Site icon Vistara News

BBK Season 10: ತನಿಷಾ, ಕಾರ್ತಿಕ್ ಜತೆಗಿನ ಫ್ರೆಂಡ್‌ಶಿಪ್‌ ಕಟ್‌ ಮಾಡಿಕೊಂಡ ಸಂಗೀತಾ!

Sangeeta cut friendship with Tanisha, Karthik

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಈ ಸೀಸನ್‌ (BBK Season 10:) ಆರಂಭದಿಂದಲೂ ಒಂದು ಮನ ಮೂರು ದೇಹ ಎನ್ನುವಂತಿದ್ದವರು ಸಂಗೀತಾ-ಕಾರ್ತಿಕ್ ಮತ್ತು ತನಿಷಾ. ಹಲವು ಸಂಕಷ್ಟದ ಸಂದರ್ಭಗಳಲ್ಲಿಯೂ ಮೂವರೂ ಒಬ್ಬರಿಗೊಬ್ಬರು ಹೆಗಲೆಣೆಯಾಗಿ ನಿಂತುಕೊಂಡಿದ್ದರು. ಪ್ರತಿಸ್ಪರ್ಧಿಗಳನ್ನು ಒಟ್ಟಾಗಿ ಎದುರಿಸಿದ್ದರು. ಸಂಗೀತಾ ಜೈಲಿಗೆ ಹೋದ ಸಂದರ್ಭದಲ್ಲಂತೂ ಕಾರ್ತಿಕ್, ‘ನಾವು ಮೂರು ಜನರೂ ಈ ಮನೆಗೆ ಬಂದ ದಿನದಿಂದಲೂ ಒಟ್ಟಿಗಿದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ. ಫ್ರೆಂಡ್‌ಗೆ ತೊಂದರೆಯಾದಾಗ ಅವರನ್ನು ಬೆಂಬಲಿಸುವುದು ನನ್ನ ಕರ್ತವ್ಯ. ಅವರ ಜತೆ ನಾನು ನಿಂತೇ ನಿಲ್ಲುತ್ತೇನೆ’ ಎಂದು ಗಟ್ಟಿಯಾಗಿ ಹೇಳಿದ್ದರು. ಆದರೆ ಈಗ ಈ ಮೂವರ ಫ್ರೆಂಡ್‌ಶಿಪ್‌ ಗಾಳಿಪಟದ ಸೂತ್ರ ಹರಿದಂತಿದೆ.

ಕಳೆದ ಸಂಚಿಕೆಯ ಎಲಿಮಿನೇಷನ್‌ನ ಲೂಡೋ ಟಾಸ್ಕ್‌ನಲ್ಲಿ ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ವರ್ತೂರು ಸಂತೋಷ್ ಅವರ ಜತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಎದುರಾಳಿ ತಂಡದಲ್ಲಿದ್ದ ಸಂಗೀತಾ, ತನ್ನನ್ನೇ ಸೇವ್ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆದದ್ದೇ ಬೇರೆ! ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಮಗಿದು ಹೋದಂತೆ ಕಂಡರೂ ಸಂಗೀತಾ ಮನಸಲ್ಲಿ ಈ ವಿಷಯ ಬೆಳಯುತ್ತಲೇ ಇದ್ದ ಹಾಗಿದೆ. ಇಂದಿನ ಪ್ರೋಮೊದಲ್ಲಿ ಸಂಗೀತಾ ಮತ್ತು ತನಿಷಾ ಪರಸ್ಪರ ವಾದ ಮಾಡಿಕೊಳ್ಳುತ್ತಿರುವ, ಕೊನೆಯಲ್ಲಿ ಸಂಗೀತಾ, ‘ಕಿರುಚಬೇಡಿ ತನಿಷಾ’ ಎಂದು ಗಟ್ಟಿಯಾಗಿ ಹೇಳಿದ್ದರ ವಿಷುವಲ್ಸ್ ಇದೆ.

ಒಂದು ಕಡೆ ಸಂಗೀತಾ ಕಾರ್ತಿಕ್ ಬಳಿ, ‘ನಿಮ್ಮ ಕೈಯಲ್ಲಿ ನನ್ನನ್ನು ಸೇವ್ ಮಾಡುವ ಚಾನ್ಸ್ ಇತ್ತು’ ಎಂದು ಹೇಳಿದ್ದಾರೆ. ಇನ್ನೊಂದೆಡೆಗೆ ತನಿಷಾ ಬಳಿ, ‘ನೀವು ನನ್ನನ್ನ ಸೇವ್ ಮಾಡ್ಲಿಲ್ಲ’ ಎಂದೂ ಹೇಳಿದ್ದಾರೆ. ಈ ಚರ್ಚೆಯಲ್ಲಿ ತನಿಷಾ, ‘ವರ್ತೂರು ಅವರು ಸಂಗೀತಾನ ಸೇವ್ ಮಾಡೋದು ಬೇಡ ಅಂತ ಹೇಳಿದ್ರು’ ಎಂದು ಹೇಳಿದ್ದಾರೆ. ಸಂಗೀತಾ ನೇರವಾಗಿ ವರ್ತೂರ್ ಬಳಿ ವಿಚಾರಿಸಿದಾಗ, ‘ಸಂಗೀತಾ ಅನ್ನೋ ಹೆಸರೇ ಬಂದಿರಲಿಲ್ಲ’ ಎಂದಿದ್ದಾರೆ.
ಅಲ್ಲಿಗೆ ಸಂಗೀತಾಗೆ ತನಿಷಾ ಸುಳ್ಳು ಹೇಳಿದ್ದಾರೆ ಎಂಬುದು ಗೊತ್ತಾಗಿದೆ. ʻನಮ್ಮಲ್ಲೊಂದು ಫ್ರೆಂಡ್‌ಶಿಪ್ ಇತ್ತು. ಒಂದು ನಂಬಿಕೆ ಇತ್ತು. ಆ ನಂಬಿಕೆ ಬ್ರೇಕ್ ಆಗಿದೆ’ ಎಂದು ಹೇಳಿ ತನಿಷಾ ಮತ್ತು ಕಾರ್ತಿಕ್ ಜತೆಗಿನ ಫ್ರೆಂಡ್‌ಶಿಪ್ ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: BBK SEASON 10: ವಿನಯ್‌ ಸ್ಟ್ರಾಟಜಿ ವರ್ಕೌಟ್‌ ಆಯ್ತಾ? 8 ಮಂದಿ ನಾಮಿನೇಟ್‌!

ಯಾವಾಗಲೂ ಒಬ್ಬರಿಗೊಬ್ಬರು ಗಟ್ಟಿಯಾಗಿ ನಿಂತಿದ್ದ ಈ ಮೂವರ ಫ್ರೆಂಡ್‌ಶಿಪ್‌ ಅಲ್ಲಿಗೆ ಕೊನೆಗೊಂಡಂತಾಗಿದೆ. ಇದರಿಂದಾಗಿ ಇಡೀ ಮನೆಯ ಸಮತೋಲನವೇ ಹೆಚ್ಚೂ ಕಮ್ಮಿ ಆಗುವ ಸಾಧ್ಯತೆಯಂತೂ ಇದ್ದೇ ಇದೆ. ಹಾಗಾದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನಾಗಬಹುದು? ಸ್ನೇಹಿತರನ್ನು ಕಳೆದುಕೊಂಡ ಸಂಗೀತಾ ಪುಟಿದೇಳುತ್ತಾರಾ? ಅಥವಾ ಕುಸಿದುಹೋಗುತ್ತಾರಾ? ಇಷ್ಟು ದಿನ ಒಟ್ಟಿಗಿದ್ದ ಸ್ನೇಹಿತೆಯನ್ನು ತನಿಷಾ ಮತ್ತು ಕಾರ್ತಿಕ್ ಅಷ್ಟು ಸುಲಭಕ್ಕೆ ಬಿಟ್ಟುಕೊಡುತ್ತಾರಾ? ಎಂಬುದು ಇಂದಿನ ಸಂಚಿಕೆ ಮೂಲಕ ತಿಳಿಯಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version