Site icon Vistara News

BBK SEASON 10: ಹಸಿವಿಂದ ಕಂಗೆಟ್ಟ ಬಿಗ್‌ಬಾಸ್‌ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಸವಿ!

Kichcha Sudeep Sent His Special Food To Bigg Boss season 10 Contestants

ಬೆಂಗಳೂರು: ಮುದ್ದೆಯೂಟದ ನಂತರ ಬಿಗ್‌ಬಾಸ್ (BBK SEASON 10) ಮನೆಯ ಗ್ಯಾಸ್ ಕನೆಕ್ಷನ್ ಡಿಸ್‌ಕನೆಕ್ಟ್‌ ಆಗಿದ್ದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿದುಕೊಂಡೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಅಸಮಧಾನವೂ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿನಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ ಸಿಕ್ಕಿದೆ. ಆ ಸರ್ಪೈಸ್‌ ಏನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಜಾಹೀರಾಗಿದೆ.

ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಇದೆಯೇ? ಆ ಖುಷಿಯಂತೂ ಬಿಗ್‌ಬಾಸ್ ಸದಸ್ಯರಿಗೆ ಸಿಕ್ಕೇ ಸಿಕ್ಕಿದೆ. ಆದರೆ ಸ್ಪೆಷಲ್‌ ಸರ್ಪೈಸ್ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನದು. ಊಟ ಎಷ್ಟು ಮುಖ್ಯವೋ ಎಷ್ಟೋ ಸಲ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತದೆ? ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಸಿಕ್ಕ ಅಡುಗಡೆ ಅಷ್ಟು ಸ್ಪೆಷಲ್ ಆಗಿದ್ದು!

ಹಾಗಾದರೆ ಯಾರು ಅಡುಗೆ ಮಾಡಿದ್ದು?

ಮತ್ಯಾರೂ ಅಲ್ಲ, ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಳುಹಿಸಿದ್ದಾರೆ ಕಿಚ್ಚ ಸುದೀಪ್‌. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದಾರೆ. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ. ‘ಇದು ಸರ್ಪೈಸ್‌. ಇವತ್ತಿನ ಅಡುಗೆ, ಕಿಚ್ಚನ ಕೈಯಡುಗೆ’ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೊದಲ್ಲಿ ಸೆರೆಯಾಗಿವೆ.

ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದಾಡಿದ್ದಾರೆ. ಒಬ್ಬೊಬ್ಬರೂ ಕ್ಯಾಮೆರಾ ಎದುರಿಗೆ ಬಂದು ಥ್ಯಾಂಕ್ಸ್ ಹೇಳಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲ ಸ್ಪರ್ಧಿಗಳೂ ಅನಿಸಿದೆ. ಇಷ್ಟು ಹೊತ್ತು ಹಸಿದುಕೊಂಡಿದ್ದಕ್ಕೂ ಸಾರ್ಥಕವಾಯ್ತು ಎಂದೂ ಅನಿಸಿರಬೇಕು.

ಇದನ್ನೂ ಓದಿ: BBK SEASON 10: ರಾತ್ರಿ ಊಟ ಬಂದಿಲ್ಲ ಅಂದ್ರೆ ನಾನ್ ಸುಮ್ನಿರಲ್ಲ; ಪ್ರತಾಪ್‌ಗೆ ವಿನಯ್‌ ಆವಾಜ್!

ರಾತ್ರಿ ಊಟ ಬಂದಿಲ್ಲ ಅಂದ್ರೆ ನಾನ್ ಸುಮ್ನಿರಲ್ಲ!

ರಾಗಿ ಹಿಟ್ಟನ್ನು ನೋಡಿ, ಪ್ರತಾಪ್‌ಗೆ ಯಾಕೋ ಮುದ್ದೆ ತಿನ್ನುವ ಮನಸ್ಸಾಗಿದೆ. ‘ಯಾರಿಗೆಲ್ಲ ಮುದ್ದೆ ಬೇಕು?’ ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ. ಕಾರ್ತಿಕ್‌, ‘ತಿಂತೀನಿ ಕಣೋ ಮಾಡೋ’ ಎಂದು ಪ್ರತಾಪ್‌ಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ತುಕಾಲಿ ಅವರೂ, ‘ಮಾಡೋದ್ ಮಾಡ್ತಿದೀಯಾ. ಸ್ವಲ್ಪ ದಪ್ಪ ಮಾಡೋ’ ಎಂದು ಕೇಳಿದ್ದಾರೆ. ಪ್ರತಾಪ್ ಉತ್ಸಾಹದಿಂದಲೇ ಎಲ್ಲರಿಗೂ ಮುದ್ದೆ ಮಾಡಿ ಬಡಿಸಿದ್ದಾರೆ. ಎಲ್ಲರೂ ಖುಷಿಯಿಂದ ತಿಂದಿದ್ದಾರೆ ಕೂಡ.ಆದರೆ ಮಧ್ಯದಲ್ಲಿ ಎಲ್ಲೋ ತಾಳ ತಪ್ಪಿದೆ. ಮನೆಯ ಗ್ಯಾಸ್‌ ನಿಂತುಹೋಗಿದೆ. ‘ಮಾಡಿರೋ ಜವಾಬ್ದಾರಿ ನಾನು ಹೊತ್ಕೋತೀನಿ’ ಎಂದು ಪ್ರತಾಪ್ ಹೇಳಿದ್ರೂ ನಮ್ರತಾ, ‘ಮನೆಗೆ ಶಿಕ್ಷೆಯಾದ್ರೆ ನೀನೇನ್ ಮಾಡ್ತೀಯಾ?’ ಎಂದು ಕೇಳಿದ್ದರು. ಪ್ರತಾಪ್ ಕ್ಯಾಮೆರಾ ಎದುರಿಗೆ ಹೋಗಿ, ‘ಬಿಗ್‌ಬಾಸ್ ದಯವಿಟ್ಟು ಕೊಟ್ಬಿಡಿ ಬಿಗ್‌ಬಾಸ್’ ಎಂದು ಕೇಳಿಕೊಂಡರು. ಅತ್ತ ವಿನಯ್‌ ಕೋಪದಿಂದ, ‘ಈವಾಗ ಊಟ ಬರ್ಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವ್ರಾಣೆ ನಾನ್ ಸುಮ್ನಿರಲ್ಲ’ ಎಂದು ಅವಾಜ್ ಹಾಕಿದ್ದರು. ಆದರೀಗ ಸ್ಪರ್ಧಿಗಳಿಗೆ ಕಿಚ್ಚನೇ ಸ್ವತಃ ಊಟ ಕಳುಹಿಸಿಕೊಟ್ಟಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version