Site icon Vistara News

BBK Season 10 : ಅವಿನಾಶ್‌ ವೇಸ್ಟ್‌ ಎಂದ ವಿನಯ್‌; ಐವರ ನಾಮಿನೇಷನ್‌ ಅಧಿಕಾರ ಕಿತ್ತುಕೊಂಡ ಬಿಗ್‌ಬಾಸ್‌

Avinash Shetty and Vinay Gowda Bigg Boss

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ನ (BBK Season 10) 11ನೇ ವಾರದ ಆಟ ಆರಂಭವಾಗಿದೆ. ಸೋಮವಾರದ ಮಹತ್ವದ ನಾಮಿನೇಷನ್‌ ಟಾಸ್ಕ್‌ನಲ್ಲಿ (Nomination Task) ಒಂದು ಭಾಗ ಪೂರ್ಣಗೊಂಡಿದೆ. ಈ ಬಾರಿಯ ನಾಮಿನೇಷನ್‌ ವಿಶೇಷತೆ ಏನೆಂದರೆ, ಮನೆಯ ಸದಸ್ಯರು ಮತಗಳ ಮೂಲಕ ಐವರನ್ನು ನಾಮಿನೇಷನ್‌ ಅಧಿಕಾರದಿಂದ ಹೊರಗಿಡುವುದು! ಈ ನಡುವೆ, ಈ ಪ್ರಕ್ರಿಯೆಯಲ್ಲೂ ವಿನಯ್‌ ಗೌಡ (Vinay Gowda) ತಮ್ಮ ಆಕ್ರಮಣವನ್ನು ಮುಂದುವರಿಸುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

11ನೇ‌ ವಾರದಲ್ಲಿ ಬಿ‌ಗ್‌ ಬಾಸ್‌ ಮನೆಯಲ್ಲಿ 12 ಸ್ಪರ್ಧಿಗಳಿದ್ದಾರೆ. ವಿನಯ್ ಗೌಡ (Vinay Gowda), ಕಾರ್ತಿಕ್ ಮಹೇಶ್‌ (Karthik Mahesh), ನಮ್ರತಾ ಗೌಡ, ಮೈಕಲ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ ಹಾಗೂ ಸಿರಿ ಇವರು ಈಗ ಉಳಿದವರು. ಸ್ನೇಹಿತ್‌ ಅವರು 10ನೇ ವಾರ ಎಲಿಮಿನೇಟ್‌ ಆದಾಗ ನಮೃತಾ ಗೌಡ ಅವರಿಗೆ ವಿಶೇಷ ಅಧಿಕಾರವನ್ನು ನೀಡಿದ್ದರು. ಆ ಅಧಿಕಾರ ಏನು ಎನ್ನುವುದನ್ನು ಬಿಗ್‌ ಬಾಸ್‌ ಇನ್ನೂ ಹೇಳಿಲ್ಲ. ಆದರೆ, ಈಗ ನಾಮಿನೇಷನ್‌ ಅಧಿಕಾರವನ್ನು ಕಿತ್ತುಕೊಳ್ಳುವ ಆಟದಲ್ಲಿ ಅವರನ್ನು ಹೊರಗಿಡಲಾಗಿತ್ತು.

ಬಿಗ್‌ ಬಾಸ್‌ ಮನೆಯ ಎಲ್ಲ ಸದಸ್ಯರಿಗೆ ತಲಾ ನಾಲ್ಕು ಮಂದಿಯನ್ನು ನಾಮಿನೇಷನ್‌ ಅಧಿಕಾರದಿಂದ ಹೊರಗಿಡುವ ವೋಟಿಂಗ್‌ ಚಟುವಟಿಕೆ ನಡೆಸಿದರು. ಇದರಂತೆ ಅತಿ ಹೆಚ್ಚು ಮತಗಳನ್ನು ಪಡೆದವರು ವಿನಯ್‌. ಅವರಿಗೆ ಎಂಟು ಮತಗಳು ಬಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಪವಿ ಪೂವಪ್ಪ ಅವರಿಗೆ ಏಳು ಮಂದಿ ಮತ ಹಾಕಿದ್ದರು. ತನಿಷಾ ಅವರು ಆತ ಮತ ಪಡೆದಿದ್ದಾರೆ. ಬಿಗ್‌ ಬಾಸ್‌ ಆರಂಭದಲ್ಲಿ ನಾಲ್ಕು ಮಂದಿಯನ್ನು ನಾಮಿನೇಷನ್‌ ಅಧಿಕಾರದಿಂದ ಹೊರಗಿಡುವ ಚಟುವಟಿಕೆ ಇದು ಎಂದು ಹೇಳಿದ್ದರು. ಆದರೆ, ಮೈಕೆಲ್‌ ಮತ್ತು ಅವಿನಾಶ್‌ ಅವರಿಗೆ ತಲಾ ಐದು ಮತಗಳು ಬಂದಿದ್ದರಿಂದ ಅವರಿಬ್ಬರನ್ನೂ ಸೇರಿಸಿ ಒಟ್ಟು ಐವರನ್ನು ನಾಮಕರಣ ಅಧಿಕಾರದಿಂದ ಹೊರಗೆ ಇರಿಸಲಾಗಿದೆ.

ಈಗ ಬಾಕಿ ಉಳಿದಿರುವ ಏಳು ಮಂದಿ ಮಂಗಳವಾರ ನಾಮಿನೇಷನ್‌ ಮಾಡುವ ಅಧಿಕಾರ ಹೊಂದಿದ್ದಾರೆ. ಅಂದರೆ ನಮೃತಾ, ಕಾರ್ತಿಕ್‌, ವರ್ತೂರು ಸಂತೋಷ್‌, ತುಕಾಲಿ ಸಂತೋಷ್‌, ಸಿರಿ, ಸಂಗೀತ, ಡ್ರೋನ್‌ ಪ್ರತಾಪ್‌ ಅವರು ನಾಮಿನೇಷನ್‌ ಮತ ಹಾಕಲಿದ್ದಾರೆ. ಅವರಲ್ಲಿ ಯಾರಿಗೆ ಅತಿ ಹೆಚ್ಚು ಮತಗಳು ಬರುವುದೋ ಅವರು ನಾಮಿನೇಷನ್‌ ಆಗಲಿದ್ದಾರೆ.

ಈ ನಡುವೆ ನಮೃತಾ ಅವರಿಗೆ ಯಾವ ಅಧಿಕಾರ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದೋ ಯಾರನ್ನಾದರೂ ನಾಮಿನೇಷನ್‌ನಿಂದ ರಕ್ಷಣೆ ಮಾಡುವ ಇಲ್ಲವೇ ನೇರವಾಗಿ ನಾಮಿನೇಟ್‌ ಮಾಡುವ ಅಧಿಕಾರವನ್ನು ಅವರು ಪಡೆಯಲಿದ್ದಾರೆ. ಒಂದೊಮ್ಮೆ ನಾಮಿನೇಷನ್‌ನಿಂದ ಪಾರು ಮಾಡುವ ಅಧಿಕಾರ ಸಿಕ್ಕಿದರೆ ಅವರು ವಿನಯ್‌ ಅವರನ್ನು ಪಾರು ಮಾಡುವುದು ಖಚಿತವಾಗಿದೆ.

ಇದನ್ನೂ ಓದಿ : BBK SEASON 10: ಪ್ರತಾಪ್‌ ಕಂಡರೆ ಇಷ್ಟ ಅಂದಿದ್ಯಾಕೆ ಸಂಗೀತಾ?

ನಾಮಿನೇಷನ್‌ನಲ್ಲೂ ವಿನಯ್‌ ಆಕ್ರಮಣ!

ಯಾರಿಗೆ ನಾಮಿನೇಷನ್‌ ಅಧಿಕಾರ ನೀಡಬಾರದು ಎಂದು ತಿಳಿಸುವ ಟಾಸ್ಕ್‌ನಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಎರಡು ವಾರದ ಹಿಂದೆ ಎಂಟ್ರಿ ಪಡೆದ ಅವಿನಾಶ್‌ ಅವರು ವಿನಯ್‌ ಅವರ ಹೆಸರು ಎತ್ತಿಕೊಂಡರು. ವಿನಯ್‌ ಅವರು ನನಗೆ ಗೌರವ ಕೊಡುತ್ತಿಲ್ಲ. ಅಪಮಾನಕಾರಿಯಾಗಿ ಮಾತನಾಡುತ್ತಿದ್ದಾರೆ, ನನ್ನನ್ನು ಒಬ್ಬ ಸ್ಪರ್ಧಿಯಂತೆಯೂ ಕನ್ಸಿಡರ್‌ ಮಾಡುತ್ತಿಲ್ಲ ಎಂದು ಹೇಳಿದ್ದರು.

ಇದಕ್ಕೆ ಜಿದ್ದಿಗೆ ಬಿದ್ದಂತೆ ಪ್ರತಿಕ್ರಿಯೆ ನೀಡಿದ ವಿನಯ್‌ ಅವರು, ನಾನು ನಿಮಗೆ ಅಗೌರವ ತೋರಿಸಿಲ್ಲ. ನಿಮಗೆ ನಾಮಿನೇಟ್‌ ಮಾಡುವ ಅಧಿಕಾರವಷ್ಟೇ ಅಲ್ಲ, ಈ ಬಿಗ್‌ ಬಾಸ್‌ ಮನೆಯಲ್ಲಿ ಇರುವ ಅರ್ಹತೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವಿನಯ್‌ ತಮ್ಮ ಆಕ್ರಮಣಕಾರಿ ವರ್ತನೆ ಮುಂದುವರಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ನೀರು ಎರಚುವ ಟಾಸ್ಕ್‌ ನಲ್ಲಿ ಕ್ರೌರ್ಯ ಮೆರೆದ ಕಾರಣಕ್ಕೆ ಎಲ್ಲರಿಂದ ದೂಷಿಸಲ್ಪಟ್ಟಾಗ ಪಶ್ಚಾತ್ತಾಪ ಪಟ್ಟವರಂತೆ ಕಂಡ ವಿನಯ್‌ ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ ಎಂದು ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.

Exit mobile version