Site icon Vistara News

Happy Birthday Dhanush : ಬಾಣಸಿಗ ಆಗಲು ಬಯಸಿದ್ದ ಧನುಷ್‌! ಇಲ್ಲಿವೆ ಕುತೂಹಲಕರ 40 ಸಂಗತಿಗಳು

facts about dhanush

ಚೆನ್ನೈ: ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ಧನುಷ್‌ ಅವರಿಗೆ ಇಂದು 40ನೇ ಜನ್ಮ ದಿನಾಚರಣೆಯ ಸಂಭ್ರಮ. ನಟ, ಹಿನ್ನೆಲೆ ಗಾಯಕ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಧನುಷ್‌ ಅವರ ಬಾಲ್ಯದ ಕನಸು ಬೇರೆಯದ್ದೇ ಆಗಿತ್ತಂತೆ. 1983ರ ಜುಲೈ 28ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಧನುಷ್‌ ಅವರ ಬಗ್ಗೆ ಕುತೂಹಲಕರ 40 ಸಂಗತಿಗಳು ಇಲ್ಲಿವೆ.
ಧನುಷ್‌ ಅವರ ತಂದೆ ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜ. ಅವರ ಸಹೋದರ ಬಹುಮುಖ ನಟ ಸೆಲ್ವರಾಘವನ್‌. 2002ರಲ್ಲಿ “ತುಳ್ಳುವದೋ ಇಳಮೈ” ಎಂಬ ತಮಿಳು ಚಲನಚಿತ್ರದೊಂದಿಗೆ ಧನುಷ್ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅವರಿಗೆ ದೊಡ್ಡ ಫೇಮ್‌ ತಂದುಕೊಟ್ಟಿದ್ದು ‘ಪುದುಪೆಟ್ಟೈ’ ಸಿನಿಮಾ. ನಟನೆಯಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದ ಅವರು ಹಿನ್ನೆಲೆ ಗಾಯಕರಾಗಿ ತಮಿಳು ಚಿತ್ರರಂಗದ ಹಲವಾರು ಹಿಟ್‌ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅದರಲ್ಲಿ ಒಂದು ವೈ ದಿಸ್‌ ಕೊಲವೆರಿ ಡಿ ಹಾಡು.

ಇದನ್ನೂ ಓದಿ: Captain Miller Teaser: ಧನುಷ್‌ ಜನುಮದಿನದಂದೇ ಕ್ಯಾಪ್ಟನ್‌ ಮಿಲ್ಲರ್‌ ಟೀಸರ್‌ ಔಟ್‌; ಶಿವಣ್ಣನ ಮಾಸ್‌ ಎಂಟ್ರಿ!

1. ಧನುಷ್ ಅವರ ನಿಜವಾದ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್.
2. ಅವರು ಎಂದಿಗೂ ನಟನಾಗಲು ಕನಸು ಕಂಡಿರಲಿಲ್ಲ. ಛೆಫ್‌ (ಬಾಣಸಿಗ) ಆಗಬೇಕೆಂಬ ಕನಸು ಕಂಡಿದ್ದ ಅವರು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವಿ ಪಡೆಯಬೇಕು ಎಂದುಕೊಂಡಿದ್ದರು.
3. ಧನುಷ್‌ ಅವರ ಅಣ್ಣ, ನಿರ್ದೇಶಕ-ಚಿತ್ರಕಥೆಗಾರ ಸೆಲ್ವರಾಘವನ್ ಅವರು ಧನುಷ್‌ಗೆ ನಟನೆಯನ್ನು ಮಾಡುವುದಕ್ಕೆ ಮನವೊಲಿಸಿದರು.
4. ಧನುಷ್ ಅವರ ನಟನಾ ವೃತ್ತಿಜೀವನವು ಅವರ ತಂದೆ ಕಸ್ತೂರಿ ರಾಜಾ ನಿರ್ದೇಶನದ ತುಳ್ಳುವದೋ ಇಳಮೈಯೊಂದಿಗೆ ಪ್ರಾರಂಭವಾಯಿತು.
5. 2003ರಲ್ಲಿ ಅವರು ತಮ್ಮ ಸಹೋದರ ಸೆಲ್ವರಾಘವನ್ ಅವರ ನಿರ್ದೇಶನದ ‘ಕಾದಲ್ ಕೊಂಡೇನ್‌’ ಸಿನಿಮಾದಲ್ಲಿ ನಟಿಸಿದರು.
6. ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ‘ಪವರ್ ಪಾಂಡಿ’ ಚಿತ್ರದ ಮೂಲಕ ಅವರು ನಿರ್ದೇಶನದಲ್ಲಿ ಚೊಚ್ಚಲ ಪ್ರವೇಶ ಮಾಡಿದರು.
7. ಕೊಲವೆರಿ ಡಿ ಹಾಡು ಇಂಟರ್ನೆಟ್ ಸೆನ್ಸೇಷನ್ ಆದ ನಂತರ ಧನುಷ್ ಇನ್ನಷ್ಟು ಪ್ರಸಿದ್ಧರಾದರು.
8. ಧನುಷ್ ಕೊಲವೆರಿ ಡಿ ಹಾಡನ್ನು ಆರು ನಿಮಿಷಗಳಲ್ಲಿ ರಚಿಸಿದ್ದರು ಮತ್ತು ಆರಂಭಿಕ ರೆಕಾರ್ಡಿಂಗ್ ಅನ್ನು 35 ನಿಮಿಷಗಳಲ್ಲಿ ಮುಗಿಸಿದ್ದರು!


9. ಅವರು ತಮ್ಮ ಕೊಲವರಿ ಡಿ ಹಾಡಿಗೆ 2012ರ ಫಿಲ್ಮ್‌ಫೇರ್‌ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದರು.
10. ಧನುಷ್ ಅವರ ಕೊಲವೆರಿ ಡಿ ಹಾಡಿಗೆ 2011ರಲ್ಲಿ CNN ಟಾಪ್ ಸಾಂಗ್ ಆಫ್ 2011 ಹೆಸರಿನ ಪ್ರಶಸ್ತಿಯನ್ನೂ ಕೊಡಲಾಯಿತು.
11. ಈ ಹಾಡನ್ನು ಅವರ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ʼ3ʼಗಾಗಿ ರೆಕಾರ್ಡ್ ಮಾಡಲಾಗಿತ್ತು.
12. ಧನುಷ್ ʼ3ʼ ಸಿನಿಮಾದಲ್ಲಿ ಶ್ರುತಿ ಹಾಸನ್ ಜೊತೆ ನಟಿಸಿದ್ದಾರೆ.
13. ವರದಿಯ ಪ್ರಕಾರ, ಧನುಷ್ 16 ವರ್ಷದವರಾಗಿದ್ದಾಗಲೇ ಅವರು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆ ಹುಡುಗಿ ಅವರೊಂದಿಗೆ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಳು!
14. ಧನುಷ್‌ 2004ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು ವಿವಾಹವಾದರು.


15. 2003ರಲ್ಲಿ ಕಾದಲ್ ಕೊಂಡೇನ್ ಚಿತ್ರದ ಪ್ರದರ್ಶನದ ಸಮಯದಲ್ಲಿ ಐಶ್ವರ್ಯಾ ಅವರನ್ನು ಧನುಷ್ ಭೇಟಿಯಾಗಿದ್ದರು.
16. 2022ರಲ್ಲಿ ಧನುಷ್‌ ತಮ್ಮ ಪತ್ನಿ ಐಶ್ವರ್ಯಾರಿಂದ ಬೇರ್ಪಡುವುದಾಗಿ ಘೋಷಿಸಿದರು.
17. ವರದಿಗಳ ಪ್ರಕಾರ, ಅವರ ವಿಚ್ಛೇದನವನ್ನು ತಡೆಹಿಡಿಯಲಾಗಿದೆ. ಇವರಿಬ್ಬರು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
18. ಧನುಷ್‌ ಶಿವನ ಪರಮಭಕ್ತ. ಅವರ ಇಬ್ಬರು ಪುತ್ರರ ಹೆಸರು ಯಾತ್ರಾ ಮತ್ತು ಲಿಂಗ.


19. ಧನುಷ್‌ ವಂಡರ್‌ಬಾರ್ ಫಿಲ್ಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಸಂಸ್ಥೆ ಹೆಚ್ಚಾಗಿ ತಮಿಳು ಸಿನಿಮಾಗಳನ್ನೇ ನಿರ್ಮಾಣ ಮಾಡುತ್ತದೆ.
20. ಅವರು ನಿರ್ಮಾಣ ಸಂಸ್ಥೆಯನ್ನು 2010ರಲ್ಲಿ ತಮ್ಮ ಪತ್ನಿಯೊಂದಿಗೆ ಸಹ-ಸ್ಥಾಪಿಸಿದರು.
21. ಅವರು ಆನಂದ್ ಎಲ್ ರೈ ಅವರ ʼರಾಂಝಾನಾʼ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು.
22. ವರದಿಯ ಪ್ರಕಾರ, ಧನುಷ್ ಅವರು ಆನಂದ್ ಎಲ್ ರೈ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಆದರೆ ತನು ವೆಡ್ಸ್ ಮನು ರಿಟರ್ನ್ಸ್ (2015)ನಲ್ಲಿ ಅವರ ಅತಿಥಿ ಪಾತ್ರವನ್ನು ಅವರಿಗೆ ತಿಳಿಸದೆ ತೆಗೆದುಹಾಕಿದಾಗ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು.
23. ನಂತರ, ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ ಬಾಲಿವುಡ್ ಚಲನಚಿತ್ರ ಶಮಿತಾಭ್ ಚಿತ್ರದಲ್ಲಿ ನಟಿಸಿದರು.
24. ಇತ್ತೀಚೆಗೆ, ಅವರು ಅತ್ರಾಂಗಿ ರೇ ಚಿತ್ರದಲ್ಲಿ ಸಾರಾ ಅಲಿ ಖಾನ್ ಜತೆಗೆ ಕಾಣಿಸಿಕೊಂಡರು.
25. ಧನುಷ್ ಅವರ ಚೊಚ್ಚಲ ಅಂತಾರಾಷ್ಟ್ರೀಯ ಚಲನಚಿತ್ರ ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್ 2019 ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಯಿತು.
26. ನಂತರ ಅವರು ಹಾಲಿವುಡ್ ಚಲನಚಿತ್ರ ದಿ ಗ್ರೇ ಮ್ಯಾನ್‌ನಲ್ಲಿ ನಟಿಸಿದರು. ಇದರಲ್ಲಿ ಅವರು ರಿಯಾನ್ ಗೊಸ್ಲಿಂಗ್, ಕ್ರಿಸ್ ಇವಾನ್ಸ್ ಮತ್ತು ಅನಾಡೆ ಅರ್ಮಾಸ್ ಅವರೊಂದಿಗೆ ನಟಿಸಿದರು.


27. ಧನುಷ್‌ಗೆ ಸಂಗೀತದಲ್ಲಿ ಆಸಕ್ತಿ ಇದೆ. ಅವರು ತಮಿಳು ಹಾಡುಗಳನ್ನು ರಚಿಸುತ್ತಾರೆ ಮತ್ತು ಹಾಡುತ್ತಾರೆ.
28. 2011 ರಲ್ಲಿ PETA ನಿಂದ ಧನುಷ್ ಅವರನ್ನು ಭಾರತದ ‘ಹಾಟೆಸ್ಟ್ ಸಸ್ಯಾಹಾರಿ ಸೆಲೆಬ್ರಿಟಿ’ ಎಂದು ಹೆಸರಿಸಲಾಯಿತು.
29. 2022ರಲ್ಲಿ, ಮಿತ್ರನ್ ಜವಾಹರ್ ನಿರ್ದೇಶನದ ತಿರುಚಿತ್ರಂಬಲಂನಲ್ಲಿ ಧನುಷ್ ಕಾಣಿಸಿಕೊಂಡರು. ಇದರಲ್ಲಿ ನಿತ್ಯಾ ಮೆನನ್, ಪ್ರಿಯಾ ಭವಾನಿ ಶಂಕರ್, ರಾಶಿ ಕಣ್ಣಾ, ಭಾರತಿರಾಜ, ಪ್ರಕಾಶ್ ರಾಜ್ ಮತ್ತು ಮುನಿಷ್ಕಾಂತ್ ಸಹ ನಟಿಸಿದ್ದಾರೆ.
30. ಧನುಷ್‌ 2011 ಮತ್ತು 2021ರಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.
31. ಕಾಕ ಮುತ್ತೈ ಮತ್ತು ವಿಸಾರಣೈ ಚಿತ್ರಗಳಿಗೆ ನಿರ್ಮಾಪಕರಾಗಿ ಧನುಷ್ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
32. ಧನುಷ್‌ 2014ರಲ್ಲಿ ರಾಂಝಾನಾ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನವ ನಟ ಪ್ರಶಸ್ತಿಯನ್ನು ಗೆದ್ದರು.
33. ರಾಂಝಾನಾ ಸಿನಿಮಾದಿಂದಾಗಿ ಅವರಿಗೆ 2014ರಲ್ಲಿ IIFA ಮತ್ತು Zee ಸಿನಿ ಪ್ರಶಸ್ತಿಗಳನ್ನು ಬಂದಿತು.
34. 2022ರಲ್ಲಿ, ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ʼಅತ್ರಾಂಗಿ ರೇʼಗಾಗಿ ಧನುಷ್ ಅತ್ಯುತ್ತಮ ನಟನಾಗಿ ನಾಮನಿರ್ದೇಶನಗೊಂಡರು.


35. 3, ಆಡುಕಲಂ, ವಡ ಚೆನ್ನೈ ಸೇರಿ ಅನೇಕ ಸಿನಿಮಾಗಳಿಗೆ ಧನುಷ್‌ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
36. ಧನುಷ್ ಅವರು ಆರು ಎಡಿಸನ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
37. ಚೆನ್ನೈ ಟೈಮ್ಸ್ ಧನುಷ್‌ ಅವರನ್ನು 2011ರಲ್ಲಿ ದಕ್ಷಿಣ ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಎಂದು ಗುರುತಿಸಿತು.
38. ಧನುಷ್‌ಗೆ ಇಲ್ಲಿಯವರೆಗೆ ಹಲವಾರು ಬಾರಿ ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಿತ SIIMA ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
39. SIIMA ಅವರನ್ನು 2011 ರಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಶನ್ ಎಂದು ಗುರುತಿಸಿತು.
40. ಅವರು ಮುಂದಿನ ತಮಿಳು ಚಿತ್ರ ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ.

Exit mobile version