Site icon Vistara News

BBK SEASON 10: ರಾತ್ರಿ ಊಟ ಬಂದಿಲ್ಲ ಅಂದ್ರೆ ನಾನ್ ಸುಮ್ನಿರಲ್ಲ; ಪ್ರತಾಪ್‌ಗೆ ವಿನಯ್‌ ಆವಾಜ್!

Vinay Awaaz for Pratap

ಬೆಂಗಳೂರು: ಈ ಇಡೀ ವಾರ ಬಿಗ್‌ಬಾಸ್ (BBK SEASON 10) ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆಯಿತು. ಇನ್ನೇನು ಇದೇ ರೀತಿ ಈ ವಾರ ಸುಖಾಂತ್ಯವನ್ನು ಕಾಣಲಿದೆ ಎನ್ನುವ ಹೊತ್ತಿಗೇ ಬಿಗ್‌ಬಾಸ್‌ ಮನೆಯಲ್ಲಿ ಕೋಲಾಹಲವೆದ್ದಿದೆ.

ʻʻಸದಸ್ಯರು ರಾಕ್ಷಸರಾಗ್ತಿದಾರೆ’ ಎಂದು ತುಕಾಲಿ ಸಂತೋಷ್‌ ಕಳವಳದಿಂದ ಕ್ಯಾಮೆರಾ ಮುಂದೆ ಮಾತನಾಡಿದರು. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಮನೆಯೊಳಗೆ ನಡೆದಿದ್ದರ ಸಣ್ಣ ಸುಳಿವು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ರಾಗಿ ಹಿಟ್ಟನ್ನು ನೋಡಿ, ಪ್ರತಾಪ್‌ಗೆ ಯಾಕೋ ಮುದ್ದೆ ತಿನ್ನುವ ಮನಸ್ಸಾಗಿದೆ. ‘ಯಾರಿಗೆಲ್ಲ ಮುದ್ದೆ ಬೇಕು?’ ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ. ಕಾರ್ತಿಕ್‌, ‘ತಿಂತೀನಿ ಕಣೋ ಮಾಡೋ’ ಎಂದು ಪ್ರತಾಪ್‌ಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ತುಕಾಲಿ ಅವರೂ, ‘ಮಾಡೋದ್ ಮಾಡ್ತಿದೀಯಾ. ಸ್ವಲ್ಪ ದಪ್ಪ ಮಾಡೋ’ ಎಂದು ಕೇಳಿದ್ದಾರೆ. ಪ್ರತಾಪ್ ಉತ್ಸಾಹದಿಂದಲೇ ಎಲ್ಲರಿಗೂ ಮುದ್ದೆ ಮಾಡಿ ಬಡಿಸಿದ್ದಾರೆ. ಎಲ್ಲರೂ ಖುಷಿಯಿಂದ ತಿಂದಿದ್ದಾರೆ ಕೂಡ.

ಇದನ್ನೂ ಓದಿ; BBK SEASON 10: ಅಹಂಕಾರ ಪ್ರದರ್ಶಿಸುತ್ತಿರುವ ಮೈಕಲ್‌; ಈ ವಾರ ಔಟ್‌ ಆಗೋದು ಪಕ್ಕಾ ಅಂದ್ರು ನೆಟ್ಟಿಗರು!

ಆದರೆ ಮಧ್ಯದಲ್ಲಿ ಎಲ್ಲೋ ತಾಳ ತಪ್ಪಿದೆ. ಮನೆಯ ಗ್ಯಾಸ್‌ ನಿಂತುಹೋಗಿದೆ. ‘ಮಾಡಿರೋ ಜವಾಬ್ದಾರಿ ನಾನು ಹೊತ್ಕೋತೀನಿ’ ಎಂದು ಪ್ರತಾಪ್ ಹೇಳಿದ್ರೂ ನಮ್ರತಾ, ‘ಮನೆಗೆ ಶಿಕ್ಷೆಯಾದ್ರೆ ನೀನೇನ್ ಮಾಡ್ತೀಯಾ?’ ಎಂದು ಕೇಳಿದ್ದಾರೆ. ಪ್ರತಾಪ್ ಕ್ಯಾಮೆರಾ ಎದುರಿಗೆ ಹೋಗಿ, ‘ಬಿಗ್‌ಬಾಸ್ ದಯವಿಟ್ಟು ಕೊಟ್ಬಿಡಿ ಬಿಗ್‌ಬಾಸ್’ ಎಂದು ಕೇಳಿಕೊಳ್ಳುತ್ತಿದ್ದಾರೆ. ಅತ್ತ ವಿನಯ್‌ ಕೋಪದಿಂದ, ‘ಈವಾಗ ಊಟ ಬರ್ಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವ್ರಾಣೆ ನಾನ್ ಸುಮ್ನಿರಲ್ಲ’ ಎಂದು ಅವಾಜ್ ಹಾಕಿದ್ದಾರೆ. ಹಾಗಾದ್ರೆ ಮನೆಯೊಳಗೆ ನಿಜವಾಗಿಯೂ ನಡೆದಿದ್ದು ಏನು? ರಾಗಿ ಮುದ್ದೆ ಮಾಡಿದ್ದೇ ಅಪರಾಧವಾಯ್ತೆ? ಅಥವಾ ಮುದ್ದೆ ಮಾಡುವ ಹಂತದಲ್ಲಿ ಏನಾದರೂ ಪ್ರಮಾದವಾಗಿದೆಯಾ? ಮನೆಮಂದಿ ಉಪವಾಸದಲ್ಲಿಯೇ ಮಲಗಬೇಕಾಯ್ತಾ? ಈ ಎಲ್ಲ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version