ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10 (BBK SEASON 10) ಅಂತಿಮ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಮನೆ ಫಿನಾಲೆಗೆ ಸಾಕ್ಷಿಯಾಗಲಿದೆ. ಈ ಮಧ್ಯೆ ಬಿಗ್‌ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಶೋ ಮೇಲೆ ಒಂದು ಆರೋಪ ಬಂದಿದೆ. ಏನದು ಆರೋಪ? ಅದು ಎಷ್ಟರಮಟ್ಟಿಗೆ ಸತ್ಯ? ಈ ಪ್ರಶ್ನೆಯ ಕುರಿತೇ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಚರ್ಚೆ ನಡೆಯಲಿದೆ.
ಬಿಗ್‌ಬಾಸ್ ಶೋ ಆರಂಭದಿಂದಲೂ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡೇ ಬಂದಿದೆ. ಆದರೆ ಸೀಸನ್ ಹತ್ತರ ಕಳೆದ ವಾರದ ಕೆಲವು ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚರ್ಚೆ ನಡೆಯುತ್ತಿದೆ. ಅದನ್ನು ಗಮನಿಸಿದ ಕಿಚ್ಚ ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಬಗ್ಗೆಯೇ ಚರ್ಚೆ ನಡೆಸಲಿದ್ದಾರೆ.
‘ವಾರಪೂರ್ತಿ ಟಾಸ್ಕ್ ಆಡಿ ಲೀಡ್‌ನಲ್ಲಿದ್ದೊರನ್ನು ಬಿಟ್ಟು ವೋಟಿಂಗ್ ಆಧಾರದ ಮೇಲೆ ಫಿನಾಲೆ ಟಿಕೆಟ್ ಕೊಟ್ಟಿದ್ದು ತಪ್ಪಾ? ಹಾಗಾದರೆ ಎಲ್ಲರೂ ನ್ಯಾಯ ಎಂದು ಯಾವುದನ್ನು ಅಂದುಕೊಂಡಿದ್ದಾರೋ, ಅದು ಸಿಗಬೇಕಾಗಿದ್ದು ಯಾರಿಗೆ? ಈ ಎಲ್ಲದರ ಬಗ್ಗೆ ಈ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆ ಮಾಡೋಣ’ ಎಂದು ಕಿಚ್ಚ ಹೇಳಿರುವುದು ಪ್ರೋಮೊದಲ್ಲಿ ಕಾಣಿಸಿದೆ. ಕಳೆದ ವಾರದ ಆರಂಭದಲ್ಲಿ, ಎಲ್ಲರಿಗೂ ವೈಯಕ್ತಿಕ ಟಾಸ್ಕ್ ನೀಡುತ್ತಾರೆ. ಅದರಲ್ಲಿ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದುಕೊಂಡವರಲ್ಲಿ ಒಬ್ಬರು ಫಿನಾಲೆಗೆ ನೇರವಾಗಿ ಆಯ್ಕೆಯಾಗುತ್ತಾರೆ ಎಂದು ಬಿಗ್‌ಬಾಸ್ ಹೇಳಿದ್ದರು.
ಅದೇ ಪ್ರಕಾರ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಾರಾಂತ್ಯದ ಹೊತ್ತಿಗೆ ಪ್ರತಾಪ್ 420 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. 300 ಅಂಕಗಳನ್ನು ಪಡೆದ ಸಂಗೀತಾ ಎರಡನೇ ಸ್ಥಾನದಲ್ಲಿದ್ದರು ಮತ್ತು 210 ಅಂಕಗಳನ್ನು ಪಡೆದ ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಕೊನೆಯಲ್ಲಿ ಬಿಗ್‌ಬಾಸ್ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ಸದಸ್ಯರ ಪೈಕಿ ಯಾರು ಫಿನಾಲೆಗೆ ಹೋಗಲು ಅರ್ಹರು ಎಂಬ ನಿರ್ಧಾರವನ್ನು ಬಹುಮತದ ಆಧಾರದ ಮೇಲೆ ಕೈಗೊಳ್ಳಲು ಮನೆಯ ಉಳಿದೆಲ್ಲ ಸದಸ್ಯರಿಗೆ ಸೂಚಿಸಿದ್ದರು. ಅದರಲ್ಲಿ ತುಕಾಲಿ ಸಂತೋಷ್, ಕಾರ್ತಿಕ್ ಮತ್ತು ತನಿಷಾ ಮೂವರೂ ಸಂಗೀತಾ ಅವರಿಗೆ ವೋಟ್ ಮಾಡಿದ್ದರು. ಹೀಗಾಗಿ ಅತಿ ಹೆಚ್ಚು ವೋಟ್ ಪಡೆದ ಸಂಗೀತಾ ಫಿನಾಲೆಗೆ ನೇರ ಟಿಕೆಟ್ ಪಡೆದುಕೊಂಡಿದ್ದರು.
ವಾರವಿಡೀ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಅಂಕ ಪಡೆದಿರುವ ಪ್ರತಾಪ್ ಬಿಟ್ಟು ಸಂಗೀತಾ ಅವರಿಗೆ ಫಿನಾಲೆ ಟಿಕೆಟ್ ಕೊಟ್ಟಿದ್ದು ಸರಿಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುದೀಪ್, ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಕುರಿತಾದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಹಾಗಾದರೆ ಸುದೀಪ್ ಈ ವಿಷಯವನ್ನು ಹೇಗೆ ಬಗೆಹರಿಸುತ್ತಾರೆ? ಯಾವುದು ಸರಿ? ಯಾವುದು ತಪ್ಪು? ಈ ಎಲ್ಲ ಪ್ರಶ್ನೆಗಳಿಗೆ ಈ ಸಂಜೆಯ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಲಿದೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ