ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK season 10) ಅ.24ರಂದು ದಸರಾ ಹಬ್ಬ ರಂಗೇರಿತ್ತು. ಆದರೆ ಇಂದಿನ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿಗೆ ಕರಗಿದೆ. ಅಗ್ಗಷ್ಟಿಕೆಯೆದುರು ನೋವು ಹಂಚಿಕೊಳ್ಳುತ್ತ ಒಂದಾಗಿದ್ದ ಸ್ಪರ್ಧಿಗಳ ನಡುವೆ ಮತ್ತೀಗ ಕಿಡಿ ಹೊತ್ತಿಕೊಂಡಿದೆ. ಮನೆಯ ಕ್ಯಾಪ್ಟನ್ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್ ಆದೇಶ ನೀಡಿದ್ದಾರೆ. ಸಂಗೀತಾ, ‘ತಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಘೋಷಿಸಿದ್ದಾರೆ.ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ಅವರೇ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ.
ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಅಭ್ಯಾಸ ಇರುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾ ಮಧ್ಯ ಕಿಡಿ ಹೊತ್ತಿಕೊಂಡ ಫ್ರೋಮೊ ಔಟ್ ಆಗಿದೆ. ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ‘ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ‘ಯಾಕೆ ನಮ್ರತಾ?’ ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ‘ಕೋಪ ಯಾಕೆ ಮಾಡ್ಕೋತಿಯಾ?’ ಎಂದು ಅನುನಯಿಸಲು ಹೋಗಿದ್ದಾರೆ. ‘ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ ಇಲ್ಲಿ. ಜೊತೆಗಿದ್ದೋರೇ ಚುಚ್ಚುವುದು’ ಎಂದೆಲ್ಲ ಜರಿದಿದ್ದಾರೆ. ಕೊನೆಗೆ ‘ಯು ಆರ್ ಫೇಕ್’ ಎಂಬ ಮಾತು ಸಂಗೀತಾ ಬಾಯಲ್ಲಿ ಹೊರಬೀಳುತ್ತಿದ್ದಂತೆಯೇ ಕಾರ್ತಿಕ್ ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ.
ಇದನ್ನೂ ಓದಿ: BBK season 10: ಬಿಗ್ ಬಾಸ್ ಮನೆಯಲ್ಲಿ ಫೈರ್ ಕ್ಯಾಂಪ್: ತಮ್ಮವರಲ್ಲಿ ಮನಬಿಚ್ಚಿ ಕ್ಷಮೆ ಬೇಡಿದ ಮನೆಮಂದಿ!
ಬಿಗ್‌ಬಾಸ್ ಮನೆಯ ಬೆಸ್ಟ್ ಜೋಡಿ ಅಂತಲೇ ಗುರ್ತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಅವರ ಸಂಬಂಧದ ಮೇಲೆ ಈಗ ಯಾರದೋ ಕಣ್ಣು ಬಿದ್ದಂತಿದೆ. ಯಾವಾಗಲೂ ಹ್ಯಾಪಿಯಾಗಿರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಒಡಕು ಮೂಡಿದೆಯೇ? ಪರಸ್ಪರ ಹಳೆಯದನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡೇ ಹೋಗುತ್ತದಾ?ಎಂಬುದು ನೋಡಬೇಕಿದೆ.
ಬಿಗ್‌ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.