ಬೆಂಗಳೂರು: ಬಿಗ್‌ಬಾಸ್ (BBK SEASON 10) ಮನೆಯಲ್ಲಿ ಕಾರ್ತಿಕ್ ರಾಜಕೀಯ ಮಾಡ್ತಿದ್ದಾರೆ! ಅಲ್ಲಲ್ಲ, ರಾಜಕೀಯ ಶಾಸ್ತ್ರದ ಪಾಠ ಮಾಡ್ತಿದ್ದಾರೆ. ಆ ಪಾಠ ಹೇಗಿದೆ ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ.
ಈ ವಾರದ ಬಿಗ್‌ಬಾಸ್ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಹೈಯರ್ ಎಜುಕೇಷನ್‌ಗೆ ಕಾಲಿಟ್ಟಂತಿದೆ. ಚೇಷ್ಟೆಗಳು ಮುಗಿದು ಗಂಭೀರ ಚರ್ಚೆಗಳು ತರಗತಿಯಲ್ಲಿ ನಡೆಯುತ್ತಿದೆ. ಚರ್ಚೆಗೆ ಬುನಾದಿ ಹಾಕಿಕೊಟ್ಟವರು ಇಂದಿನ ಬಿಗ್‌ಬಾಸ್ ವಿದ್ಯಾಲಯದಲ್ಲಿ ಪಾಠ ಮಾಡುತ್ತಿರುವ ಕಾರ್ತಿಕ್.
ಕಾರ್ತಿಕ್ ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ. ಅದರಲ್ಲಿಯೂ ಉತ್ತಮ ನಾಯಕತ್ವ ಹೇಗಿರಬೇಕು ಎಂಬುದರ ಕುರಿತು ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ.
‘ಬಿಗ್‌ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ’ ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತಾಡಲು ಪ್ರಾರಂಭಿಸಿದ್ದಾರೆ. ‘ಮನೆಯೊಳಗೆ ಯಾರಿಗೆ ಕೋಪ ನಿಯಂತ್ರಣ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ?’ ಎಂಬ ಪ್ರಶ್ನೆಗೆ ಸಂಗೀತಾ ತಾನಾಗೇ, ‘ನನ್ನ ಹೆಸ್ರೇ ಬರ್ದುಬಿಡಿ’ ಎಂದು ಹೇಳಿದ್ದಾರೆ. ಅದಕ್ಕೆ ನಕ್ಕ ಕಾರ್ತಿಕ್, ‘ಏನಪ್ಪಾ ಈವತ್ತು ಸಂಗೀತಾ ಎಲ್ಲನೂ ಅವರಾಗೇ ಒಪ್ಕೋತಿದಾರೆ?’ ಎಂದು ನಕ್ಕಿದ್ದಾರೆ.
ಮನೆಯೊಳಗೆ ಯಾರು ಕೆಟ್ಟ ರಾಜಕೀಯ ಮಾಡ್ತಾರೆ ಎಂದು ಕೇಳಿದ್ದಕ್ಕೆ ಸಂಗೀತಾ, ‘ವಿನಯ್’ ಎಂದು ಹೇಳಿದ್ದಾರೆ. ‘ಅದಕ್ಕೊಂದು ಉದಾಹರಣೆ ಕೊಡಿ’ ಎಂದು ಕೇಳಿದ್ದಾರೆ ಕಾರ್ತಿಕ್. ಇದು ಸಂಗೀತಾಗೆ ನೋವುಂಟುಮಾಡಿದೆ.
ಟಾಸ್ಕ್ ಮುಗಿದ ಮೇಲೆ ಬೆಡ್‌ರೂಮ್‌ನಲ್ಲಿ ಮಾತಾಡುತ್ತ, ‘ಕಾರ್ತಿಕ್ ಯಾಕೆ ಹಿಂಗಾಡ್ತಿದಾರೆ? ಅವ್ರಿಗೆ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ ನಿಂಗೆ?’ ಎಂದು ಡ್ರೋಣ್ ಪ್ರತಾಪ್‌ಗೆ ಕೇಳಿದ್ದಾರೆ.
ಒಟ್ಟಾರೆ ಬಿಗ್‌ಬಾಸ್ ಮನೆಯೊಳಗಿನ ಶಾಲೆ ಆಟದ ಹಂತ ದಾಟಿ ಅಸಮಾಧಾನದ ಹೊಗೆ ನಿಧಾನಕ್ಕೆ ಏಳುತ್ತಿದೆ. ಅದು ಯಾವಾಗ ಕಿಡಿಯಾಗಿಹೊಮ್ಮುತ್ತದೆ? ಯಾರನ್ನೆಲ್ಲ ಸುಡುತ್ತದೆ? ಎಂದು ಕಾದು ನೋಡಬೇಕು.
ಇದನ್ನೂ ಓದಿ: BBK SEASON 10: ಸರಳವಾಗಿ ಮನಸ್ಥಿತಿ ಶುದ್ಧಿ ಮಾಡೋದು ಹೇಗೆ? ನೀವೆ ನೋಡಿ ಸಂಗೀತಾ ಟೀಚರ್ ಪಾಠ!
ವೀಕ್ಷಕರಿಂದ ಭೇಷ್ ಎನಿಸಿಕೊಂಡ ಸಂಗೀತಾ
ಬಿಗ್ ಬಾಸ್ ಸೀಸನ್10 (BBK SEASON 10), ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್‌ಬಾಸ್ ಮನೆಯಲ್ಲಿ ಪ್ರಾರಂಭವಾದ ʻಹಿರಿಯ ಪ್ರಾಥಮಿಕʼ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ನಮ್ರತಾ ಅವರು ನಾಟಕ ಹಾಗೂ ಡ್ಯಾನ್ಸ್ ಕಲಿಸುವ ಟೀಚರ್ ಆದರೆ , ಸಿರಿ ಅವರು ಕಲೆ ಮತ್ತು ಕರಕುಶಲ, ತುಕಾಲಿ ಅವರು ಆಂಗ್ಲ ಭಾಷೆ, ಸಂಗೀತಾ ಅವರು ಅಧ್ಯಾತ್ಮ ಮತ್ತು ಧ್ಯಾನ ಟೀಚರ್ ಆಗಿದ್ದರು. ಇಷ್ಟೂ ಶಿಕ್ಷಕಿಯರಲ್ಲಿ ಸಂಗೀತಾ ಅವರ ಪಾಠ ಪ್ರಮುಖ ಹೈಲೈಟ್ ಆಗಿತ್ತು. ಸರಳವಾಗಿ ಮನಸ್ಥಿತಿಯನ್ನು ಹೇಗೆ ಶುದ್ಧಿ ಮಾಡುವುದು? ಹಾಗೂ ಸ್ನೇಹದ ಜತೆ ಹೀಗೂ ಖುಷಿಯನ್ನೂ ಹಂಚಿಕೊಳ್ಳಬಹುದು ಎಂಬ ಪಾಠವನ್ನು ಮಾಡಿ, ವೀಕ್ಷಕರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲ ಸ್ಪರ್ಧಿಗಳ ಮಧ್ಯೆ ಇರುವ ಮನಸ್ತಾಪವನ್ನು ಸಂಗೀತಾ ಅವರು ಸರಿ ಮಾಡಲು ನಿಂತರು. ʻಇನ್ನು ಮುಂದೆ ಎಷ್ಟೇ ಕೋಪವಿದ್ದರೂ ನಾವು ಸರಿ ಮಾಡಿಕೊಂಡು, ಖುಷಿಯಿಂದ ಇರೋಣʼ ಎಂದು ಸ್ಪರ್ಧಿಗಳನ್ನು ಖುಷಿಯಾಗಿ ಇರಿಸಿದರು. ವಿನಯ್ ಅವರಿಗೆ ಸ್ಟಾರ್ ಕೂಡ ಕೊಟ್ಟರು ಸಂಗೀತಾ.
ಕಳೆದ ಸಂಚಿಕೆಯಲ್ಲಿ ತನಿಷಾ ಟೀಚರ್ ಅವರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್ ಮೇಷ್ಟ್ರ ಜೊತೆಗೆ ‘ರೋಮಾಂಚನವೀ ಕನ್ನಡ’ ಎಂದು ರಾಗವಾಗಿ ಹಾಡಿದ್ದರು ಕೂಡ. ಪ್ರತಾಪ್ ಸರ್‍ರಿಂದ ಗಣೀತ ಕಲಿತು ಚುರುಕಾಗಿರುವ ಹುಡುಗರಿಗೆ ಈವತ್ತು ನಮ್ರತಾ ಮ್ಯಾಮ್ ಡಾನ್ಸ್ ಹೇಳಿಕೊಟ್ಟಿದ್ದಾರೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ