Site icon Vistara News

ʼದೇವರ ಪುತ್ರಿʼ ಬಾಲಿವುಡ್‌ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ

ಮುಂಬೈ: ಚಿತ್ರರಂಗದಲ್ಲಿ ಕೆಲವು ಹೊಸ ಮುಖಗಳು ಪಾದಾರ್ಪಣೆಗೆ ಸಿದ್ಧವಾಗಿದ್ದಾರೆ. ಕಳೆದ ವಾರ ಶಾರುಖ್ ಖಾನ್ ಲಾಡ್ಲಿ ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ಜೋಯಾ ಅಖ್ತರ್ ಚಿತ್ರದ ಮೂಲಕ ಎಲ್ಲಾ ಮೂವರು ಮಕ್ಕಳ ತಾರೆಗಳು ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ.

ಇದೇ ವೇಳೆ ಕ್ರಿಕೆಟ್‌ ದಂತಕಥೆ, ಕ್ರಿಕೆಟ್‌ ದೇವರು ಎಂದೇ ಕರೆಯಲ್ಪಡುವ ಸಚಿನ್‌ ತೆಂಡೂಲ್ಕರ್‌ ಕುಟುಂಬದ ಸದಸ್ಯರೊಬ್ಬರೂ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟಿರುವಂತೆ ಕಾಣುತ್ತಿದೆ. ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್‌ ಬಾಲಿವುಡ್‌ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಸಾರಾ ಇನ್ನೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್‌ ಹೊಂದಿದ್ದಾರೆ. ಸಾರಾ ಅಪ್‌ಲೋಡ್‌ ಮಾಡುವ ಪ್ರತಿ ಚಿತ್ರಕ್ಕೂ ಐದಾರು ಲಕ್ಷ ಲೈಕ್‌ ಬರುತ್ತಿದೆ. ಇದೇ ಜನಪ್ರಿಯತೆಯನ್ನು ಬಳಸಿಕೊಂಡು ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತು ಬಾಲಿವುಡ್‌ ವಲಯದಲ್ಲಿ ಕೇಳಿಬರುತ್ತಿದೆ.

ಅದಕ್ಕೆ ತಕ್ಕಂತೆ ಇನ್‌ಸ್ಟಾದಲ್ಲಿ ಸಾರಾ ಅಪ್‌ಲೋಡ್‌ ಮಾಡವ ಪೋಸ್ಟ್‌ಗಳನ್ನು ನೋಡಿದ ಅನೇಕರು, ಬಾಲಿವುಡ್‌ ಹೀರೋಯಿನ್‌ ಆಗುವ ಎಲ್ಲ ಅರ್ಹತೆ ಇದೆ ಎಂದು ಪಾಸಿಟಿವ್‌ ಅಭಿಪ್ರಾಯ ಹೇಳುತ್ತಿದ್ದಾರೆ.

ಈಗಾಗಲೆ ಸಾರಾ ಅನೇಕ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್‌ ಪತ್ನಿ ಅಂಜಲಿ ರೀತಿಯಲ್ಲೆ ಸಾರಾ ಸಹ ವೈದ್ಯಕೀಯ ಶಿಕ್ಷಣ ಮುಗಿಸಿದ್ದಾರೆ. ಲಂಡನ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆದಿರುವ ಸಾರಾಗೆ ವೈದ್ಯೆಯಾಗುವುದಕ್ಕಿಂತಲೂ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ನೋಡಲು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಸಾರಾ ಬಾಲಿವುಡ್‌ ಪ್ರವೇಶದ ಕುರಿತು ಮಾತುಗಳು ಕೇಳಿಬಂದಿದ್ದವು. ಆದರೆ ಇದೆಲ್ಲ ಕಟ್ಟುಕಥೆ, ಆಕೆ ತನ್ನ ವಿದ್ಯಾಭ್ಯಾಸದಲ್ಲಿ ಗಮನ ಹರಿಸುತ್ತಿದ್ದಾಳೆ ಎಂದು ಮಾಸ್ಟರ್‌ ಬ್ಲಾಸ್ಟರ್‌ ತೆಂಡೂಲ್ಕರ್‌ ತಿಳಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈ ಬಾರಿ ಸಾರಾ ಬಾಲಿವುಡ್‌ ಪ್ರವೇಶಕ್ಕೆ ಸಚಿನ್‌ ಸಮ್ಮಿತಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಚಿನ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಈಗಾಗಲೆ ತಂದೆಯ ಹಾದಿಯಲ್ಲೇ ನಡೆದಿದ್ದಾರೆ. ಕ್ರಿಕೆಟ್‌ ಅನ್ನೇ ತಮ್ಮ ಜೀವನವನ್ನಾಗಿ ರೂಪಿಸಿಕೊಳ್ಳಲು ಮುಂದಾಗಿರುವ ಅರ್ಜುನ್‌ ಇದೀಗ ಮುಂಬೈ ಐಪಿಎಲ್‌ ತಂಡದ ಸದಸ್ಯರಾಗಿದ್ದಾರೆ. ಆದರೆ ಪುತ್ರಿ ಸಾರಾ ಬಾಲಿವುಡ್‌ ಪ್ರವೇಶದ ಬಗ್ಗೆ ಕಾಲವೇ ಉತ್ತರ ನೀಡಲಿದೆ.

ಇದನ್ನೂ ಓದಿ | RRR: ರೌದ್ರಂ.. ರಣಂ.. ರುಧಿರಂ.. ಒಂದು ಹೈ ವೊಲ್ಟೇಜ್‌ ಮೂವಿ

Exit mobile version