Site icon Vistara News

Union Budget 2024: ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ವಲಯದ 9 ಪ್ರಮುಖ ನಿರೀಕ್ಷೆಗಳಿವು

Union Budget 2024

ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ (Union Budget 2024) ಇಂದು ಪ್ರಾರಂಭ ಆಗಿದ್ದು, ಎಲ್ಲರ ನಿರೀಕ್ಷೆ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ ಮಂಡಿಸಲಿರುವ ಆರ್ಥಿಕ ಬಜೆಟ್ ಮೇಲಿದೆ. ಕೇಂದ್ರ ಬಜೆಟ್ 2024-25ರ ಹಣಕಾಸು ವರ್ಷದಲ್ಲಿ ರೈಲ್ವೇಯಲ್ಲಿ (Railway Budget) ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸಲು, ಮೂಲಸೌಕರ್ಯದಲ್ಲಿ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ಈ ವರ್ಷದ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಟ್ಟು ಬಜೆಟ್‌ನಲ್ಲಿ ರೈಲ್ವೆಗೆ 2,52,200 ಕೋಟಿ ರೂ. ಹಾಗೂ ಬಜೆಟ್ ಸಂಪನ್ಮೂಲಗಳಿಂದ ಹೆಚ್ಚುವರಿಯಾಗಿ 10,000 ಕೋಟಿ ರೂ. ಮೀಸಲಿಟ್ಟಿದ್ದರು.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂಬರುವ ಎರಡು ಹಣಕಾಸು ವರ್ಷಗಳಲ್ಲಿ ರಾಷ್ಟ್ರೀಯ ಸಾರಿಗೆಯಿಂದ 10,000 ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ಮಾಡುವ ಯೋಜನೆಗಳ ಬಗ್ಗೆ ಇತ್ತೀಚೆಗೆ ಬಹಿರಂಗಪಡಿಸಿದ್ದರು.

ರೈಲ್ವೇ ಬಜೆಟ್‌ನಲ್ಲಿನ ಪ್ರಮುಖ ನಿರೀಕ್ಷೆಗಳು


1. ಸಂಚಾರ ಜಾಲ ವಿಸ್ತರಣೆ

ಈ ಮೂಲಕ ರೈಲು ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಸಬಹುದು. ಸಾರ್ವಜನಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರವು ಗಮನಾರ್ಹ ಪ್ರಮಾಣದ ಹಣವನ್ನು ಮೀಸಲಿಡುವ ಸಾಧ್ಯತೆ ಇದೆ. ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಅತ್ಯತ್ತಮ ಸಾರಿಗೆ ಅನುಭವವನ್ನು ಹೆಚ್ಚಿಸುವ ನಿರೀಕ್ಷೆ ಇದೆ.

2. ರೈಲ್ವೇ ಕಾರಿಡಾರ್

ಮಧ್ಯಂತರ ಬಜೆಟ್‌ನಲ್ಲಿ 11 ಲಕ್ಷ ಕೋಟಿ ರೂ. ಮೊತ್ತದ ರೈಲ್ವೆ ಕಾರಿಡಾರ್‌ಗಳನ್ನು ಸರ್ಕಾರದ ಮುಂಬರುವ ಯೋಜನೆಗಳಲ್ಲಿ ಸೇರಿಸಲಾಗುವುದು ಎಂದು ಘೋಷಿಸಲಾಗಿತ್ತು. ಪ್ರಸ್ತುತ ತಯಾರಿ ಹಂತದಲ್ಲಿರುವ ಒಟ್ಟು 400 ಯೋಜನೆಗಳನ್ನು ಈ ಬಾರಿಯ ಬಜೆಟ್ ಒಳಗೊಳ್ಳುವ ನಿರೀಕ್ಷೆ ಇದೆ.

3. ಸೌಲಭ್ಯ ಆಧುನೀಕರಣ

ಮೂಲಸೌಕರ್ಯ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರರಾಗಿರುವ ಮನೀಷ್ ಆರ್ ಶರ್ಮಾ ಅವರ ಪ್ರಕಾರ, , ರೈಲ್ವೇ ಜಾಲವು ವಿಸ್ತಾರವಾಗಿರುವುದರಿಂದ ಸರ್ಕಾರವು ಕನಿಷ್ಠ ಐದು ವರ್ಷಗಳವರೆಗೆ ಸೌಲಭ್ಯಗಳ ಆಧುನೀಕರಣದತ್ತ ಗಮನ ಹರಿಸುವುದನ್ನು ಮುಂದುವರಿಸಬಹುದು ಎಂದು ತಿಳಿಸಿದ್ದಾರೆ.

Union Budget 2024


4. ಹೆಚ್ಚಿನ ರೈಲು ಸಂಚಾರ

ಪ್ರಯಾಣಿಕರ ವೇಟಿಂಗ್‌ ಲಿಸ್ಟ್‌ ಪ್ರಮಾಣ ಕಡಿಮೆ ಮಾಡಲು ರೈಲು ಸಂಚಾರವನ್ನು ಹೆಚ್ಚಿಸಬಹುದು. ಭಾರತೀಯ ರೈಲ್ವೆಯು 10,754 ದೈನಂದಿನ ರೈಲು ಪ್ರಯಾಣಗಳನ್ನು ನಡೆಸುತ್ತಿದೆ. ವಾರ್ಷಿಕವಾಗಿ ಸುಮಾರು 700 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. 2030ರ ವೇಳೆಗೆ ವೇಟಿಂಗ್‌ ಲಿಸ್ಟ್‌ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ಮೂಲಕ ವಾರ್ಷಿಕ 1,000 ಕೋಟಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ರೈಲು ಸೇವೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರ ಕಾಯುವ ಅವಧಿ ಕಡಿಮೆ ಮಾಡುವ ಸವಾಲನ್ನು ಎದುರಿಸಲು ಕನಿಷ್ಠ ಶೇ. 30ರಷ್ಟು ಅಂದರೆ ಸುಮಾರು 3,000 ಹೆಚ್ಚುವರಿ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.

5. ಅಭಿವೃದ್ಧಿ ಕಾಮಗಾರಿ

ಮೆಟ್ರೋ ನೆಟ್‌ವರ್ಕ್‌ ಹೆಚ್ಚಳ, ನಮೋ ಭಾರತ್ ಕಾರಿಡಾರ್‌ಗಳ ಅಭಿವೃದ್ಧಿ, ವಂದೇ ಭಾರತ್ ರೈಲುಗಳ ವಿಸ್ತರಣೆ, ಹೈಸ್ಪೀಡ್ ಕಾರಿಡಾರ್‌ಗಳ ಸ್ಥಾಪನೆ ಮತ್ತು ಆರ್ಥಿಕ ಕಾರಿಡಾರ್‌ಗಳ ರಚನೆಗೆ ಆರ್ಥಿಕ ಸಂಪನ್ಮೂಲಗಳನ್ನು ಬಜೆಟ್ ನಲ್ಲಿ ಮೀಸಲಿಡುವ ಸಾಧ್ಯತೆ ಇದೆ.

6. ಪಿಎಲ್‌ಐ ಯೋಜನೆ

ಬಜೆಟ್‌ನಲ್ಲಿ ಈ ಬಾರಿ ಪಿಎಲ್‌ಐ ಯೋಜನೆಯ ಅಡಿಯಲ್ಲಿ ಸರ್ಕಾರವು ಸಾಮಾನ್ಯವಾಗಿ ಆಮದು ಮಾಡಿಕೊಳ್ಳುವ ಉತ್ಪನ್ನಗಳನ್ನು ತಯಾರಿಸಲು ಪ್ರೋತ್ಸಾಹ ನೀಡುವ ನೀಡಲಿದೆ.

7. ಸುರಕ್ಷತೆಗೆ ಆದ್ಯತೆ

ಕೇಂದ್ರ ಬಜೆಟ್ 2024ರಲ್ಲಿ ರೈಲ್ವೇ ವಲಯದ ಪ್ರಮುಖ ನಿರೀಕ್ಷೆಗಳಲ್ಲಿ ಸುರಕ್ಷತೆ ಪ್ರಮುಖವಾಗಿದೆ. ಇದಕ್ಕಾಗಿ ರೈಲ್ವೇಯ ಯಂತ್ರೋಪಕರಣಗಳು, ಉಪಕರಣಗಳು, ಕಟ್ಟಡ, ಆರೋಗ್ಯ ಸೌಲಭ್ಯ, ಶಿಕ್ಷಣ ಮೊದಲಾದವುಗಳ ಅಭಿವೃದ್ಧಿಗೆ ಸರ್ಕಾರವು ಹೆಚ್ಚು ಖರ್ಚು ಮಾಡುವ ನಿರೀಕ್ಷೆ ಇದೆ. ಇದರೊಂದಿಗೆ ಅಪಘಾತಗಳನ್ನು ತಡೆಯಲು ಸುರಕ್ಷತೆಗಾಗಿ ಹೆಚ್ಚಿನ ಹಣ ವಿನಿಯೋಗಿಸಬಹುದು.

ಹೊಸ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳನ್ನು ಪ್ರಾರಂಭಿಸುವುದು, ಸರಕು ವ್ಯಾಗನ್ ಗಳನ್ನು ಹೆಚ್ಚಿಸುವುದು, ಪ್ರಯಾಣಿಕರ ವಿಭಾಗ, ದಟ್ಟಣೆಯ ನೆಟ್‌ವರ್ಕ್‌ಗಳಲ್ಲಿ ಸುರಕ್ಷಿತ ಮತ್ತು ವೇಗವಾದ ಟ್ರ್ಯಾಕ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು ಎನ್ನುತ್ತಾರೆ ಬಜೆಟ್ ವಿಶ್ಲೇಷಕ ಅಜಯ್ ಬಗ್ಗಾ.


8. ಖಾಸಗಿ ಸಹಭಾಗಿತ್ವ

ಕೇಂದ್ರ ಬಜೆಟ್‌ನಲ್ಲಿ ಶೇ. 12- 15ರಷ್ಟು ಹೆಚ್ಚಿನ ಬಜೆಟ್ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ಆಸ್ತಿ, ಹಣ ಗಳಿಕೆಯ ಪ್ರಯತ್ನಗಳಲ್ಲದೆ ರೈಲ್ವೆ ವಿಭಾಗದಲ್ಲಿ ಸಾರ್ವಜನಿಕ- ಖಾಸಗಿ ಭಾಗವಹಿಸುವಿಕೆ ಯೋಜನೆಗಳಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು

9. ರೈಲಿನ ಸಾಮರ್ಥ್ಯ ಹೆಚ್ಚಳ

ವಂದೇ ಭಾರತ್‌ ಗುಣಮಟ್ಟಕ್ಕೆ ಪೂರಕವಾಗಿ ರೈಲು ಬೋಗಿಗಳ ಸುಧಾರಣೆಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಆರ್ಥಿಕ ರೈಲು ಕಾರಿಡಾರ್‌ಗಳ ಮೇಲೆ ಗಮನ ಕೇಂದ್ರೀಕರಿಸುವ ನಿರೀಕ್ಷೆ ಇದೆ. ನಿಲ್ದಾಣಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ.

Exit mobile version