಆಗಿ ಆಡಿದ್ದು ಯಾಕೆ ಅಂದ್ರೆ ಅಂಥ ಟಾಸ್ಕ್‌ಗಳೇ ಇರ್ಲಿಲ್ಲ. ಕೊನೆಯ ದಿನಗಳಲ್ಲಿ ಎಲ್ಲರೂ ಖುಷಿಯಾಗಿ ಇರೋಣ ಎಂದುಕೊಂಡು ಹಾಗೆ ಇದ್ದೆ ಎಂದು ಹೇಳಿದ್ದಾರೆ.
ಮೊದಮೊದಲು ಮನೆಯೊಳಗೆ ಹೋದಾಗ ಬಹಳಷ್ಟು ಜನರು ಇದ್ದರು. ಎರಡು ಗುಂಪು ಆಯ್ತು. ಅದನ್ನು ಗುಂಪು ಎಂದು ಯಾಕೆ ಕರೆದರು ಎಂದು ನನಗೆ ಗೊತ್ತಾಗಲಿಲ್ಲ. ಯಾರೂ ಅಲ್ಲಿ ಹೋಗಿ ಗುಂಪು ಮಾಡಿಕೊಳ್ಳಬೇಕು ಎಂದು ಅಂದುಕೊಂಡು ಹೋಗುವುದಿಲ್ಲ. ಒಂದು ಥರ ಮೈಂಡ್‌ಸೆಟ್ ಇರುವವರು ಒಂದು ಕಡೆ ಇರ್ತಾರೆ. ಇನ್ನೊಂದು ಥರ ಮೈಂಡ್‌ಸೆಟ್ ಇರುವವರು ಇನ್ನೊಂದು ಕಡೆ ಇರ್ತಾರೆ. ಹಾಗಾಗಿ ನನ್ನ ಜತೆ ಯಾರು ಯಾರು ವೈಬ್ ಆಗ್ತಿದ್ರೋ ಅವರೆಲ್ಲರೂ ಸೇರಲು ಶುರು ಮಾಡಿದರು. ನನ್ನ ಜತೆಯಲ್ಲಿ ವೈಬ್ ಆಗುವುದಿಲ್ಲವೋ ಅವರು ಸಪರೇಟ್ ಆಗುವುದಕ್ಕೆ ಶುರುವಾದ್ರು. ಆ ಬಾಂಡಿಂಗ್, ವೈಬ್ ಇದ್ದಿದ್ದಕ್ಕೇ ಇಷ್ಟು ದಿನಗಳ ಜರ್ನಿಯಲ್ಲಿ ನನ್ನ ಜತೆಗೇ ಇದ್ದಿದ್ದು ಎಂದು ವಿನಯ್ ವಿವರಿಸಿದ್ದಾರೆ.
ಬ್ಯಾಡ್‌ಲಕ್ ನನ್ನ ಜತೆಗೆ ಇರುವವರೇ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಹೊರಗೆ ಹೋದರು. ಆದರೆ ನಾವು ಮನೆಯೊಳಗಿದ್ದರೂ ಹೊರಗಿದ್ದರೂ ನಾವು ಫ್ರೆಂಡ್ಸ್ ಆಗಿಯೇ ಇದ್ದೆವು. ಆದರೆ ಆ ಇನ್ನೊಂದು ಗುಂಪು ಅಲ್ಲೇ ಕಿತ್ತಾಡ್ಕೊಂಡು, ಹೊಡೆದಾಟ್ಕೊಂಡು, ಪರಚಾಡ್ಕೊಂಡು ಸಪರೇಟ್ ಸಪರೇಟ್ ಆಗಿಬಿಟ್ಟರು. ಹೊರಗೆ ಬಂದ್ಮೇಲೆ ಇನ್ನು ಏನೇನು ಆಗ್ತಾರೆ ಗೊತ್ತಿಲ್ಲ. ಮನೆಯೊಳಗಿನ ಸ್ಪರ್ಧಿಗಳಲ್ಲಿ ಕಾರ್ತಿಕ್ ಮೊದಲೇ ನನಗೆ ಪರಿಚಯ. ಸಂಗೀತಾ ಏಳು ವರ್ಷಗಳಿಂದ ಪರಿಚಯ, ಯಾಕೆಂದರೆ ಇಬ್ಬರೂ ಒಂದು ಧಾರಾವಾಹಿಯಲ್ಲಿ ಕೆಲಸ ಮಾಡಿದ್ವಿ. ನನಗೆ ಕಾರ್ತಿಕ್‌ಗೆ ಅಂಥ ವೈತರ್ವ ಏನಿಲ್ಲ. ಟಾಸ್ಕ್ ಅಂತ ಬಂದಾಗ, ಗೇಮ್ ಅಂತ ಬಂದಾಗ ಮಾತಿಗೆ ಮಾತು ಬಂದೇ ಬರ್ತವೆ. ಹಾಗಾಗಿ ಭಿನ್ನಾಭಿಪ್ರಾಯ ಬರುತ್ತಿದ್ದವು. ಆದರೆ ಬೇಗ ಪರಸ್ಪರ ಮಾತಾಡ್ಕೊಂಡು ಸರಿ ಹೋಗ್ತಿದ್ವಿ. ಈಗಲೂ ನಾನು ಕಾರ್ತಿಕ್ ಒಳ್ಳೆ ಫ್ರೆಂಡ್ಸ್ ಆಗೇ ಇರ್ತೀವಿ ಎಂದು ಹೇಳಿದ್ದಾರೆ.
ಸಂಗೀತಾ ವಿಷಯ ತಗೊಂಡ್ರೆ ಸಂಗೀತಾ ಪಾರ್ವತಿಯಾಗಿ, ಸತಿಯಾಗಿ ನನ್ನ ಜತೆಗೆ ನಟಿಸಿದ್ದಳು. ಇಲ್ಲಿ ಬಂದಾಗ, ಮೊದಲ ವಾರದ ನಾಮಿನೇಷನ್‌ನಲ್ಲಿ ಅವ್ರು ನನ್ನ ಫ್ರೆಂಡ್, ಹಾಗಾಗಿ ನಾಮಿನೇಟ್ ಮಾಡ್ಬಾರ್ದು ಅಂತ ಇರ್ಲಿಲ್ಲ. ನಾನು ಇಲ್ಲಿಗೆ ಗೇಮ್ ಆಡೋದಿಕ್ಕೆ ಬಂದಿದ್ದೆ. ಅವರು ಮಾಡಿರುವ ತಪ್ಪುಗಳಿಗೆ ನಾಮಿನೇಟ್ ಮಾಡಿದೆ. ಫ್ರೆಂಡ್ಸ್, ಗೊತ್ತಿರೋರು, ಬಿಟ್ಟು ಬಿಡೋಣ ಅಂತ ಅಂದುಕೊಳ್ಳಲಿಲ್ಲ. ಅವರಿಬ್ಬರೂ ತಪ್ಪು ಮಾಡಿದ್ರು, ನಾನು ಹೇಳಿದ ಮೇಲೂ ತಪ್ ಮಾಡಿದ್ರು, ನಾಮಿನೇಟ್ ಮಾಡಿದೆ. ಅದರಿಂದ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಂಡರು. ಗೊತ್ತಿರೋರನ್ನೇ ನಾಮಿನೇಟ್ ಮಾಡ್ತಾನೆ. ಫ್ರೆಂಡ್ಸ್‌ನೇ ನಾಮಿನೇಟ್ ಮಾಡ್ತಾನೆ ಎಂದುಕೊಂಡರು. ಆದ್ರೆ ಏನೂ ಮಾಡಕ್ಕಾಗಲ್ಲ, ನಾನಿರೋದೇ ಹೀಗೆ ಎಂದು ವಿನಯ್ ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
ನಾನು ಎಲ್ಲಿಯೂ ಫೇಕ್ ಆಗಿಲ್ಲ. ಯಾರಿಗೆ ಎಷ್ಟು ಬೇಜಾರಾದ್ರೂ ಪರವಾಗಿಲ್ಲ. ಯಾರು ಎಷ್ಟೇ ಅಹಂಕಾರ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ ವಿಲನ್ ಅಂದ್ರೂ ಪರವಾಗಿಲ್ಲ… ನಾನದನ್ನು ಒಪ್ಕೋತೀನಿ. ನಾನು ವಿಲನ್ನೇ!
ಮನೆಯೊಳಗೆ ಜೆನ್ಯೂನ್ ಆಗಿ ಆಡಿದ್ದು, ನಮ್ರತಾ, ಪವಿ. ಮೈಕಲ್ ಜಂಟಲ್‌ಮನ್. ಸಿರಿ, ವರ್ತೂರು ಸಂತೋಷ್ ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಜೆನ್ಯೂನ್ ಆಗಿದ್ರು. ಕಾರ್ತಿಕ್, ಸಂಗಿತಾ ಮತ್ತು ಪ್ರತಾಪ್ ಟಾಪ್ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇ ಸಲ್ಲಬೇಕು. ಆ ಮೂವರೂ ನನ್ನ ಜತೆಗೆ ಜಗಳ ಮಾಡಿಕೊಂಡೇ, ಫೈಟ್ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು. ನನಗೆ ಕಾರ್ತಿಕ್ ಗೆಲ್ಲಬೇಕು ಅಂತಲೇ ಆಸೆ ಇತ್ತು ಎಂದು ಹೇಳಿದ್ದಾರೆ.
ಫನ್ ಫ್ರೈಡೆ ಬಗ್ಗೆ…
ಜಿಯೊಸಿನಿಮಾ ಫನ್ ಫ್ರೈಡೆ ಬಂತು ಅಂದ್ರೇ ಕುತೂಹಲ ನಮಗೆ. ಜಗಳ ಎಲ್ಲ ಮಾಡದೆ ಮಜಾ ಮಾಡೋಕೆ ಸಿಗತ್ತೆ ಅಂತ. ಮೊದಲ ವಾರದ ಮ್ಯೂಸಿಕಲ್ ಪಾಟ್ ಗೇಮ್ ನನಗೆ ತುಂಬ ಇಷ್ಟವಾಗಿತ್ತು. ಲಾಸ್ಟ್‌ನಲ್ಲಿ ಬಾಲ್‌ನ ಆ ಕಡೆ ಈ ಕಡೆ ತಳ್ಳುವ ಟಾಸ್ಕ್ ಚೆನ್ನಾಗಿತ್ತು. ಎಲ್ಲ ಫ್ರೈಡೇಗಳೂ ಸಖತ್ತಾಗಿದ್ದವು. ಅದಕ್ಕಾಗಿ ಕಾಯುತ್ತಿದ್ದೆವ ನಾವು. ಯಾರಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ. ನಾನು ನನ್ನ ಮನಸ್ಸಿಗೆ ಮತ್ತು ನನ್ನ ಕುಟುಂಬಕ್ಕೆ ನಿಷ್ಠನಾಗಿದ್ದೆ. ಅಷ್ಟೇ ಸಾಕು ಎಂದು ವಿನಯ್ ತಿಳಿಸಿದ್ದಾರೆ.
ಇದನ್ನೂ ಓದಿ: BBK SEASON 10 : ಡ್ರೋನ್ ಪ್ರತಾಪ್ ಬಗ್ಗೆ ತುಕಾಲಿ ಹೀಗ್ಯಾಕಂದ್ರು? ಇಲ್ಲಿದೆ ವಿಡಿಯೊ
ಅವಿಸ್ಮರಣೀಯ ಗಳಿಗೆ
ಬಿಗ್‌ಬಾಸ್ ಮನೆಯಲ್ಲಿ ನನ್ನ ಫೆವರೇಟ್ ಮೊಮೆಂಟ್ ಅಂದರೆ ಕ್ಯಾಪ್ಟನ್ ಆಗಿದ್ದು. ಹಾಗೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇನ್ನೊಂದು ಅವಿಸ್ಮರಣೀಯ ಗಳಿಗೆ. ಯಾಕೆಂದರೆ ನೂರಕ್ಕೂ ಹೆಚ್ಚು ದಿನಗಳ ಕಾಲ ಕಾದು ಕಾದು, ಇನ್ನು ಸಿಗುವುದಿಲ್ಲ ಎಂಬ ಹಂತದಲ್ಲಿ ಸಿಕ್ಕಿದ ಚಪ್ಪಾಳೆ ಅದು. ಅದರಲ್ಲಿಯೂ ಅವರು ಹೇಳಿದ ಒಂದಿಷ್ಟು ಮಾತುಗಳು ಆಳಕ್ಕೆ ನಾಟಿತು.
ಬಿಗ್‌ಬಾಸ್‌ಗೆ ತುಂಬ ತುಂಬ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ. ಎಲ್ಲೋ ಇದ್ದಿದ್ದ ನನ್ನನ್ನು ಕರೆದುಕೊಂಡು ಬಂದು, ಇಷ್ಟು ದೊಡ್ಡ ವೇದಿಕೆ ಕೊಟ್ಟಿದ್ದಾರೆ. ಇಷ್ಟು ದಿನ ನನ್ನನ್ನು ಮಹದೇವ, ಶಿವ ಎಂದು ನನ್ನ ಪಾತ್ರಗಳ ಮೂಲಕ ಗುರುತು ಹಿಡಿಯುತ್ತಿದ್ದರು. ಈಗ ಹೊರಗೆ ಬಂದಾಗ ಜನರು ನನ್ನನ್ನು ವಿನಯ್ ಎಂದು ಗುರ್ತು ಹಿಡಿಯುತ್ತಾರೆ. ಆ ವಿಷಯಕ್ಕೆ ನಾನು ಬಿಗ್‌ಬಾಸ್‌ಗೆ ಕೃತಜ್ಞನಾಗಿರುತ್ತೇನೆ ಎಂದು ವಿನಯ್ ಹೇಳಿದ್ದಾರೆ.