ಬೆಂಗಳೂರು: ನಿನ್ನೆ ಮೊನ್ನೆಯೆಲ್ಲ ಹಳ್ಳಿಮನೆಯಾಗಿ ಬದಲಾಗಿದ್ದ ಬಿಗ್‌ಬಾಸ್ (BBK Season 10) ಮನೆಯಲ್ಲಿ ಈಗ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾರಾಜಿಸುತ್ತಿದೆ. ಕುಸ್ತಿ ಅಖಾಡದ ಒಳಗೆ ದೈಹಿಕ ಶಕ್ತಿ ಪ್ರದರ್ಶನ ನಡೆಯುತ್ತಿದ್ದರೆ, ಅಖಾಡದ ಹೊರಗೆ ಮಾತಿನ ಶಕ್ತಿಪ್ರದರ್ಶನವೂ ಜೋರಾಗಿಯೇ ನಡೆಯುತ್ತಿದೆ, ಬಿಗ್‌ಬಾಸ್ ಮನೆಯೊಳಗೆ ನಡೆಯುತ್ತಿರುವ ಕುಸ್ತಿ ಪಂದ್ಯದ ಝಲಕ್‌ಗಳು ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾ ಪ್ರೋಮೊದಲ್ಲಿ ಜಾಹೀರುಗೊಂಡಿವೆ.
ಕಳೆದ ಎರಡು ದಿನಗಳಿಂದ ಹಳ್ಳಿ ವಾತಾವರಣದಲ್ಲಿ, ಬಿಗ್‌ಬಾಸ್ ಸ್ಪರ್ಧಿಗಳು ಎರಡು ಕುಟುಂಬಗಳಾಗಿ ಬದುಕುತ್ತಿದ್ದಾರೆ. ಅವರ ನಡುವೆ ಜೋರು ಸ್ಪರ್ಧೆಯೂ ನಡೆಯುತ್ತಿದ್ದು, ಮಾತುಗಳ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತಿದೆ. ಈಗ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕೈ ಕೈ ಮಿಲಾಯಿಸುವ ನೇರ ಅವಕಾಶವನ್ನು ನೀಡಿದ್ದಾರೆ. ಅದೂ ಕೆಮ್ಮಣ್ಣಿನ ಅಖಾಡದಲ್ಲಿ!
ʻಆನೆ’ಯಾಗಿ ಬಿಂಬಿಸಿಕೊಂಡಿದ್ದ ವಿನಯ್ ಮತ್ತು ಮೈಕಲ್ ಅಖಾಡದಲ್ಲಿ ಮುಖಾಮುಖಿಯಾಗಿದರೆ, ಸ್ನೇಹಿತ್ ಮತ್ತು ಕಾರ್ತಿಕ್ ಜಿದ್ದಾಜಿದ್ದಿಗೆ ಮುಂದಾಗಿದ್ದಾರೆ. ಅತ್ತ, ನೀತು ಮತ್ತು ಸಂಗೀತಾ ಕೂಡ ಪಂದ್ಯಕ್ಕೆ ಇಳಿದಿದ್ದಾರೆ. ವಿನಯ್ ಮತ್ತು ಮೈಕಲ್ ಇಬ್ಬರೂ ಒಮ್ಮೆಲೇ ಅಖಾಡದಿಂದ ಹೊರಬಿದ್ದ ದೃಶ್ಯ, ಸ್ನೇಹಿತ್ ಮತ್ತು ಕಾರ್ತಿಕ್ ಪರಸ್ಪರ ಕೈ ಮಿಲಾಯಿಸಿರುವ ದೃಶ್ಯ ಮತ್ತು ಸಂಗೀತಾ ಮತ್ತು ನೀತು ತಳ್ಳಾಡಿಕೊಳ್ಳುತ್ತಿರುವ ದೃಶ್ಯ ಪ್ರೋಮೊದಲ್ಲಿ ಸೆರೆಯಾಗಿದೆ.
ಪಂದ್ಯಕ್ಕೂ ಮುನ್ನ ವರ್ತೂರ್ ಸಂತೋಷ್ ಅವರು ತಮಾಷೆಯಾಗಿ ತುಕಾಲಿ ಸಂತೋಷ್‌ಗೆ ‘ಕುಸ್ತಿಯ ರುಚಿ’ ತೋರಿಸಿದ್ದಾರೆ! ಅಖಾಡದಲ್ಲಿ ಕುಸ್ತಿ ನಡೆಯುತ್ತಿದ್ದರೆ ಹೊರಗಡೆ ತನಿಷಾ ಮತ್ತು ವಿನಯ್ ನಡುವೆ ಮಾತಿನ ಚಕಮಕಿಯೂ ಜೋರಾಗಿಯೇ ನಡೆದಿದೆ.
ಇದನ್ನೂ ಓದಿ: BBK Season 10: ಅಮ್ಮ, ಅಕ್ಕ ಅಂತೆಲ್ಲಾ ನಾನು ಮಾತಾಡಿಲ್ಲ ಎಂದ ಕಾರ್ತಿಕ್; ವಿನಯ್ ಗಂಭೀರ ಆರೋಪ
ಇದನ್ನೂ ಓದಿ: BBK Season 10: ಅಮ್ಮ, ಅಕ್ಕ ಅಂತೆಲ್ಲಾ ನಾನು ಮಾತಾಡಿಲ್ಲ ಎಂದ ಕಾರ್ತಿಕ್; ವಿನಯ್ ಗಂಭೀರ ಆರೋಪ
ವಿನಯ್, ತನಿಷಾಗೆ ‘ಡ್ರೆಸ್ ಚೇಂಜ್ ಮಾಡ್ಕೊಂಡು ಬಂದ್ಬಿಡಿ ನೀವು’ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ತನಿಷಾ, ‘ಯಾರು ಆಡ್ತಿದ್ದಾರೆ ಅವ್ರು ಮಾತಾಡ್ಲಿ. ಮಿಕ್ಕವ್ರೆಲ್ಲ ಮಾತಾಡಿದ್ರೆ ಸರಿ ಇರಲ್ಲ’ ಎಂದು ಅವಾಜ್ ಹಾಕಿದ್ದಾರೆ.
ವಿನಯ್, ‘ಏನೇ’ ಎಂದು ಏಕವಚನಕ್ಕಿಳಿದರೆ, ತನಿಷಾ ಕೂಡ, ‘ನಿಂಗೆ ಯಾವನೂ ಅಧಿಕಾರ ಕೊಟ್ಟಿಲ್ಲ. ಮೈಂಡ್ ಯುವರ್ ವರ್ಡ್ಸ್’ ಎಂದು ಕೈ ತೋರಿಸಿ ಉತ್ತರಿಸಿದ್ದಾರೆ. ಅಖಾಡದ ಒಳಗೆ-ಹೊರಗಿನ ಜಟಾಪಟಿಯಲ್ಲಿ ಗೆಲ್ಲುವವರು ಯಾರು? ಸೋತು ಮಣ್ಣು ಮುಕ್ಕುವವರು ಯಾರು? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಬಿಗ್‌ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.