ನವದೆಹಲಿ: ಉದ್ಯೋಗಿಗಳಿಗೆ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್‌ನಲ್ಲಿ (Union Budget 2024) ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲೂ, ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದ ಏರಿಕೆ, ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ಗಳ ಬದಲಾವಣೆ ಮಾಡಿದ ಕಾರಣ ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಳಿತು ಎಂದು ಹೇಳಲಾಗುತ್ತಿದೆ. ಹಾಗಂತ, ಹಳೆಯ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವವರಿಗೆ ನಷ್ಟ ಎಂದಲ್ಲ. ಹೆಚ್ಚಿನ ಸಂಬಳ ಪಡೆಯುವವರಿಗೆ ಹಳೆಯ ತೆರಿಗೆ ಪದ್ಧತಿಯು ತೆರಿಗೆ ಉಳಿಸುತ್ತದೆ. ಹಾಗಾದರೆ, ಎಷ್ಟು ಸಂಬಳ ಇರುವವರು ಯಾವ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ? ಇಲ್ಲಿದೆ ಮಾಹಿತಿ.
ಹೊಸ ತೆರಿಗೆ ಪದ್ಧತಿ ಯಾರಿಗೆ ಅನುಕೂಲ?
ಸ್ಟಾಂಡರ್ಡ್ ಡಿಡಕ್ಷನ್ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ. ಈ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಕೇಂದ್ರ ಸರ್ಕಾರವೀಗ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದರಿಂದ, ಹೊಸ ತೆರಿಗೆಯ ಸ್ಲ್ಯಾಬ್‌ಗಳ ಸ್ಟ್ರಕ್ಚರ್ ಬದಲಾವಣೆ ಮಾಡಿರುವುದರಿಂದ 6-7 ಲಕ್ಷ ರೂ. ಆದಾಯ ಗಳಿಸುವವರು ಶೇ.10ರಷ್ಟು ಬದಲು ಶೇ.5ರಷ್ಟು ತೆರಿಗೆ ಪಾವತಿಸುತ್ತಾರೆ. ಇನ್ನು, 9-10 ಲಕ್ಷ ರೂ. ಆದಾಯ ಗಳಿಸುವವರು ಶೇ.15ರ ಬದಲು ಶೇ.10ರಷ್ಟು ತೆರಿಗೆ ಪಾವತಿಸಲಿದ್ದಾರೆ.
ವರ್ಷಕ್ಕೆ ಸುಮಾರು 7.75 ಲಕ್ಷ ರೂ.ವರೆಗೆ ಸಂಬಳ ಪಡೆಯುವವರು ಇನ್ನು ಮುಂದೆ ಯಾವುದೇ ತೆರಿಗೆ ಪಾವತಿ ಮಾಡಬೇಕಿಲ್ಲ. ಅವರು ಶೂನ್ಯ ತೆರಿಗೆ ವ್ಯಾಪ್ತಿಯಲ್ಲೇ ಬರಲಿದ್ದಾರೆ. ಹಾಗಾಗಿ, ಮಧ್ಯಮ ವರ್ಗದವರಿಗೆ ಹೊಸ ತೆರಿಗೆ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ.
ಹಳೆಯ ತೆರಿಗೆ ಪದ್ಧತಿಯಿಂದ ಯಾರಿಗೆ ಲಾಭ?
8 ಲಕ್ಷ ರೂಪಾಯಿಗಿಂತ ಹೆಚ್ಚು ವಾರ್ಷಿಕ ಸಂಬಳ ಪಡೆಯುವವರಿಗೆ ಹಳೆಯ ತೆರಿಗೆ ಪದ್ಧತಿಯು ಹೆಚ್ಚು ಲಾಭದಾಯಕವಾಗಲಿದೆ. ಸುಮಾರು 11 ಲಕ್ಷ ರೂ. ವಾರ್ಷಿಕ ಆದಾಯ ಪಡೆಯುವವರು, ಹಳೆಯ ತೆರಿಗೆ ಪದ್ಧತಿ ಅನ್ವಯ ಸ್ಟಾಂಡರ್ಡ್ ಡಿಡಕ್ಷನ್, 2 ಲಕ್ಷ ರೂ.ವರೆಗಿನ ಗೃಹ ಸಾಲ, ಮನೆ ಬಾಡಿಗೆ (HRA) ಮೊತ್ತವನ್ನು ಡಿಡಕ್ಷನ್ ಮಾಡಿಕೊಂಡರೆ, ಹಳೆಯ ತೆರಿಗೆ ಪದ್ಧತಿಯು ಹೆಚ್ಚು ಅನುಕೂಲವಾಗಲಿದೆ.
ಇನ್ನು, ಗಂಡ-ಹೆಂಡತಿ ಇಬ್ಬರೂ 11 ಲಕ್ಷ ರೂ. ಆದಾಯ ಹೊಂದಿದ್ದರಂತೂ, ಹೆಚ್ಚಿನ ಲಾಭ ಪಡೆಯಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಅಷ್ಟೇ ಅಲ್ಲ, 11 ಲಕ್ಷ ರೂ.ನಿಂದ 60 ಲಕ್ಷ ರೂ.ವರೆಗೆ ಸಂಬಳ ಪಡೆಯುವವರು ಕೂಡ ಹಳೆಯ ತೆರಿಗೆ ಪದ್ಧತಿ ಅನ್ವಯ ಹೆಚ್ಚು ಹಣವನ್ನು ಉಳಿಸಬಹುದಾಗಿದೆ ಎಂಬುದಾಗಿ ಹಣಕಾಸು ತಜ್ಞರು ತಿಳಿಸಿದ್ದಾರೆ.
ಹಳೇ ತೆರಿಗೆ ಪದ್ಧತಿ ರದ್ದಾಗುತ್ತದೆಯೇ?
ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳುವವರಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಕಾರಣ ಹಳೆಯ ತೆರಿಗೆ ಪದ್ಧತಿಯನ್ನು ಒಂದು ವರ್ಷದಲ್ಲಿ ರದ್ದುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಲ್ಲಗಳೆದಿದ್ದಾರೆ.
“ಹಳೆಯ ತೆರಿಗೆ ಪದ್ಧತಿಯನ್ನು ರದ್ದುಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಏಕಾಏಕಿ ಹಳೆಯ ತೆರಿಗೆ ಪದ್ಧತಿಯನ್ನು ತೆಗೆದುಹಾಕಲು ಕೂಡ ಆಗುವುದಿಲ್ಲ. ಹಳೆಯ ತೆರಿಗೆ ಪದ್ಧತಿಯನ್ನು ಇನ್ನಷ್ಟು ಸುಲಭಗೊಳಿಸುವ ದಿಸೆಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆ. ಆದರೆ, ಹಳೆಯ ತೆರಿಗೆ ಪದ್ಧತಿಯನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಬಜೆಟ್ ಮಂಡನೆ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.