Site icon Vistara News

BBK Season 10: ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ? ‘ಡ್ರೋನ್‌’ ಬೆಂಬಲಕ್ಕೆ ನಿಂತ ಕಿಚ್ಚ!

Kiccha stands in support of Drone Pratap

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ನ (BBK Season 10)ಮೊದಲ ವೀಕೆಂಡ್‌ ಎಪಿಸೋಡ್‌, ವಾರದ ಕಿಚ್ಚನ ಜೊತೆ ನಡೆದಿದೆ. ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್‌ಸಮ್‌ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್‌ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು. ಎಲ್ಲ ಸ್ಪರ್ಧಿಗಳ ವೀಕ್‌ನೆಸ್‌ಗಳನ್ನು, ಬಿಗ್‌ಬಾಸ್ ಮನೆಯಲ್ಲಿ ನಡೆದ ತಪ್ಪುಗಳನ್ನು, ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ಸೂಚ್ಯವಾಗಿ ಹೇಳಿದರು. ಜತೆಗೆ ನಗಿಸಿದರು, ಕಾಲೆಳೆದರು. ಹಾಗೆಯೇ ಬಿಗ್‌ಬಾಸ್‌ ರೂಲ್ಸ್‌ ಬಗ್ಗೆ ಎಚ್ಚರಿಸಿದರು. ಇದರ ಜತೆಗೆ ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ? ಎಂದು ತುಕಾಲಿ ಸಂತೋಷ್‌ ಅವರಿಗೆ ಸುದೀಪ್‌ ಕ್ಲಾಸ್‌ ತೆಗದುಕೊಂಡರು.

ಮನೆಯಲ್ಲಿ ಡ್ರೋನ್‌ ಪ್ರತಾಪ್‌ ಅವರಿಗೆ ಮೊದಲ ದಿನದಿಂದಲೂ ತುಕಾಲಿ ಸಂತೋಷ್‌ ಅವರು ಪ್ರತಾಪ್‌ ಅವರಿಗೆ ವ್ಯಂಗ್ಯ ಮಾಡುತ್ತಲೇ ಇದ್ದರು. ಕೇವಲ ತುಕಾಲಿ ಮಾತ್ರವಲ್ಲ. ಸ್ನೇಹಿತ್, ವಿನಯ್, ಹಳ್ಳಿಕಾರ್ ಸಂತೋಶ್, ವಿನಯ್, ಭಾಗ್ಯಶ್ರೀ ಇನ್ನೂ ಹಲವರು ಡ್ರೋನ್ ಪ್ರತಾಪ್ ಅವರನ್ನು ಆಡಿಕೊಳ್ಳುವುದು, ಟೀಕೆ ಮಾಡುವುದು, ಪ್ರತಾಪ್ ವಿರುದ್ಧ ಜಗಳ ಮಾಡುವುದು ಮಾಡುತ್ತಿದ್ದರು. ಇದಕ್ಕೆಲ್ಲ ಸುದೀಪ್‌ ಇದೀಗ ಬ್ರೇಕ್‌ ಹಾಕಿದ್ದಾರೆ.

ತಪ್ಪಿತಸ್ಥ ಯಾರು?

ಡ್ರೋನ್‌ ಪ್ರತಾಪ್ ಅವರ ಬಗ್ಗೆ ಸುದೀಪ್ ಮಾತುಕತೆ ಶುರುಮಾಡಿದ್ದು ಒಂದು ಕಥೆಯ ಜತೆಗೆ. ‘ಒಬ್ಬ ತಪ್ಪಿತಸ್ಥ ತಪ್ಪು ಮಾಡಿದ್ದಾನೆ. ಭಗವಂತ ಅವನಿಗೆ ಶಿಕ್ಷೆ ಕೊಟ್ಟು ನಂತರ ಕ್ಷಮಿಸುತ್ತಾನೆ. ಆದರೆ ತಪ್ಪಿತಸ್ಥ ಹೊರಗೆ ಹೋದಮೇಲೆ ಸಮಾಜ ಅವನನ್ನು ಕಳ್ಳ ಸುಳ್ಳ ಎಂದೇ ಗುರ್ತಿಸುತ್ತದೆ. ಭಗವಂತ ಕ್ಷಮಿಸಿದವನ್ನು ಸಮಾಜ ದೂಷಿಸುತ್ತದೆ. ಅದೊಂದು ರೀತಿಯ ವ್ಯಕ್ತಿಯ ಕೊಲೆ.’ ಇದು ಕಥೆ. ಕಥೆ ಹೇಳಿಯಷ್ಟೇ ಅವರು ಸುಮ್ಮನಾಗಲಿಲ್ಲ.
‘ಈ ಕಥೆಯಲ್ಲಿ ಭಗವಂತ ಯಾರು? ತಪ್ಪಿತಸ್ಥ ಯಾರು? ಸಮಾಜ ಯಾರು?’ ಎಂಬ ಪ್ರಶ್ನೆ ಕಿಚ್ಚನ ಬಾಯಿಯಿಂದ ಹೊರಬೀಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿದುಬಿಟ್ಟಿತ್ತು.
ಕಿಚ್ಚ ಈ ಕಥೆಯನ್ನು ಹೇಳಿದ್ದು ಡ್ರೋನ್‌ ಪ್ರತಾಪ್ ವಿಷಯಕ್ಕೆ. ಅವರ ಬಗ್ಗೆ ವಾರವಿಡೀ, ಸಮಯ ಸಿಕ್ಕಾಗೆಲ್ಲ, ಅವಕಾಶವಾದಾಗಲೆಲ್ಲ ಆಡಿಕೊಂಡು ನಗುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ತುಕಾಲಿ ಸಂತೋಷ್ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡರು.

ಇದನ್ನೂ ಓದಿ: BBK Season 10: ಉರಗಪ್ರಪಂಚದ ವಿಸ್ಮಯ‌ ಬಿಚ್ಚಿಟ್ಟ ಸ್ನೇಕ್‌ ಶ್ಯಾಮ್‌; ಬೆಚ್ಚಿ ಬಿದ್ದ ಸ್ಪರ್ಧಿಗಳು

ಬ್ಯಾಟ್‌ಮನ್ ಜೋಕರ್!’

‘ಒಬ್ಬ ವ್ಯಕ್ತಿಯನ್ನು ಆಡಿಕೊಂಡು ಉಳಿದವರನ್ನು ನಗಿಸುವ ವ್ಯಕ್ತಿ, ಗುಡ್ ಜೋಕರ್ ಅಲ್ಲ, ಬ್ಯಾಟ್‌ಮನ್ ಜೋಕರ್!’ ಎಂದು ಎಚ್ಚರಿಸಿದರು ಕೂಡ. ‘ಪ್ರತಿಯೊಬ್ಬ ವ್ಯಕ್ತಿಯೊಳಗೂ ಅವನ ಸತ್ಯ. ಅವನ ನೋವು ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಆದರೆ ಕನಿಷ್ಠ ನಾವು ಮಾಡಬಹುದು ಸುಮ್ಮನಿರುವುದು. ತಪ್ಪು ಮಾಡಿದ ವ್ಯಕ್ತಿ ಶಿಕ್ಷೆ ಅನುಭವಿಸುತ್ತಾನೆ. ಆದರೆ ಆ ಶಿಕ್ಷೆ ನೀಡುವುದಕ್ಕೆ ನೀವ್ಯಾರು? ಇನ್ನೊಬ್ಬ ವ್ಯಕ್ತಿಯನ್ನು ತಮಾಷೆ ಮಾಡಿ ಬೇರೆಯವರನ್ನು ನಗಿಸುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ಅಳು ಹೇಗೆ ನಗುವಾಗುತ್ತದೆ?’ ಕಿಚ್ಚ ಒಂದರ ಹಿಂದೊಂದು ಪ್ರಶ್ನೆ ಕೇಳುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಮುಖದಲ್ಲಿ ಪಶ್ಚಾತ್ತಾಪ ಕಾಣಿಸಿಕೊಂಡಿತು. ಡ್ರೋನ್‌ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಕಾಲಿ ಅವರು ಸುದೀಪ್ ಎದುರಿನಲ್ಲಿಯೇ ಪ್ರತಾಪ್‌ಗೆ ಕ್ಷಮೆಯನ್ನೂ ಕೇಳಿದರು.

ನಗಿಸುವುದರಲ್ಲಿ ಯಾವ ದೊಡ್ಡತನವೂ ಇಲ್ಲ

ಕೊನೆಯಲ್ಲಿ, ‘ಒಳ್ಳೆಯ ರೀತಿಯಿಂದಲೇ ಎಲ್ಲರನ್ನೂ ನಗಿಸಬಹುದು. ಅದನ್ನು ನೀವು ಚೆನ್ನಾಗಿಯೇ ಮಾಡುತ್ತೀರಿ. ಅದನ್ನು ಮುಂದುವರಿಸಿ. ಆದರೆ ಇನ್ನೊಬ್ಬ ವ್ಯಕ್ತಿಯನ್ನು ಎದುರಿಟ್ಟುಕೊಂಡು, ಅವರನ್ನು ತಮಾಷೆ ಮಾಡಿಕೊಂಡು ಉಳಿದ ಹತ್ತು ವ್ಯಕ್ತಿಗಳನ್ನು ನಗಿಸುವುದರಲ್ಲಿ ಯಾವ ದೊಡ್ಡತನವೂ ಇಲ್ಲ’ ಎಂಬ ಹಿತವಚನವನ್ನೂ ಹೇಳಿದರು. ನಂತರ ಪ್ರತಾಪ್‌ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.

‘ಮೊದಲ ದಿನ ಬಂದಾಗ ನನ್ನ ಮನಸಲ್ಲಿ ಏನೂ ಇರಲಿಲ್ಲ. ಆದರೆ ಎಲ್ಲರೂ ಒಟ್ಟಿಗೇ ಸೇರಿದಾಗ ನನ್ನನ್ನು ನಾನು ನಿರೂಪಿಸಿಕೊಳ್ಳಬೇಕು ಎಂದು ಅನಿಸಿತು’ ಎಂದರು ಪ್ರತಾಪ್. ‘ನಮ್ಮ ತಪ್ಪುಗಳು ನಮಗೆ ಮಾತ್ರ ಗೊತ್ತಿರುತ್ತದೆ. ನಿಮ್ಮ ಒಳಗಡೆ ಒಂದು ಕಾನ್‌ಫ್ಲಿಕ್ಟ್ ಇರಬಹುದು ಅದನ್ನು ಸರಿಯಾಗಿ ಫೇಸ್ ಮಾಡಿ. ಆ ಧೈರ್ಯ ನಿಮಗೆ ಸಿಗಲಿ. ಅದು ನಿಮಗೆ ಬಿಗ್‌ಬಾಸ್ ಮನೆಯೊಳಗೆ ಸಿಗಲಿ’ ಎಂದು ಕಿಚ್ಚ, ಪ್ರತಾಪ್‌ಗೆ ಕಿವಿಮಾತು ಹೇಳಿದರು.


Exit mobile version