Site icon Vistara News

BBK SEASON 10: ನೀನು ʻಕಳಪೆʼ ಪಟ್ಟಕ್ಕೆ ಅರ್ಹ ಎಂದ ವಿನಯ್‌; ಜೈಲು ಸೇರಿದ ಕಾರ್ತಿಕ್‌!

kalape Karthik mahesh in bigg boss

ಬೆಂಗಳೂರು: ವಾರವಿಡಿ ನಡೆದ ರಕ್ಕಸ-ಗಂಧರ್ವರ ಕಾಳಗ ಅಂತಿಮ ಹಂತಕ್ಕೆ (BBK SEASON 10) ಬಂದು ನಿಂತಿದೆ. ವಾರಾಂತ್ಯದ ಎಪಿಸೋಡಿನ ಹೊಸ್ತಿಲಲ್ಲಿ ಎಲ್ಲ ಸ್ಪರ್ಧಿಗಳೂ ನಿಂತಿದ್ದಾರೆ. ಈ ನಡುವೆ ಪ್ರತಿ ವಾರದ ವಾಡಿಕೆಯಂತೆ ‘ಕಳಪೆ’ ಮತ್ತು ‘ಉತ್ತಮ’ ಪಟ್ಟಗಳನ್ನೂ ಮನೆಯ ಸದಸ್ಯರು ನಿರ್ಧರಿಸಿದ್ದಾರೆ. ಈ ವಾರದ ಕಳಪೆ ಪಟ್ಟ ಸಿಕ್ಕಿದ್ದು ಯಾರು ಎಂಬುದಕ್ಕೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಉತ್ತರ ಸಿಕ್ಕಿದೆ.

ಸ್ನೇಹಿತ್‌, ನಮ್ರತಾ, ವಿನಯ್ ಸೇರಿದಂತೆ ಬಹುತೇಕ ಸದಸ್ಯರು ಕಳಪೆ ಪಟ್ಟವನ್ನು ಕಾರ್ತಿಕ್‌ಗೆ ನೀಡಿದ್ದಾರೆ. ಅವರು ನೀಡಿದ ಕಾರಣ, ‘ಕಾರ್ತಿಕ್‌ ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ದು’. ವಿನಯ್ ಅವರಂತೂ, ‘ಈ ವಾರ ಖಂಡಿತವಾಗಿಯೂ ನೀನು ಕಳಪೆ ಪಟ್ಟಕ್ಕೆ ಅರ್ಹ’ ಎಂದು ನೇರವಾಗಿ ಹೇಳಿಯೇ ಕಳಪೆ ಪಟ್ಟ ನೀಡಿದ್ದಾರೆ. ಅದನ್ನು ಕಾರ್ತಿಕ್‌ ಕೈಮುಗಿದು ನಗುನಗುತ್ತಲೇ ಸ್ವೀಕರಿಸಿದ್ದಾರೆ ಸಹ.

ಜೈಲು ಉಡುಗೆ ತೊಟ್ಟ ಕಾರ್ತಿಕ್‌, ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’ ಎಂದುಹೇಳಿ ಜೈಲು ಕೊಠಡಿಯೊಳಗೆ ಇಳಿದಿದ್ದಾರೆ. ವರ್ತೂರು ಮತ್ತು ತನಿಷಾ ಇಬ್ಬರೂ ಸೇರಿ ಕಾರ್ತಿಕ್ ಅವರನ್ನು ಜೈಲಿನ ಬಾಗಿಲಿಗೆ ಬಂದು ಬೀಳ್ಕೊಟ್ಟಿದ್ದಾರೆ. ಹಾಗಾದರೆ ಈ ವಾರ ‘ಉತ್ತಮ’ ಪಟ್ಟ ಗಿಟ್ಟಿಸಿಕೊಳ್ಳುವ ಸದಸ್ಯ ಯಾರು? ವಾರವಿಡೀ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾವ ತಂಡ ಗೆದ್ದಿದೆ? ಯಾರು ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಕ್ಯಾಪ್ಟನ್ಸಿ ಟಾಸ್ಕ್‌ನಿಂದ ನಮ್ರತಾ, ವಿನಯ್‌ ಹೊರಗೆ

ಬಿಗ್‌ಬಾಸ್ ಮನೆ (BBK SEASON 10) ಈ ವಾರದಲ್ಲಿ ಹಲವು ಕೋಲಾಹಲಗಳಿಗೆ, ಕೋಪ ತಾಪಗಳಿಗೆ, ಜಗಳಗಳಿಗೆ, ರೋಷಾವೇಶಗಳಿಗೆ ಸಾಕ್ಷಿಯಾಗಿದೆ. ವಾರದ ಕೊನೆ ಸಮೀಪಿಸುತ್ತಿದ್ದಂತೆಯೇ ಮನೆಯೊಳಗಿನ ಲೆಕ್ಕಾಚಾರಗಳೂ ಬದಲಾಗುತ್ತಿವೆ. ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ರಾಕ್ಷಕ ಹಾಗೂ ಗಂಧರ್ವರ ಗುಂಪು ಆಗಿದೆ. ಸ್ನೇಹಿತ್‌ ಬಯಾಸ್ಡ್‌ ಆಗಿ ಆಟಗಳನ್ನು ಆಡುತ್ತಾರೆ ಎನ್ನುವುದು ಸಂಗೀತಾ ಅವರ ಟೀಂ ವಾದ. ಆದರೆ ಕಳೆದ ಸಂಚಿಕೆಯಲ್ಲಿ ಸಂಗೀತಾ ಕೂಡ ಸ್ನೇಹಿತ್‌ ಅವರಿಗೆ ಹತ್ತಿರವಾದಂತಿದೆ. ಇಂದಿನ ಜಿಯೋ ಸಿನಿಮಾ ಹಂಚಿಕೊಂಡ ಪ್ರೋಮೊದದಲ್ಲಿ ಸ್ನೇಹಿತ್‌ ಅವರು ತಮ್ಮ ಸ್ನೇಹಿತರಿಗೆ ಶಾಕ್‌ ಕೊಟ್ಟಿದ್ದಾರೆ. ಈ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾರೆ. ಪ್ರತಿ ಆಟಕ್ಕೂ ಅವರದ್ದೇ ಉಸ್ತುವಾರಿ. ಕ್ಯಾಪ್ಟನ್ಸಿ ಟಾಸ್ಕ್​ನಿಂದ ಯಾರನ್ನು ಹೊರಗೆ ಇಡಬೇಕು ಎನ್ನುವ ವಿಚಾರ ಬಂದಾಗ ಅವರು ವಿನಯ್ ಹಾಗೂ ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್‌; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್‌!

ವಾರಾಂತ್ಯದಲ್ಲಿ ಬಿಗ್‌ಬಾಸ್‌, ಸ್ನೇಹಿತ್‌ಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದಾರೆ. ‘ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ’ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ನಾಮಿನೇಟ್ ಮಾಡಿದ್ದಾರೆ. ಅವರು ನಾಮಿನೇಟ್ ಮಾಡಿದ ಎರಡು ಮುಖ್ಯ ಸದಸ್ಯರೆಂದರೆ, ನಮ್ರತಾ ಮತ್ತು ವಿನಯ್! ಇದಕ್ಕೆ ಅವರು ಕೊಟ್ಟ ಕಾರಣ, ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂಬುದು.

ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್‌ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್‌ ಮಾತು ಕೇಳಿ ಆಘಾತವಾಗಿದೆ. ‘ಇವ್ನೆಂತಾ ಫ್ರೆಂಡ್‌’ ಎಂದು ನಮ್ರತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ ಕೂಡ. ಮತ್ತೂ ಯಾರು ಯಾರನ್ನೆಲ್ಲ ಸ್ನೇಹಿತ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ? ಕೊನೆಗೆ ಮನೆಯ ಕ್ಯಾಪ್ಟನ್ ಆಗುವುದು ಯಾರು? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Exit mobile version