Site icon Vistara News

BBK Season 10: ಉರಗಪ್ರಪಂಚದ ವಿಸ್ಮಯ‌ ಬಿಚ್ಚಿಟ್ಟ ಸ್ನೇಕ್‌ ಶ್ಯಾಮ್‌; ಬೆಚ್ಚಿ ಬಿದ್ದ ಸ್ಪರ್ಧಿಗಳು

Competitors are amazed by the wonder of the reptile world snake shyam

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಸ್ನೇಕ್‌ ಶ್ಯಾಮ್‌ ಅವರು ಅಸಮರ್ಥ ತಂಡದಲ್ಲಿದ್ದಾರೆ. ಹಲವು ಸಾವಿರ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸ್ನೇಕ್‌ ಶ್ಯಾಮ್‌ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ಇದೀಗ ಸಾಬೀತುಪಡಿಸಿದ್ದಾರೆ.

ಸ್ಪರ್ಧಿಗಳೆಲ್ಲ ಈಜುಕೊಳದ ಬಳಿ ಆರಮವಾಗಿ ಕೂತು ಹರಟೆ ಹೊಡೆಯುತ್ತಿದ್ದಾಗ ಸ್ನೇಕ್ ಶ್ಯಾಮ್‌ ಅವರು ಹಾವುಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು ನಿರರ್ಗಳವಾಗಿ ತೆರೆದಿಟ್ಟಿದ್ದಾರೆ. ಅವರು ಹೇಳಿದ ಸಂಗತಿಗಳನ್ನು ಕೇಳಿ ಉಳಿದ ಸ್ಪರ್ಧಿಗಳು ಬೆಕ್ಕಸ ಬೆರಗಾಗಿದ್ದಾರೆ.

ಹಾವುಗಳ ನಮ್‌ ಥರ ಅಲ್ಲ

ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆ ಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೀಟಿಂಗ್‌ ಎರಡಕ್ಕೇನೇ. ನಮ್ ಥರ ಅಲ್ಲ… ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ. ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವತನಕ ಕಾಯುತ್ತದೆ. ನಮ್ ಥರ ಒಂಬತ್ತು ತಿಂಗ್ಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಅಂತೆಲ್ಲ ಮಾಡಲ್ಲ… ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರತ್ತೆ. ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ.

ಇದನ್ನೂ ಓದಿ; BBK Season 10: ನಿಮ್ಮ ಜತೆ ನಾವಿದ್ದೇವೆ ʻಡ್ರೋನ್‌ʼ ಎಂದ ಪ್ರೇಕ್ಷಕರು; ಕಿಚ್ಚನ ಚಪ್ಪಾಳೆಗೆ ಬೇಡಿಕೆ!

ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ

ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕತ್ತೆ. ಅವು ಯಾವವೆಂದರೆ, ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತೆ ಮಂಡಲ ಹಾವು -ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತೆ. ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ. ಒಂದು ವಿಷಯ ಹೇಳ್ಬೇಕು, ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವೆ ನಮ್ಮ ಥರ ಹುಟ್ಟಿದ ಮೇಲೆ ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಅವರ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ.

ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡುಹಾವು ಇಲ್ಲ. ಹೆಣ್ಣು ಹಾವೇ ಸೆಲ್ಫ್‌ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತದೆ. ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರುತ್ತೀರಾ. ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಟಾಯ್ಲೆಟ್‌ನಲ್ಲೆಲ್ಲ ಓಡಾಡ್ತಿರತ್ತೆ, ಪಿಣಿಪಿಣಿಪಿಣಿ ಅಂತ. ಎರೆಹುಳದ ಥರ ಇರತ್ತೆ. ಅದು ಭಾರತದಲ್ಲಿನ ಅತಿಸಣ್ಣ ಹಾವು. ಅದು ರಿಪ್ರೊಡಕ್ಷನ್‌ ಅನ್ನು ಅದೇ ಮಾಡಿಕೊಳ್ಳುತ್ತದೆ. ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿಯ ಹಾವು ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದು ಕಿಂಗ್ ಕೋಬ್ರಾ!!’ ಹೀಗೆ ಸ್ನೇಕ್‌ ಶ್ಯಾಮ್‌ ಅವರು ಉರಗ ಪ್ರಪಂಚದ ವಿಸ್ಮಯ ಸಂಗತಿಗಳನ್ನು ಒಂದೊಂದಾಗಿ ಹೇಳುತ್ತಿದ್ದರೆ ಸ್ಪರ್ಧಿಗಳು ಮೈಮರೆತು ಕೇಳುತ್ತಿದ್ದರು.

Exit mobile version