Site icon Vistara News

BBK SEASON 10: ಅವಿನಾಶ್‌ ಮೊಟ್ಟೆ ಉತ್ತರಕ್ಕೆ ಬಿದ್ದು ಬಿದ್ದು ನಕ್ಕ ತುಕಾಲಿ-ವರ್ತೂರ್‌!

Varthur Santhosh, Tukali Santhosh And Vinay Gowda Make Fun Of Avinash For Egg story

ಬೆಂಗಳೂರು; ಈ ವಾರ ಬಿಗ್‌ಬಾಸ್‌ (BBK SEASON 10) ಮನೆಯಲ್ಲಿ ಪ್ರಾರಂಭವಾದ ಹಿರಿಯ ಪ್ರಾಥಮಿಕ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ಕಿಲಾಡಿತನದಲ್ಲಿ ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದು. ಈ ವಾರ ಅವಿನಾಶ್‌ ಶೆಟ್ಟಿ ಅವರೂ ಸಖತ್‌ ಹೈಲೈಟ್‌ ಆಗಿದ್ದಾರೆ. ತುಕಾಲಿ, ವರ್ತೂರ್‌ ಇಬ್ಬರೂ ಒಟ್ಟಿಗೆ ಏನಾದರೂ ಒಂದು ಜೋಕ್‌ ಮಾಡುವುದರಲ್ಲಿ ಎತ್ತಿದ ಕೈ. ತುಕಾಲಿ ಮತ್ತು ವರ್ತೂರು, ಅವಿನಾಶ್​ ಅವರನ್ನು ಆಡಿಕೊಂಡು ಒಳ್ಳೆಯ ಟೈಂಪಾಸ್ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಅವಿನಾಶ್ ಅವರನ್ನು ತಮಾಷೆ ಮಾಡಿದ್ದಾರೆ. ಆದರೆ ಈ ಬಾರಿ ಮಾತ್ರ ಅವಿನಾಶ್‌ ಅವರು ಇವರಿಬ್ಬರ ಮುಂದೆ ಕುರಿಯಾದರು.

ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ನೀಡಿದ್ದರು. ಬಿಗ್‌ ಬಾಸ್‌ ಯಾರಿಗೆ ಹೇಗೆ ಅರ್ಥವಾಗಿದ್ದಾರೆ ಎಂದು ತಿಳಿದುಕೊಳ್ಳಲು ಬಿಗ್​ಬಾಸ್ ಚಿತ್ರ ಬರೆಯಿರಿ ಎಂದರು. ಎಲ್ಲರೂ ಚಿತ್ರ ಬಿಡಿಸಿದರು. ಹಲವರು ಬಿಗ್​ಬಾಸ್ ಅವರನ್ನು ವ್ಯಕ್ತಿಯ ರೀತಿಯಲ್ಲಿಯೇ ಚಿತ್ರ ಬಿಡಿಸಿದರು. ವಿನಯ್ ತುಸು ಭಿನ್ನವಾಗಿ ಮತ್ತು ಚೆನ್ನಾಗಿ ಚಿತ್ರ ಬಿಡಿಸಿದ್ದರು. ಆದರೆ ತುಕಾಲಿ ಮಾತ್ರ ಮೊಟ್ಟೆ ಇಡುವ ಕೋಳಿಯ ಚಿತ್ರ ಬಿಡಿಸಿ, ನನ್ನ ಪ್ರಕಾರ ಬಿಗ್​ಬಾಸ್ ಎಂದರೆ ಮೊಟ್ಟೆ ಇಡುವ ಕೋಳಿ ಎಂದರು. ಟಾಸ್ಕ್​ ಎಲ್ಲ ಮುಗಿದ ಮೇಲೆ ವರ್ತೂರು ಹಾಗೂ ತುಕಾಲಿ ಇದೇ ವಿಷಯವಾಗಿ ಚರ್ಚೆ ಮಾಡುತ್ತಿದ್ದರು. ಅಲ್ಲಿಗೆ ವಿನಯ್ ಹಾಗೂ ಅವಿನಾಶ್ ಸಹ ಬಂದರು.

ಆಗ ವಿನಯ್‌ ಅವರು ಅವಿನಾಶ್‌ ಅವರಿಗೆ ಪ್ರಶ್ನೆ ಒಂದನ್ನು ಕೇಳಿದರು. ತುಕಾಲಿ ಹಾಗೂ ವರ್ತೂರ್‌ ಅವರ ಮನೆ ಅಕ್ಕ ಪಕ್ಕ ಇರುತ್ತದೆ. ಮಧ್ಯದಲ್ಲಿ ಕಾಂಪೌಂಡ್ ಇರುತ್ತದೆ. ಕಾಂಪೌಂಡ್ ಮೇಲೆ ಕೂತು ವರ್ತೂರು ಅವರ ಜಾಗದಲ್ಲಿ ಮೊಟ್ಟೆ ಇಟ್ಟರೆ ಆ ಮೊಟ್ಟೆ ಯಾರಿಗೆ ಸೇರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಯನ್ನು ಕೇಳಿಸಿಕೊಂಡ ಅವಿನಾಶ್ ಸ್ವಲ್ಪ ಹೊತ್ತು ಯೋಚಿಸಿ ತುಕಾಲಿ ಅವರಿಗೆ ಸೇರುತ್ತದೆ ಎಂದು ಉತ್ತರ ನೀಡಿದ್ದಾರೆ. ಈ ಉತ್ತರ ಕೇಳಿಸಿಕೊಂಡ ವರ್ತೂರ್‌ ಅವರು ಅವಿನಾಶ್‌ ಅವರಿಗೆ ‘ಈ ಬಾರಿ ನೀವೇ ಬಿಗ್​ಬಾಸ್ ಗೆಲ್ಲುವುದು’ ಎಂದು ಹೇಳಿ ನಗುತ್ತ ಹೋರಟು ಹೋದರು.

ಇದನ್ನೂ ಓದಿ: BBK SEASON 10: ಡ್ರೋನ್‌ ಪ್ರತಾಪ್‌ಗೆ ಸಪೋರ್ಟ್‌ ಮಾಡುವವರು ಬಕ್ರಾಗಳು ಎಂದ ತನಿಖಾಧಿಕಾರಿ!

ತುಕಾಲಿ ಹಾಗೂ ವಿನಯ್ ಬಿದ್ದೂ ಬಿದ್ದೂ ನಕ್ಕಿದ್ದಾರೆ. ತುಕಾಲಿ ಇದಾದ ಬಳಿಕ ಅವಿನಾಶ್‌ ಅವರಿಗೆ , ಹುಂಜ ಎಂದಾದರೂ ಮೊಟ್ಟೆ ಇಡುತ್ತಾ? ಎಂದು ಕೇಳಿದಾಗ, ಅಯ್ಯೋ, ಇಲ್ಲ ನಾನು ಪ್ರಶ್ನೆ ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಉತ್ತರ ಕೊಟ್ಟರು ಅವಿನಾಶ್. ಈ ವಾರ ಅವಿನಾಶ್‌ ಅವರು ಮನೆಯನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version