ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ಈಗಾಗಲೇ ಆರು ಸ್ಪರ್ಧಿಗಳು ಮನೆಯಿಂದ ಹೊರ ನಡೆದಿದ್ದಾರೆ. ಎಂಟನೇ ವಾರಕ್ಕೆ ಸಂಚಿಕೆ ಕಾಲಿಟ್ಟಿದ್ದು, ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮಾಜಿ ಸ್ಪರ್ಧಿಗಳಾದ ಸೋನು ಗೌಡ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಬರಲಿದ್ದಾರೆ ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಮನೆಯಲ್ಲಿ ಸದಸ್ಯರು ಕಡಿಮೆ ಆದ ಹಾಗೇ ಆತ್ಮೀಯರಾಗಿದ್ದವರು ಕೂಡ ಪರಸ್ಪರ ಕಚ್ಚಾಡುತ್ತಿದ್ದಾರೆ. ಇತ್ತೀಚೆಗೆ ಮನೆಯಲ್ಲಿ ಸಣ್ಣ ವಿಚಾರಕ್ಕೂ ಸ್ಪರ್ಧಿಗಳ ಮಧ್ಯೆ ಜಗಳಗಳು ಆಗುತ್ತಿವೆ.
ಸೋನು ಗೌಡ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಸೋನು ಗೌಡ ಬಂದರೆ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಅದರಲ್ಲಿಯೂ ಒಟಿಟಿ ಸೀಸನ್ನಲ್ಲಿ ರಾಕೇಶ್ ಜತೆ ಆಪ್ತವಾಗಿ ಇದ್ದರು. ಇದೀಗ ರಾಕೇಶ್ ಅವರು ಅಮೂಲ್ಯ ಜತೆ ಉತ್ತಮ ಗೆಳೆತನ ಹೊಂದಿದ್ದಾರೆ. ಸೋನು ಗೌಡ ಮನೆ ಪ್ರವೇಶಿಸಿದರೆ ರಾಕೇಶ್ ಮತ್ತು ಅಮೂಲ್ಯ ನಡುವೆ ಭಿನ್ನಾಭಿಪ್ರಾಯ ಆಗಲಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Bigg Boss Kannada | ಭಿನ್ನಮತಕ್ಕೆ ಕಾರಣವಾದ ಒಮ್ಮತದ ಚರ್ಚೆ: ರೂಪೇಶ್ ಶೆಟ್ಟಿಗೆ ಚಿಕ್ಕ ಲೋಟ, ದೊಡ್ಡ ಶಿಕ್ಷೆ!
ಚಕ್ರವರ್ತಿ ಚಂದ್ರಚೂಡ್ ಅವರು ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿದ್ದರು. ಮನೆಯ ಒಳಗೆ ಹಾಗೂ ಹೊರಗೂ ಪ್ರಶಾಂತ್ ಸಂಬರಗಿ ಅವರನ್ನು ವಿರೋಧಿಸುತ್ತಲೇ ಬಂದವರು. ಈಗಾಗಲೇ ಮನೆಯಲ್ಲಿ ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಅವರ ಮಧ್ಯೆ ಜುಗಲ್ಬಂಧಿ ಆಗುತ್ತಲೇ ಇರುತ್ತದೆ. ಚಕ್ರವರ್ತಿ ಚಂದ್ರಚೂಡ್ ಅವರು ಮನೆಯನ್ನು ಪ್ರವೇಶಿಸಿದರೆ ಪ್ರಶಾಂತ್ ಸಂಬರಗಿ ಅವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ ನೆಟ್ಟಿಗರು.
ಈ ವಾರ ಮನೆಯಲ್ಲಿ ರೂಪೇಶ್ ರಾಜಣ್ಣ ಅವರ ಆಟ ಜೋರಾಗಿ ನಡೆಯುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಸ್ವತಃ ರೂಪೇಶ್ ರಾಜಣ್ಣ ಅವರು ನನಗೆ ಈ ವಾರ ಕಳಪೆ ಬರುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದರು.