ನವದೆಹಲಿ: ಬಜೆಟ್‌ನಲ್ಲಿ (Union Budget 2024) ಯುವಕರು ಹಾಗೂ ರೈತರಿಗೆ ಭರ್ಜರಿ ಘೋಷಣೆ ಮಾಡಿರುವ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತೆರಿಗೆ ವಿಚಾರದಲ್ಲೂ ಪ್ರಮುಖ ಘೋಷಣೆ ಮಾಡಿದ್ದಾರೆ. ಅದರಲ್ಲೂ, ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಹೊಸ ತೆರಿಗೆದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಪಿಂಚಣಿದಾರರಿಗೆ 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಹೊಸ ತೆರಿಗೆ ಪದ್ಧತಿಯಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ. ಇನ್ನು, ಎನ್‌ಜಿಒ ಸೇರಿ ಯಾವುದೇ ರೀತಿಯ ದಾನ ಮಾಡುವವರಿಗೆ ಎರಡು ಸ್ಲ್ಯಾಬ್ ಬದಲು, ಒಂದು ಸ್ಲ್ಯಾಬ್ ಮಾಡಲಾಗಿದೆ. ಟಿಡಿಎಸ್ ನಿಯಮಗಳನ್ನೂ ಸುಲಭಗೊಳಿಸಲು ತೀರ್ಮಾನಿಸಲಾಗಿದೆ. ಟಿಡಿಎಸ್ ಮರುಪಾವತಿ ವಿಳಂಬವಾಗುವುದನ್ನೂ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಇ-ಕಾಮರ್ಸ್ ಮೇಲಿನ ತೆರಿಗೆಯನ್ನೂ ಇಳಿಸಲು ತೀರ್ಮಾನಿಸಲಾಗಿದೆ. ಆದರೆ, ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ ಎಂಬುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ಸ್
ಆದಾಯ | ವಿಧಿಸುವ ತೆರಿಗೆ |
0-3 ಲಕ್ಷ ರೂ. | ತೆರಿಗೆ ಇರಲ್ಲ |
3-7 ಲಕ್ಷ ರೂ. | 5% |
7-10 ಲಕ್ಷ ರೂ. | 10% |
10-12 ಲಕ್ಷ ರೂ. | 15% |
12-15 ಲಕ್ಷ ರೂ. | 20% |
15 ಲಕ್ಷ ರೂ.ಗಿಂತ ಹೆಚ್ಚು | 30% |
ಹಳೆಯ ತೆರಿಗೆ ಪದ್ಧತಿ ಸ್ಲ್ಯಾಬ್ಸ್
ಆದಾಯ | ವಿಧಿಸುವ ತೆರಿಗೆ |
2.5 ಲಕ್ಷ ರೂ. | ತೆರಿಗೆ ಇರಲ್ಲ |
2.5 ಲಕ್ಷ ರೂ.- 3 ಲಕ್ಷ ರೂ. | 5% |
3 ಲಕ್ಷ ರೂ.- 5 ಲಕ್ಷ ರೂ. | 5% |
5 ಲಕ್ಷ ರೂ.-10 ಲಕ್ಷ ರೂ. | 20% |
10 ಲಕ್ಷ ರೂ.ಗಿಂತ ಹೆಚ್ಚು | 30% |
ಕಸ್ಟಮ್ಸ್ ತೆರಿಗೆ ಇಳಿಸಿದ ಕೇಂದ್ರ
ಜಿಎಸ್‌ಟಿಯು ಬಡವರ ಮೇಲಿನ ತೆರಿಗೆ ಹೊರೆಯನ್ನು ಇಳಿಸಿದೆ. ಜಿಎಸ್‌ಟಿಯನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಕಸ್ಟಮ್ಸ್ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಿದೆ. ಆಮದು ಮಾಡಿಕೊಳ್ಳುವ ಮೊಬೈಲ್, ಮೊಬೈಲ್ ಭಾಗಗಳ ಮೇಲಿನ ಸುಂಕವನ್ನೂ ಕೇಂದ್ರ ಸರ್ಕಾರ ಇಳಿಸಿದೆ.
ಚಿನ್ನ ಹಾಗೂ ಬೆಳ್ಳಿಯ ಮೇಲಿನ ಅಬಕಾರಿ ಸುಂಕವನ್ನೂ ಶೇ.6ರಷ್ಟು ಇಳಿಕೆ ಮಾಡಿದೆ. ಇದರಿಂದ ಚಿನ್ನದ ವ್ಯಾಪಾರಿಗಳು ಹಾಗೂ ಖರೀದಿಸುವ ಗ್ರಾಹಕರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: Union Budget 2024: ಬಂಪರ್ ಘೋಷಣೆ; 5 ವರ್ಷದಲ್ಲಿ 4.1 ಕೋಟಿ ಉದ್ಯೋಗ, ಹೊಸ ನೌಕರರಿಗೆ ತಿಂಗಳ ಸಂಬಳ ಕೊಡುಗೆ