ಬೆಂಗಳೂರು: ʻಬಿಗ್‌ಬಾಸ್ʼ (BBK SEASON 10) ಮನೆ ಫಿನಾಲೆಯ ಕ್ಷಣಗಣನೆಯಲ್ಲಿ ತೊಡಗಿದೆ. ಅದರ ನಡುವೆಯೇ ವಾರದ ʻಉತ್ತಮ’ ಮತ್ತು ʻಕಳಪೆʼ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದೆ. ಅದರ ಝಲಕ್ ಹೇಗಿತ್ತು ಎನ್ನುವುದು ಜಿಯೋ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
‘ಕಳಪೆ ಅನ್ನು ನಾನು ತುಕಾಲಿ ಸಂತೋಷ್ ಅವರಿಗೆ ಕೊಡುತ್ತೇನೆ’ ಎಂದು ಪ್ರತಾಪ್ ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಆದರೆ ವೋಟಿಂಗ್ ನಂತರದಲ್ಲಿ ವರ್ತೂರು ಮತ್ತು ಪ್ರತಾಪ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ‘ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು’ ಎಂದಿರುವ ವರ್ತೂರು, ‘ನಿನ್ನನ್ನು ಯಾರೂ ನಂಬುವುದಿಲ್ಲ’ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ.
ಅಷ್ಟೇ ಅಲ್ಲ, ‘ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು’ ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ ವರ್ತೂರು ಈ ಮಾತು ಹೇಳಿದ್ದು ಬಿಗ್‌ಬಾಸ್ ಶೋ ಬಗ್ಗೆಯಾ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆಯಾ? ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಗಲಿದೆ. ಈ ವಾರದ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ?
ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: BBK SEASON 10: ಸಂಗೀತಾಗೆ ಕನ್ನಡ ಬರದೇ ಇರಲು ಕಾರಣವಾದ್ರೂ ಏನು?
ಟಿಕೆಟ್ ಪ್ರತಾಪ್ ಕೈಗೆ ಸೇರಿಲ್ಲ
ಫಿನಾಲೆ ಸಮೀಪಿಸುತ್ತಿದ್ದಂತೆಯೇ ʻಬಿಗ್‌ಬಾಸ್ʼ (BBK SEASON 10) ಮನೆಯೊಳಗಿನ ಸಂಬಂಧಗಳ ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಸ್ಪರ್ಧೆಯ ಫಿನಾಲೆ ನಡೆಯಲಿದೆ. ಈ ಬಾರಿಯ ಟಾಸ್ಕ್‌ನಲ್ಲಿ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಸ್ಪರ್ಧಿ ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್ ಪಡೆಯುತ್ತಾರೆ ಎಂದು ಬಿಗ್‌ಬಾಸ್ ತಿಳಿಸಿದ್ದಾರೆ. ಇದನ್ನು ʼಟಿಕೆಟ್ ಟು ಫಿನಾಲೆʼ ಎಂದು ಕರೆಯಲಾಗಿದೆ. ಇದನ್ನು ಪಡೆದಿದ್ದು ಡ್ರೋನ್ ಪ್ರತಾಪ್ ಎನ್ನಲಾಗಿದೆ. ಆದರೆ ಮೂಲಗಳ ಪ್ರಕಾರ ಈ ಟಿಕೆಟ್ ಸಂಗೀತಾ ಕೈ ಸೇರಿದೆ ಎನ್ನಲಾಗಿದೆ.
ʻಟಿಕೆಟ್ ಟು ಫಿನಾಲೆʼ
ಪ್ರತಿ ಟಾಸ್ಕ್‌ನಲ್ಲಿ ನಾಲ್ವರು ಆಡಬೇಕು. ಸರದಿ ಬಂದಾಗ ಪ್ರತಿ ಆಟಗಾರ ತಮ್ಮ ಮೂವರು ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂಟು ರೌಂಡ್ನಲ್ಲಿ ಆಟ ನಡೆದಿದೆ. ಈ ರೀತಿ ಟಾಸ್ಕ್ ಆಡಿ ಕೊನೆಗೆ ಯಾರದ್ದು ಹೆಚ್ಚು ಅಂಕ ಇರುತ್ತದೆಯೋ ಅವರು ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಎಂದು ಹೇಳಲಾಗಿತ್ತು. ಕಲರ್ಸ್ ಕನ್ನಡ ಬಿಟ್ಟ ಪ್ರೋಮೊದಲ್ಲಿ ಪ್ರತಾಪ್ ಅವರದ್ದು 280 ಅಂಕ ಹಾಗೂ ಸಂಗೀತಾ ಅವರಿಗೆ 260 ಅಂಕ ಇತ್ತು. ಈ ಸಂದರ್ಭದಲ್ಲಿ ಅವರು ಸಂಗೀತಾ ಅವರನ್ನು ಟಾಸ್ಕ್‌ನಿಂದ ಹೊರಗೆ ಇಟ್ಟಿದ್ದಾರೆ. ಇದು ಬಿಗ್ ಬಾಸ್ ನೀಡುವ ಕೊನೆಯ ಟಾಸ್ಕ್. ಉಳಿದ ಯಾವುದೇ ಸ್ಪರ್ಧಿಗೆ 100 ಅಂಕ ಸಿಕ್ಕರೂ ಅತಿ ಹೆಚ್ಚು ಅಂಕ ಡ್ರೋನ್ ಪ್ರತಾಪ್ದೇ ಆಗಿರುತ್ತದೆ. ಹೀಗೀರುವಾಗ ನೇರವಾಗಿ ಡ್ರೋನ್ ಅವರು ಟಿಕೆಟ್ ಪಡೆದುಕೊಂಡರು ಎಂದು ಹಲವರು ಊಹಿಸಿದ್ದರು. ಆದರೆ ಆದದ್ದೇ ಬೇರೆ ಎನ್ನಲಾಗುತ್ತಿದೆ.