ಬೆಂಗಳೂರು: ಈಗಾಗಲೇ ಹಿಂದಿ ಹಾಗೂ ತೆಲುಗು ಬಿಗ್ ಬಾಸ್ ಶುರುವಾಗಿದೆ. ಇದೀಗ ಕನ್ನಡಿಗರಿಗೆ ಕನ್ನಡದ ಬಿಗ್ ಬಾಸ್ ಯಾವಾಗ ಆರಂಭವಾಗಲಿದೆ ಎಂಬುದೇ ಕುತೂಹಲ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಕನ್ನಡ (Bigg Boss Kannada) ಬಿಗ್ ಬಾಸ್ ಸೀಸನ್ ಶುರುವಾಗಬಹುದು. ಈಗಾಗಲೇ ಅದಕ್ಕೆ ಬೇಕಾಗುವ ಸಿದ್ಧತೆಯನ್ನು ವಾಹಿನಿ ಮಾಡಿಕೊಳ್ಳುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಆದರೀಗ ಬಿಗ್ ಬಾಸ್ ತಂಡದ ಜತೆ ಕಲರ್ಸ್ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್ ಇಲ್ಲ. ಹೊಸ ಹೊಸ ಯೋಜನೆ, ಕಾನ್ಸೆಪ್ಟ್‌ಗಳ ಮೂಲಕ ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಪರಮೇಶ್ವರ್ ಗುಂಡ್ಕಲ್ ಕಲರ್ಸ್ ಕನ್ನಡ ವಾಹಿನಿಗೆ ರಾಜೀನಾಮೆ ನೀಡಿರುವ ವಿಚಾರ ಗೊತ್ತೇ ಇದೆ. ಹಾಗಾಗಿ ಹೊಸಬರ ನೇತೃತ್ವದಲ್ಲಿ ಈ ಬಾರಿಯ ಬಿಗ್ ಬಾಸ್ ಹೇಗೆ ಮೂಡಿಬರಲಿದೆ ಎಂಬುದು ಬಿಗ್ ಬಾಸ್ ಪ್ರೇಕ್ಷಕರಿಗೆ ಇರುವ ಕುತೂಹಲ.
ಸುದೀಪ್ ಅವರ ನಿರ್ವಹಣೆಯೇ ಸವಾಲು!
ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್, ವಾಹಿನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅದೇ ಮಾತೃಸಂಸ್ಥೆಯ ಮತ್ತೊಂದು ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಜಿಯೋ ಸ್ಟುಡಿಯೋಸ್ ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದಾರೆ. ಬಿಗ್ ಬಾಸ್ ಪ್ರತಿ ಜರ್ನಿಯಲ್ಲಿ ಪರಮೇಶ್ವರ್ ಗುಂಡ್ಕಲ್ ಅವರ ಶ್ರಮವಿದೆ.
ಬಿಗ್ ಬಾಸ್’ ಕಾರ್ಯಕ್ರಮ ಒಮ್ಮೆ ಶುರುವಾದರೆ, ಸುಮಾರು ಮೂರು ತಿಂಗಳ ಕಾಲ ತಾಂತ್ರಿಕ ತಂಡ ಹಗಲು-ರಾತ್ರಿ ಸಕ್ರಿಯರಾಗಿರುತ್ತದೆ. ಸುದೀಪ್ ಅವರು ಮೊದಲ ದಿನ ಆ್ಯಕ್ಷನ್ ಹೇಳಿದ ಮೇಲೆ, ಮತ್ತೆ ಫಿನಾಲೆಯಲ್ಲಿ ಕಟ್ ಹೇಳುವವರೆಗೂ ಬಿಗ್ ಬಾಸ್ ಹಿಂದೆ ಕೆಲಸ ನಿರಂತರವಾಗಿ ನಡೆಯುತ್ತದೆ. ಒಂದು ತಿಂಗಳು ಪೂರ್ವ ತಯಾರಿಯಾದರೆ, ಮೂರು ತಿಂಗಳು ಕಾರ್ಯಕ್ರಮ ಸಾಗುತ್ತದೆ. ಹೀಗಾಗಿ, ‘ಬಿಗ್ ಬಾಸ್’ ರಿಯಾಲಿಟಿ ಶೋ ಹಿಂದೆ ಕೆಲಸ ಮಾಡುವವರಿಗೆ ಇದು 150 ದಿನಗಳ ನಾನ್ ಸ್ಟಾಪ್ ಜರ್ನಿ.
ಇದನ್ನೂ ಓದಿ: Parameshwar Gundkal: ಕಲರ್ಸ್ ಕನ್ನಡ ಚಾನೆಲ್ ತೊರೆದ ಪರಮೇಶ್ವರ್ ಗುಂಡ್ಕಲ್! ಭಾವನಾತ್ಮಕ ಪೋಸ್ಟ್ ವೈರಲ್
ಪರಮೇಶ್ವರ್ ಗುಂಡ್ಕಲ್ ಇಲ್ಲದೇ ನಡೆಯುವ ಮೊದಲ ಬಿಗ್ ಬಾಸ್ ಇದು. ಬಿಗ್ ಬಾಸ್‌ನಲ್ಲಿ ಫಿಕ್ಷನ್ ಹಾಗೆಯೇ ನಾನ್ ಫಿಕ್ಷನ್ ಟೀಮ್ ಕೂಡ ಇರುತ್ತದೆ. ಕಲರ್ಸ್ ಕನ್ನಡ ಬ್ಯುಸ್‌ನೆಸ್ ಯುನಿಟ್ ಹೆಡ್ ಪ್ರಶಾಂತ್ ನಾಯ್ಕ್ ಅವರು ಪರಮೇಶ್ವರ್ ಗುಂಡ್ಕಲ್ ಅವರ ಜಾಗವನ್ನು ಈ ಬಾರಿ ತುಂಬಲಿದ್ದಾರೆ. ಬಿಗ್ ಬಾಸ್ ನಾನ್ ಫಿಕ್ಷನ್ ಟೀಂ, ಅಂದರೆ ಪ್ಲ್ಯಾನಿಂಗ್ ಮತ್ತು ಕಾರ್ಯರೂಪಕ್ಕೆ ತರುವ ಕೆಲಸವನ್ನು ಪ್ರಕಾಶ್ ಮಾಡಲಿದ್ದಾರೆ. ಈ ಹೊಸ ತಂಡಕ್ಕೆ ಸುದೀಪ್ ಅವರನ್ನು ನಿಭಾಯಿಸುವುದೇ ಒಂದು ಸವಾಲ್ ಎನ್ನುತ್ತಿದೆ ಮೂಲ. ಇಷ್ಟು ದಿನ ಪರಮೇಶ್ವರ್ ಗುಂಡ್ಕಲ್ ಹಾಗೂ ಸುದೀಪ್ ಅವರ ನಡುವೆ ಒಂದು ಒಳ್ಳೆಯ ಬಾಂಡಿಂಗ್ ಇತ್ತು. ಅಷ್ಟೇ ಅಲ್ಲದೇ ಈ ಹಿಂದಿನ ಸೀಸನ್‌ನಲ್ಲಿಯೇ ಸುದೀಪ್ ತಮ್ಮ ಕೊನೆಯ ಬಿಗ್ ಬಾಸ್ ಎಂಬರ್ಥದಲ್ಲಿ ಸುಳಿವನ್ನೂ ನೀಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಈ ಸೀಸನ್ ಸುದೀಪ್ ಅವರೇ ಹೋಸ್ಟ್ ಮಾಡಲಿದ್ದಾರೆ ಎನ್ನುತ್ತಿದೆ ಮೂಲ.
ಇದನ್ನೂ ಓದಿ: Bigg Boss: ಬಿಗ್ ಬಾಸ್ ಶೋಗೆ ಶೀಘ್ರವೇ ಸೆನ್ಸಾರ್ ಕಣ್ಗಾವಲು? ಕೇಂದ್ರ, ರಾಜ್ಯ, ಚಾನೆಲ್‌ಗಳಿಗೆ ಕೋರ್ಟ್ ನೋಟಿಸ್
ಸಿನಿಮಾಗಳಲ್ಲಿ ಬ್ಯುಸಿಯಾದ ಕಿಚ್ಚ
ಮೂಲಗಳ ಪ್ರಕಾರ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಹೊರಗಡೆಯೇ ಹೆಚ್ಚು ಇರಲಿದೆ. ಹಾಗಾಗಿ ಬಿಗ್ ಬಾಸ್ ಗಾಗಿ ಸುದೀಪ್ ಡೇಟ್ಸ್ ಹೇಗೆ ಹೊಂದಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯೇ ಶಿಫ್ಟ್ ಆಗಿದೆ ಎನ್ನುವ ಮಾಹಿತಿಯೂ ವರದಿ ಆಗಿದೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.