Site icon Vistara News

68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ

68th National Film Awards

ಬೆಂಗಳೂರು : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (68th National Film Awards) ಪ್ರಕಟಿಸಲಾಗಿದ್ದು, ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್‌ ಒಡೆಯರ್‌ ನಿರ್ಮಾಣದ ಡೊಳ್ಳು ಸಿನಿಮಾಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಘೋಷಿಸಲಾಗಿದೆ. ದಿವಂಗತ ಸಂಚಾರಿ ವಿಜಯ್‌ ಅಭಿನಯಿಸಿರುವ ತಲೆದಂಡ ಸಿನಿಮಾ ಪರಿಸರ ಕಾಳಜಿಗಾಗಿನ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.

ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಡೊಳ್ಳು ಸಿನಿಮಾವನ್ನು ಯುವ ನಿರ್ದೇಶಕ ಸಾಗರ್‌ ಪುರಾಣಿಕ್‌ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಆಡಿಯೋಗ್ರಫಿಗಾಗಿ ಅತ್ಯತ್ತಮ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ ಡೊಳ್ಳು ಮತ್ತು ತಲೆದಂಡ. ಮಹಾನ್ ಹುತಾತ್ಮ ಕಿರುಚಿತ್ರದ ಸಾರಥಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾ ಜುಲೈನಲ್ಲಿ ಥಿಯೇಟರ್‌ಗೆ ಆಗಮನವಾಗಲಿದೆ.

ನಿರೀಕ್ಷೆಯಂತೆ ಸಂಚಾರಿ ವಿಜಯ್‌ ಅಭಿನಯಿಸಿರುವ, ಪ್ರವೀಣ್‌ ಕೃಪಾಕರ್‌ ನಿರ್ದೇಶನದ ತಲೆದಂಡ, ಪರಿಸರ ಉಳಿಸುವ ಕುರಿತು ಕಾಳಜಿ ತೋರಿದ ಚಿತ್ರವಾಗಿದೆ. ರಸ್ತೆಗಾಗಿ ಮರ ಕಡಿಯುವುದರಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸಲಾಗಿದೆ. ಸಂಚಾರಿ ವಿಜಯ್‌ ಅದ್ಭುತವಾಗಿ ಅಭಿನಯಿಸಿದ್ದರು, ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರಿಲ್ಲದಿರುವಾಗ ಈ ಚಿತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಿದೆ.
ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

ಡೊಳ್ಳುಗೆ ಪ್ರಶಸ್ತಿಗಳ ಸುರಿಮಳೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಡೊಳ್ಳು ಪ್ರತಿಷ್ಠಿತ ಬರ್ಲಿನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ 9 ಭಾರತೀಯ ಸಿನಿಮಾಗಳಲ್ಲಿ ಒಂದು. ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಡೊಳ್ಳು ಸಿನಿಮಾ ಪ್ರದರ್ಶನಗೊಂಡಿದೆ. ಚೆನ್ನೈನಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇದರ ಜತೆ ಹ್ಯಾಬಿಟಾಟ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೀಗೆ ಹಲವು ಚಿತ್ರೋತ್ಸವಗಳಲ್ಲಿ ಬಿಡುಗಡೆಗೂ ಮುನ್ನ ಪ್ರಶಸ್ತಿ ಬಾಚಿಕೊಂಡಿದೆ.

ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಾಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್‌ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್‌ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ಡೊಳ್ಳು ಕಲಾವಿದನ ಬದುಕು, ಅವನ ಸುತ್ತಲಿನ ಸಂಘರ್ಷ ಹಾಗೂ ಹಳ್ಳಿ ನಗರೀಕರಣದ ಸಮಸ್ಯೆಗಳ ಕಥಾ ಹಂದರವನ್ನು ಹೊಂದಿದೆ.

ಚಿತ್ರವನ್ನು ಶಿವಮೊಗ್ಗ, ಸೊರಬ, ಶಿಕಾರಿಪುರ, ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವಾಗಿ ಈ ಚಿತ್ರಕ್ಕೆ ವೃತ್ತಿಪರ ಡೊಳ್ಳು ಕುಣಿತಗಾರರಿಂದಲೇ ಹೆಜ್ಜೆ ಹಾಕಿಸಲಾಗಿದೆ. ಚಿತ್ರದಲ್ಲಿ ಕಾರ್ತಿಕ್‌ ಮಹೇಶ್‌ ನಾಯಕ ನಟನಾಗಿದ್ದು, ನಿಧಿ ಹೆಗ್ಡೆ ನಾಯಕಿ ನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Mafia | ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಸಿನಿಮಾಗೆ ಎಂಟ್ರಿ

Exit mobile version