ಬೆಂಗಳೂರು: ʻಬಿಗ್ ಬಾಸ್ʼ ಸೀಸನ್ 10 (BBK SEASON 10) ಫಿನಾಲೆ ಹತ್ತಿರ ಬರುತ್ತಿದೆ. ಒಂದು ಕಡೆ ಮನೆಯಲ್ಲಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದರೆ, ಇನ್ನೊಂದು ಕಡೆ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಹೆಚ್ಚಾಗುತ್ತಿದೆ. ಡ್ರೋನ್ ಪ್ರತಾಪ್ ಅವರು ಮನೆಯಲ್ಲಿ ಆರಂಭದ ದಿನಗಳಲ್ಲಿ ಬಹಳ ಸಾಫ್ಟ್ ಆಗಿರುತ್ತಿದ್ದರು. ಒಬ್ಬೊಬ್ಬರೆ ಬಾತ್‌ರೂಮ್‌ಗೆ ಹೋಗಿ ಅಳುತ್ತಿದ್ದರು. ಆದರೆ ಈಗ ಹಾಗಲ್ಲ. ಮಾತಿಗೆ ತಿರುಗೇಟು ಕೂಡ ಕೊಡುತ್ತಾರೆ. ವಿನಯ್ ಗೌಡ ಅವರಿಗೆ ಪ್ರತಾಪ್ ಅವರು ಮಾತಿನ ಪಂಚ್ ಕೊಟ್ಟಿದ್ದಾರೆ. ವಿನಯ್ ಕೂಡ ಈ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.
ಇತ್ತೀಚೆಗೆ ಕಿರಿಕ್ ಕೀರ್ತಿ, ಜಾಹ್ನವಿ ಮನೆಗೆ ಬಂದಾಗ ಅವರ ಎದುರು ಪ್ರತಾಪ್, ವಿನಯ್ ಬಗ್ಗೆ ಆಡಿದ ಮಾತಿನ ಬಗ್ಗೆ ವಿನಯ್ಗೆ ತೀವ್ರ ಅಸಮಾಧಾನವಿತ್ತು. ವಿನಯ್ ಅವರು ಪ್ರತಾಪ್‌ಗೆ ʻʻಏನೋ ಪ್ರತಿ ಸಾರಿ ನಾನು ಅಸಭ್ಯವಾಗಿ ಮಾತಾಡ್ತೀನಿ ಎಂದು ಹೇಳ್ತೀಯಾ. ನೀನು ತಪ್ಪು ಮಾತಾಡ್ತಿದ್ದೀಯಾ. ನಾನು ಏನು ಪದ ಬಳಸಬೇಕು ಎನ್ನುವುದು ನಿನ್ನತ್ರ ನೋಡಿ ಕಲಿಬೇಕಾ?ನಿಂಗೆ ಎಷ್ಟೋ ವಯಸ್ಸು? ನಂಗೆ ಹೇಳಿ ಕೊಡೋಕೆ? ಹೊರಗಡೆ ಏನು ಮಾಡಿದ್ದೀಯಾ ಎನ್ನುವುದನ್ನ ನಾನು ಇಲ್ಲಿ ಮಾತನಾಡುವುದಕ್ಕೆ ಶುರು ಮಾಡಿದ್ರೆ. ಕಥೆ ಬೇರೆ ತರ ಆಗತ್ತೆ. ಕೊಡೋವಷ್ಟು ಮರ್ಯಾದೆ ನಿಂಗೆ ಕೊಟ್ಟೆ. ಆ ಮರ್ಯಾದೆ ಉಳಿಸಿಕೊಳ್ಳುವ ಯೋಗ್ಯತೆ ನಿಂಗಿಲ್ಲʼʼಎಂದು ಖಡಕ್ ಆಗಿಯೇ ಹೇಳಿದರು. ಇನ್ನು ಪ್ರತಾಪ್ ಕೂಡ ಮಾತನಾಡಿ ʻʻಯೋಗ್ಯತೆ ಬಗ್ಗೆ ಎಲ್ಲ ಮಾತನಾಡಿಬೇಡಿ ಅಣ್ಣ”ಎಂದು ಹೇಳಿದರು. ಇದಾದ ಮೇಲೆ ವಿನಯ್ ಅವರು ಪಂಚಿಂಗ್ ಪ್ರಕ್ರಿಯೆ ಕೊಟ್ಟಾಗ, ಪಂಚಿಂಗ್ ಬ್ಯಾಗ್ಗೆ ಪ್ರತಾಪ್ ಅವರ ಫೋಟೊಗೆ ಪಂಚ್ ಮಾಡಿ, ʻʻನೀನು ಯಾರು ನನ್ನ ವ್ಯಕ್ತಿತ್ವದ ಬಗ್ಗೆ ಮಾತನಾಡಲು, ನಿನ್ನ ವಯಸ್ಸಿಗಿಂತಲೂ ಹೆಚ್ಚು ನನಗೆ ಅನುಭವವಿದೆ. ನೀನೊಬ್ಬ ಝೀರೋʼʼ ಎಂದು ಹೇಳಿ ಪಂಚ್ ಮಾಡಿದ್ದರು ವಿನಯ್.
ಇದನ್ನೂ ಓದಿ: BBK SEASON 10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ `ಬಿಗ್‌ಬಾಸ್’ ಸ್ಪರ್ಧಿಗಳು!
ಇಲ್ಲಿಗೆ ಪ್ರತಾಪ್ ಕೂಡ ಸುಮ್ಮನಾಗಿರಲಿಲ್ಲ. ʻʻಪ್ರತಾಪ್, ಹೇ…ಹೋ…ಅಂದರೆ ಇಲ್ಲಿ ಯಾರು ಹೆದರಿಕೊಳ್ಳುವವರಿಲ್ಲ. ನೀವು ಅತ್ತರೆ ಅದು ಪ್ರೀತಿ. ಆದರೆ ನಾವು ತಂದೆ ತಾಯಿ ನೆನೆಸಿಕೊಂಡು ಅತ್ತರೆ ಅದು ಸಿಂಪಥಿ. ಹೆದರಿಕೊಳ್ಳುವ ದಿನಗಳೆಲ್ಲ ಹೊರಟು ಹೋದವು, ಇನ್ನೇನಿದ್ದರು ಎದುರಿಸುವ ದಿನಗಳು. ಹೌದು, ನನಗೆ ಬೇಸರವಾದಾಗ ಒಬ್ಬನೇ ಹೋಗಿ ಅಳುತ್ತಿದ್ದೆ. ನೀವು ಅತ್ತಿಲ್ಲವೆ. ನಿಮ್ಮ ಮನೆಯವರಿಗೆ ತೊಂದರೆ ಆಗಿದೆ ಎಂದಾಗ ನೀವು ಅತ್ತಿಲ್ಲವೇ? ನೀವು ಅತ್ತರೆ ಪ್ರೀತಿ, ನಾನು ಅತ್ತರೆ ಸಿಂಪತಿ ಹೇಗಾಗುತ್ತದೆ?’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: BBK SEASON 10: ಕರ್ನಾಟಕದ ಜನತೆಗೆ ತಲೆಬಾಗಿ ಕ್ಷಮೆ ಕೇಳಿದ ʻಡ್ರೋನ್ ಪ್ರತಾಪ್ʼ!
ವಿನಯ್, ಮಧ್ಯದಲ್ಲಿ ಮಾತನಾಡಲು ಬಂದಾಗ, ‘ಸುಮ್ಮನಿರಿ, ಇಲ್ಲಿ ನಾನು ಮಾತನಾಡಬೇಕು, ನೀವು ಇವತ್ತು ಬರೀ ಕೇಳಿಸಿಕೊಳ್ಳಬೇಕು’ ಎನ್ನುತ್ತಾ ಪ್ರತಾಪ್ ತಿರುಗೇಟು ನೀಡುತ್ತಲೇ ಇದ್ದರು. ಉಳಿದ ಸ್ಪರ್ಧಿಗಳಿಗೆ ಕೂಡ ಇದು ಖುಷಿ ಕೊಟ್ಟಿದೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ