ಪಳನಿಯಪ್ಪನ್ ಚಿದಂಬರಂ (Palaniappan Chidambaram) ಅವರು ಹಣಕಾಸು ಸಚಿವರಾಗಿದ್ದಾಗ ಅಂದರೆ 1997ರಲ್ಲಿ ಮಂಡಿಸಿದ ಕೇಂದ್ರ ಬಜೆಟ್ (central budget) ಅನ್ನು ಹಲವಾರು ದಿಟ್ಟ ಸುಧಾರಣೆಗಳಿಗಾಗಿ ಕನಸಿನ ಬಜೆಟ್ (Dream Budget) ಎಂದು ಕರೆಯಲಾಗುತ್ತದೆ.
ಈ ಬಜೆಟ್‌ನಲ್ಲಿ ವ್ಯಕ್ತಿಗಳಿಗೆ ಗರಿಷ್ಠ ಆದಾಯ ತೆರಿಗೆ ದರವನ್ನು ಶೇ. 30ಕ್ಕೆ ಇಳಿಸಲಾಯಿತು. ದೇಶೀಯ ಕಂಪನಿಗಳಿಗೆ ಆದಾಯ ತೆರಿಗೆ ದರವನ್ನು ಶೇ. 35ಕ್ಕೆ, ಗರಿಷ್ಠ ಕಸ್ಟಮ್ಸ್ ಸುಂಕವನ್ನು ಶೇ. 40ಕ್ಕೆ ಇಳಿಸಲಾಯಿತು ಮತ್ತು ಅಬಕಾರಿ ಸುಂಕದ ರಚನೆಯನ್ನು ಸರಳಗೊಳಿಸಲಾಯಿತು.
ಆ ಸಮಯದಲ್ಲಿ ಕೇಂದ್ರದಲ್ಲಿ ಸಂಯುಕ್ತ ರಂಗ ಸರ್ಕಾರ ಇತ್ತು. ಅಸ್ಥಿರತೆಯ ನಡುವೆಯೂ ಈ ಸರ್ಕಾರ ದಿಟ್ಟ ಸುಧಾರಣೆಗಳನ್ನು ಪರಿಚಯಿಸಲು ಮುಂದಾಗಿತ್ತು. ಯುನೈಟೆಡ್ ಫ್ರಂಟ್ 13 ಪಕ್ಷಗಳ ಮೈತ್ರಿಕೂಟವಾಗಿದ್ದು, ಕರ್ನಾಟಕದ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದರು. ಚಿದಂಬರಂ ವಿತ್ತ ಸಚಿವರಾಗಿದದ್ದರು. ಮೂಲತಃ ಕಾಂಗ್ರೆಸ್‌ನಲ್ಲಿದ್ದ ಪಿ ಚಿದಂಬರಂ 1996ರಲ್ಲಿ ಕಾಂಗ್ರೆಸ್ ತೊರೆದು ತಮಿಳು ಮಾನಿಲ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ವಿತ್ತ ಸಚಿವರಾಗಿದ್ದಾಗ ಪಿ ಚಿದಂಬರಂ ಅವರ ಹಿಂದಿದ್ದ ಶಕ್ತಿ ಮನಮೋಹನ್ ಸಿಂಗ್. ಅವರು 1991ರಲ್ಲಿ ಭಾರತದ ಆರ್ಥಿಕ ಸುಧಾರಣೆಗಳಿಗೆ ಕಾರಣರಾಗಿದ್ದರು. ಇದು ಹೊರಗಿನ ಪ್ರಪಂಚಕ್ಕೆ ಭಾರತದ ಆರ್ಥಿಕತೆಯನ್ನು ತೆರೆಯಿತು. ಆ ಸಮಯದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಅದರ ಆಗ್ನೇಯ ಏಷ್ಯಾದ ಇತರ ಮಿತ್ರ ರಾಷ್ಟ್ರಗಳಿಗಿಂತ ಕಡಿಮೆಯಿತ್ತು. ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ತರ್ಕಬದ್ಧ ತೆರಿಗೆಗಳಂತಹ ನೀತಿಗಳಿಗಾಗಿ ಭಾರತದ ಉದ್ಯಮ ಜಗತ್ತನ್ನು ಸೆಳೆಯಲು ಕಾರಣವಾಯಿತು.
ಫೋರ್ಬ್ಸ್ ವರದಿಯ ಪ್ರಕಾರ, ಚಿದಂಬರಂ ಅವರು ತಮ್ಮ ಬಜೆಟ್ ಅನ್ನು ಮಂಡಿಸಿದ ಅನಂತರ ಬಿಎಸ್‌ಇ ಸೆನ್ಸೆಕ್ಸ್ ಶೇ. 6.5ರಷ್ಟು ಏರಿಕೆಯಾಯಿತು. ಆ ಸಮಯದಲ್ಲಿ ಬಜೆಟ್ ಬಗ್ಗೆ ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಜೆಟ್‌ನಲ್ಲಿನ ಸುಧಾರಣೆಗಳೇನು?
ಚಿದಂಬರಂ ಅವರು ಗರಿಷ್ಠ ಆದಾಯ ತೆರಿಗೆ ದರದ ಸ್ಲ್ಯಾಬ್ ಅನ್ನು ಹಿಂದಿನ ಶೇ. 40ರಿಂದ ಶೇ. 30ಕ್ಕೆ ಇಳಿಸಿದರು. ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ.40ರಿಂದ ಶೇ. 35ಕ್ಕೆ ಇಳಿಸಿದರು. ಗರಿಷ್ಠ ಕಸ್ಟಮ್ಸ್ ಸುಂಕವನ್ನು ಶೇ. 50 ರಿಂದ ಶೇ. 40ಕ್ಕೆ ಇಳಿಸಲಾಯಿತು ಮತ್ತು ಅಬಕಾರಿ ಸುಂಕದ ರಚನೆಯನ್ನು ಸಹ ಸರಳಗೊಳಿಸಲಾಯಿತು.
ಹೆಚ್ಚುವರಿ ಶುಲ್ಕವನ್ನು ತೆಗೆದುಹಾಕಿ ರಾಯಲ್ಟಿ ದರಗಳನ್ನು ಕಡಿಮೆ ಮಾಡಿದರು. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆ ಮಿತಿಯನ್ನು ಸಹ ಹೆಚ್ಚಿಸಲಾಯಿತು. ಪಿಎಸ್ ಯುಗಳಲ್ಲಿ ಮೊದಲ ಸುತ್ತಿನ ಹೂಡಿಕೆಗೆ ಅಡಿಪಾಯವನ್ನು ರಚಿಸಲಾಯಿತು.
ಚಿದಂಬರಂ ಅವರು ಹೊಸ ಮಾನದಂಡವನ್ನು ಪರಿಚಯಿಸಿದರು. ಆದಾಯ ತೆರಿಗೆ ಸಲ್ಲಿಕೆ ಸರಳಗೊಳಿಸುವ ಮೂಲಕ ಜನರು ಹೆಚ್ಚು ಪ್ರಮಾಣದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಮಾಡಿದರು. ಆದಾಯದ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಯ ಯೋಜನೆಯನ್ನು (VDIS) ಪರಿಚಯಿಸಲಾಯಿತು. ಈ ಸ್ವಯಂ ಘೋಷಿತ ಆದಾಯಕ್ಕೆ ಯಾವುದೇ ಬಡ್ಡಿ ಅಥವಾ ದಂಡವಿಲ್ಲದೆ ಪರಿಷ್ಕೃತ ತೆರಿಗೆ ದರವನ್ನು ವಿಧಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡಲಾಯಿತು. ಇದರಿಂದಾಗಿ ಆದಾಯ ಬಚ್ಚಿಟ್ಟವರು ನಿರ್ಭಯವಾಗಿ ಸಂಪತ್ತು ಘೋಷಿಸಿಕೊಂಡು ತೆರಿಗೆ ವ್ಯಾಪ್ತಿಗೆ ಬರುವಂತಾಯಿತು.
ಇದನ್ನೂ ಓದಿ: Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು
ಏಕೆ ತೆರಿಗೆ ಸುಧಾರಣೆ ತರಲಾಯಿತು?
ಈ ʼಕನಸಿನ ಬಜೆಟ್ʼನಲ್ಲಿ ತೆರಿಗೆ ಸುಧಾರಣೆಗಳಿಗೆ ಆದ್ಯತೆ ನೀಡಲಾಯಿತು. ಯಾಕೆಂದರೆ ಕಡಿಮೆ ತೆರಿಗೆ ದರಗಳು ಹೆಚ್ಚಿನ ಜನರಿಗೆ ತೆರಿಗೆ ಪಾವತಿ ಮಾಡಲು ಪ್ರೇರೇಪಿಸುತ್ತದೆ ಎಂಬುದು ಇದರ ಹಿಂದಿನ ಆಶಯವಾಗಿತ್ತು. ಇದು ಹೆಚ್ಚು ಜನರು ಮತ್ತು ಕಂಪನಿಗಳು ತೆರಿಗೆ ಪಾವತಿಸುವಂತೆ ಮಾಡುತ್ತದೆ ಎಂದು ಚಿದಂಬರಂ ನಂಬಿದ್ದರು.
ಏನು ಪರಿಣಾಮ?
ಕನಸಿನ ಬಜೆಟ್ ಪರಿಣಾಮವಾಗಿ ಆದಾಯ ತೆರಿಗೆ ಸಂಗ್ರಹವು 1997ರಲ್ಲಿ 18,700 ರೂ. ಕೋಟಿ ಇದ್ದದ್ದು 2013ರಲ್ಲಿ 2 ಲಕ್ಷ ಕೋಟಿ ರೂ.ಗೆ ಏರಿತು! ಇದು ಕನಸಿನ ಬಜೆಟ್‌ನ ಅತ್ಯಂತ ಮಹತ್ವದ ದೀರ್ಘಾವಧಿಯ ಫಲಿತಾಂಶವಾಗಿದೆ. ಹಾಗಾಗಿ ಭಾರತದ ಬಜೆಟ್ ಇತಿಹಾಸದಲ್ಲಿ 1997ರ ಆಯವ್ಯಯ ಮಂಡನೆ ಐತಿಹಾಸಿಕವಾಗಿದೆ.