ಬೆಂಗಳೂರು: ಭಾವುಕವಾಗಿ (BBK SEASON 10) ಎಲ್ಲವನ್ನೂ ಬಿಗ್‌ಬಾಸ್ ಜತೆಗೆ ಹಂಚಿಕೊಂಡು ಹಗುರಾಗಿದ್ದ ಸ್ಪರ್ಧಿಗಳ ತಲೆಯ ಮೇಲೆ ಮರುಕ್ಷಣವೇ ಎಲಿಮಿನೇಷನ್‌ನ ತೂಗುಗತ್ತಿ ತೂಗಲಾರಂಭಿಸಿದೆ. ಅದರ ಸೂಚನೆ ಕಂಡಿದ್ದು ಜಿಯೋ ಸಿನಿಮಾ ಬಿಡುಗಡೆ ಮಾಡಿದ ಪ್ರೋಮೊದಲ್ಲಿ.
ಒಂದು ಕೋಣೆಯಲ್ಲಿ ಎಲ್ಲ ಸದಸ್ಯರ ಫೋಟೊಗಳಿವೆ. ಒಬ್ಬೊಬ್ಬ ಸದಸ್ಯನೂ ಒಂಟಿಯಾಗಿ ಕೋಣೆಯೊಳಗೆ ಹೋಗಿ ನಾಮಿನೇಟ್ ಮಾಡಲು ಇಚ್ಛಿಸುವ ಸದಸ್ಯರ ಫೋಟೊವನ್ನು ಗೋಡೆಗೆ ಸಿಕ್ಕಿಸಬೇಕು. ತುಕಾಲಿ ಸಂತೋಷ್ ಅವರು, ಸಂಗೀತಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ‘ಜಗಳವಾಡಲಿಕ್ಕೆ, ಇಷ್ಟೆಲ್ಲ ಅವಾಂತರವಾಗಲಿಕ್ಕೆ ಸಂಗೀತಾನೇ ಕಾರಣ. ಹಾಗಾಗಿ ಅವರನ್ನು ನಾಮಿನೇಟ್ ಮಾಡ್ತೀನಿ’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. ಹಾಗೆಯೇ ಪ್ರತಾಪ್ ಅವರು ಮೇಲ್ನೋಟಕ್ಕೆ ಚೆನ್ನಾಗಿ ನೋಡಿದರೂ ಒಳಗೊಳಗೇ ತಮ್ಮ ಬಗ್ಗೆ ಅನುಮಾನವಿದೆ. ನನ್ನ ಮೇಲೆ ಅವರಿಗೆ ತುಂಬ ಕೋಪವಿದೆ ಎಂದೂ ಹೇಳಿದ್ದಾರೆ.
ಮೈಕಲ್ ಅವರನ್ನು ನಾಮಿನೇಟ್ ಮಾಡಿರುವ ಡ್ರೋಣ್, ‘ಮೈಕಲ್ ಅವರು ಆಟ ಎಂದು ಬಂದಾಗ ಹದ್ದು ಮೀರುತ್ತಾರೆ’ ಎಂದು ಕಾರಣ ಕೊಟ್ಟಿದ್ದಾರೆ. ತನಿಷಾ ಅವರನ್ನು ನಾಮಿನೇಟ್ ಮಾಡಿರುವ ವರ್ತೂರ್, ‘ಎದುರಾಳಿ ತಂಡದ ಸದಸ್ಯರಿಗೆ ರೆಸ್ಪೆಕ್ಟ್ ಕೊಡದೇ ಮಾತಾಡುತ್ತಾರೆ’ ಎಂದು ಹೇಳಿದ್ದಾರೆ. ವಿನಯ್ ಅವರನ್ನು ನಾಮಿನೇಟ್ ಮಾಡಿರುವ ಸಂಗೀತಾ, ‘ಪ್ರತಿಸಲ ನನ್ನನ್ನೇ ಟಾರ್ಗೇಟ್ ಮಾಡುತ್ತಾರೆ. ರೇಗಿಕೊಂಡು, ಟಾಂಟ್ ಕೊಟ್ಟುಕೊಂಡೇ ಮಾತಾಡುತ್ತಾರೆ’ ಎಂಬ ಕಾರಣ ನೀಡಿದ್ದಾರೆ. ಕಾರ್ತಿಕ್, ಸಿರಿ ಅವರನ್ನು ನಾಮಿನೇಟ್ ಮಾಡಿದ್ದರೆ, ಸಿರಿ, ಪವಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಒಟ್ಟಾರೆ, ಸಂಗೀತಾ, ಪ್ರತಾಪ್, ಸಿರಿ, ಪವಿ, ಮೈಕಲ್, ವಿನಯ್, ತನಿಷಾ ಈ ವಾರ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: BBK SEASON 10: ನಮ್ರತಾ ಬಗೆಗಿನ ಆಕರ್ಷಣೆ ನೈಜ! ನ್ಯಾಯವಾಗಿ ಆಡಿದ್ದೇ ಹಿನ್ನಡೆಯಾಯ್ತು!
ಒಟ್ಟಾರೆ ಈ ವಾರದ ಆರಂಭ ಭಾವಪೂರ್ಣವಾಗಿದೆ. ಮನದೊಳಗೆ ಬಚ್ಚಿಟ್ಟುಕೊಂಡಿದ್ದ ಹಲವು ನೋವುಗಳನ್ನು, ಅವಮಾನ, ಹಿಂಜರಿಕೆಗಳನ್ನು ಹಂಚಿಕೊಂಡಿರುವ ಸದಸ್ಯರು ಹಗುರಾಗಿದ್ದಾರೆ. ನೋವನ್ನು ಹಂಚಿಕೊಂಡ ಮನುಷ್ಯ ಹೊಸತಾಗುತ್ತಾನಂತೆ. ಹಾಗಾದರೆ ಈ ವಾರದ ಬಿಗ್‌ಬಾಸ್‌ನಲ್ಲಿ ಹೊಸದೊಂದು ಪ್ರತಿಭೆ ಕಾಣಿಸಿಕೊಳ್ಳಲಿದೆಯಾ? ಹೊಸ ಉತ್ಸಾಹದೊಂದಿಗೆ, ಹೊಸ ಹೊಸ ಕ್ರಿಯೇಟಿವ್ ಯೋಚನೆಗಳೊಂದಿಗೆ ಸದಸ್ಯರು ಆಡಲಿದ್ದಾರಾ? ಈ ನಿರೀಕ್ಷೆಯಂತೂ ಎಲ್ಲರಲ್ಲೂ ಇದ್ದೇ ಇದೆ. ಅದು ನಿಜವಾಗುತ್ತದಾ ಎಂಬುದನ್ನು ಬಿಗ್‌ಬಾಸ್ ಮನೆಯ ಸದಸ್ಯರ ನಡವಳಿಕೆಯೇ ನಿರ್ಧರಿಸುತ್ತದೆ.