ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10 (BBK SEASON 10) ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಂಗೀತಾ ಶೃಂಗೇರಿ ಫಿನಾಲೆಗೆ ನೇರ ಟಿಕೆಟ್ ಪಡೆದುಕೊಂಡಿದ್ದಾರೆ. ಇನ್ನೂ ಯಾರೆಲ್ಲ ಅಂತಿಮ ಹಂತಕ್ಕೆ ಹೋಗಲಿದ್ದಾರೆ ಎನ್ನುವ ಕುತೂಹಲ ಕೆರಳಿದೆ. ಈ ಮಧ್ಯೆ ಬಿಗ್‌ಬಾಸ್ ಮನೆಯಲ್ಲಿ ಈ ಸೀಸನ್‌ನ ಕೊನೆಯ ಉತ್ತಮ ಹಾಗೂ ಕಳಪೆ ಪ್ರಕ್ರಿಯೆಯೂ ನಡೆದಿದೆ.
ಯಾರಿಗೆ ಉತ್ತಮ, ಕಳಪೆ ಪಟ್ಟ?
ಈ ಬಾರಿ ಮನೆಯ ಸದಸ್ಯರ ಪೈಕಿ ಉತ್ತಮ ಪಟ್ಟ ಮುಡಿಗೇರಿಸಿಕೊಂಡವರು ಡ್ರೋನ್ ಪ್ರತಾಪ್. ಈ ವಾರವೆಲ್ಲ ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರತಾಪ್ ಪರವಾಗಿ ಮನೆಯ ಹಲವು ಸ್ಪರ್ಧಿಗಳು ಮತ ಚಲಾಯಿಸಿದರು. ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 10ರ ಕಟ್ಟ ಕಡೆಯ ಕಳಪೆ ಪಟ್ಟ ಪ್ರಾಪ್ತಿಯಾಗಿದ್ದು ತುಕಾಲಿ ಸಂತು ಅವರಿಗೆ. ಹೆಚ್ಚಿನ ಸ್ಪರ್ಧಿಗಳು ತುಕಾಲಿ ಅವರನ್ನು ಕಳಪೆ ಎಂದು ಸೂಚಿಸಿದ್ದರಿಂದ ಅವರನ್ನು ಬಿಗ್‌ಬಾಸ್ ಮನೆಯ ಜೈಲಿಗೆ ಕಳುಹಿಸಲಾಯಿತು.
ಉತ್ತಮ-ಕಳಪೆ ಸ್ಪರ್ಧಿಗಳ ತೀರ್ಮಾನವಾದ ಬಳಿಕ ಒಂದಷ್ಟು ನಾಟಕೀಯ ಸನ್ನಿವೇಶ ಸೃಷ್ಟಿಯಾಗಿತ್ತು. ಕಳಪೆಯಾಗಿ ಆಯ್ಕೆಯಾದ ತುಕಾಲಿ ಸಂತು, ʼʼಇದನ್ನು ನಾನು ಒಪ್ಪುವುದಿಲ್ಲ, ಕೆಲವೇ ನಿಮಿಷಗಳು ನಡೆಯುವ ಟಾಸ್ಕ್ನ ಆಧಾರದಲ್ಲಿ ಕಳಪೆ ನೀಡುವುದು ಸರಿಯಾದ ಕ್ರಮವಲ್ಲ. ನನಗೆ ಇದು ಒಪ್ಪಿಗೆ ಇಲ್ಲ. ಆದರೆ ನಿಯಮದ ಪ್ರಕಾರ ಒಪ್ಪಲೇ ಬೇಕಿದೆ ಎಂಬ ಕಾರಣಕ್ಕೆ ನಾನು ಇದನ್ನು ತೆಗೆದುಕೊಳ್ಳುತ್ತಿದ್ದೇನೆʼʼ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದರು. ಅವರ ಪರವಾಗಿ ನಿಂತ ವರ್ತೂರು ಸಂತೋಷ್, ʼʼನಾನು ಜೈಲಿನ ಪಕ್ಕದಲ್ಲಿಯೇ ಇರುತ್ತೇನೆ. ಜೈಲು ಬಹಳ ಒಳ್ಳೆಯ ಸ್ಥಳ, ಇಲ್ಲಿಗೆ ಹೋಗಿ ಹೊರಗೆ ಬಂದವರು ಇತಿಹಾಸ ನಿರ್ಮಿಸುತ್ತಾರೆ. ಹೋಗಿ ಬಾ’ʼ ಎಂದು ಸಮಾಧಾನ ಮಾಡಿ ಅವರನ್ನು ಒಳಗೆ ಕಳಿಸಿದರು.
ಮೊದಲ ಬಾರಿ ಕಳಪೆ ಪಟ್ಟ
ಇನ್ನೊಂದು ವಿಶೇಷ ಎಂದರೆ ತುಕಾಲಿ ಸಂತು ಇದೇ ಮೊದಲ ಬಾರಿಗೆ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಇಷ್ಟು ದಿನ ಕಳಪೆ ಪಟ್ಟ ಪಡೆಯದೇ ವಿಶೇಷ ಸಾಧನೆ ಮಾಡಿದ್ದ ತುಕಾಲಿ ಸಂತು ಅವರ ಅದೃಷ್ಟ ಈ ವಾರ ಯಾಕೋ ಕೈ ಕೊಟ್ಟಿದೆ. ಕಾರ್ತಿಕ್, ಡ್ರೋನ್ ಪ್ರತಾಪ್ ಸೇರಿ ಬಹುತೇಕ ಸದಸ್ಯರ ʼಕಳಪೆʼ ಓಟು ವೋಟು ಸಂತುಗೆ ಕಡೆಯೇ ಇದ್ದವು.
ಇದನ್ನೂ ಓದಿ: BBK SEASON 10: ವಿನಯ್ ಮಾತಿಗೆ ನಮ್ರತಾ ಕಣ್ಣೀರು; ‘ನೀನೇ ಸಾಕಿದ ಗಿಣಿ’ ಎಂದು ತಿವಿದ ತುಕಾಲಿ!
ʻಟಿಕೆಟ್ ಟು ಫಿನಾಲೆʼ
ಬಿಗ್‌ಬಾಸ್ ಮನೆಯಲ್ಲಿ ಆರಂಭದಿಂದಲೂ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಸಂಗೀತಾ ಶೃಂಗೇರಿ ಈಗಾಗಲೇ ಫೈನಲ್ ಪ್ರವೇಶಿಸಿದ್ದಾರೆ. ʻಕ್ಯಾಪ್ಟನ್ಸಿ ಟಾಸ್ಕ್ʼ ಹಾಗೂ ʻಟಿಕೆಟ್ ಟು ಫಿನಾಲೆʼ ಎರಡನ್ನೂ ಅವರು ಗೆದ್ದುಕೊಂಡಿದ್ದಾರೆ. ಈ ವಾರವೂ ಸಂಗೀತಾ ಕ್ಯಾಪ್ಟನ್ ಆಗಲಿದ್ದಾರೆ. ಸದ್ಯ ದೊಡ್ಮನೆಯಲ್ಲಿ ತುಕಾಲಿ ಸಂತು, ತನಿಷಾ ಕುಪ್ಪುಂಡ, ಕಾರ್ತಿಕ್ ಮಹೇಶ್, ವರ್ತೂರ್ ಸಂತೋಷ್, ನಮ್ರತಾ ಗೌಡ, ವಿನಯ್ ಗೌಡ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಇದ್ದಾರೆ. ಚಾಂಪಿಯನ್ ಪಟ್ಟ ಯಾರಿಗೆ ದೊರೆಯಲಿದೆ ಎನ್ನುವ ಕುರಿತು ಈಗಾಗಲೇ ಲೆಕ್ಕಾಚಾರ ಆರಂಭವಾಗಿದೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ