ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (70th National Film Awards) ಘೋಷಣೆಗೆ ದಿನಗಣನೆ ಆರಂಭವಾಗಿದೆ. ಈ ತಿಂಗಳೊಳಗೆ ಪ್ರಶಸ್ತಿ ವಿಜೇತರ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಚಲನಚಿತ್ರ ಆಯ್ಕೆ ಮಂಡಳಿ ಸಿದ್ಧತೆಯಲ್ಲಿ ತೊಡಗಿದೆ. 2022ರಲ್ಲಿ ತೆರೆಕಂಡ ಭಾರತದ ವಿವಿಧ ಭಾಷೆಗಳ ಅತ್ಯುತ್ತಮ ಚಿತ್ರಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ವಿವಿಧ ವಿಭಾಗಳಲ್ಲಿ ಅತ್ಯುತ್ತಮರನ್ನು ಆಯ್ಕೆ ಮಾಡುವ ಈ ಪ್ರಶಸ್ತಿ ಈಗಾಗಲೇ ಕುತೂಹಲ ಮೂಡಿಸಿದೆ. ವಿಶೇಷ ಎಂದರೆ ಅತ್ಯುತ್ತಮ ನಟ ವಿಭಾಗದಲ್ಲಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಅಂತಿಮ ಸುತ್ತಿಗೆ ಈ ಇಬ್ಬರು ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಯಾರಿಗೆ ಪ್ರಶಸ್ತಿ ಸೇರಲಿದೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ರಿಷಬ್ ಶೆಟ್ಟಿ
2022ರಲ್ಲಿ ತೆರೆಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ʼಕಾಂತಾರʼ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಅತ್ಯುತ್ತಮ ಚಿತ್ರದ ಜತೆಗೆ ನಟ, ನಿರ್ದೇಶಕ ವಿಭಾಗದಲ್ಲಿಯೂ ರಿಷಬ್ ಶೆಟ್ಟಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಗಮನವನ್ನೂ ಸೆಳೆದಿದ್ದಾರೆ. ʼಕಾಂತಾರʼ ಚಿತ್ರದ ಶಿವ ಪಾತ್ರದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್ ಶೆಟ್ಟಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ಜಗತ್ತಿಗೇ ಸಾರಿದ ಈ ಸಿನಿಮಾ ಮೇಕಿಂಗ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲಿಯೂ ನಾಯಕನಾಗಿ ರಿಷಭ್ ಶೆಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕ್ಲೈಮಾಕ್ಸ್‌ನಲ್ಲಂತೂ ಅವರ ಅಭಿನಯ ಅಮೋಘ ಎಂದಿದ್ದ ಹಲವರು ಅಂದೇ ನ್ಯಾಷನಲ್ ಅವಾರ್ಡ್ ಬಗ್ಗೆ ಭವಿಷ್ಯ ನುಡಿದಿದ್ದರು.
2016ರಲ್ಲಿ ʼರಿಕ್ಕಿʼ ಚಿತ್ರ ನಿರ್ದೇಶಿಸುವ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಬಳಿಕ ತೆರೆಕಂಡ ʼಕಿರಿಕ್ ಪಾರ್ಟಿʼ ಮತ್ತು ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆದರು. ಇನ್ನು 2022ರಲ್ಲಿ ತೆರೆಕಂಡ ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸಿ ಮೈಲಿಗಲ್ಲು ನೆಟ್ಟಿದೆ. ಈಗಾಗಲೇ ಫಿಲಂಫೇರ್‌ನಂತಹ ಪ್ರಶಸ್ತಿ ಮುಡುಗೇರಿಸಿಕೊಂಡ ರಿಷಬ್ ಶೆಟ್ಟಿ ಅವರಿಗೆ ನ್ಯಾಷನಲ್ ಅವಾರ್ಡ್ ಪಡೆಯುವ ಎಲ್ಲ ಅರ್ಹತೆಗಳಿವೆ ಎಂದು ಚಿತ್ರಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನೇನು ಈ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.
ಮಮ್ಮುಟ್ಟಿ
ಮಾಲಿವುಡ್ ನಟ, ಬಹುಭಾಷಾ ಕಲಾವಿದ ಮಮ್ಮುಟ್ಟಿ ಕೂಡ ಅತ್ಯುತ್ತಮ ನಟ ವಿಭಾಗದ ರೇಸ್‌ನಲ್ಲಿದ್ದಾರೆ. ಈಗಾಗಲೇ 3 ಬಾರಿ ರಾಷ್ಟ್ರೀಯ ಚಲನಚಿತ್ರ ಮುಡಿಗೇರಿಸಿಕೊಂಡ ಅವರು ʼರೋಷಾಕ್ʼ (Rorschach) ಮತ್ತು ʼನಾನ್‌ಪಗಲ್ ನೇರತ್ತ್ ಮಯಕ್ಕಂʼ (Nanpakal Nerathu Mayakkam) ಚಿತ್ರದಲ್ಲಿನ ಅಭಿನಯಕ್ಕಾಗಿ ಮತ್ತೊಮ್ಮೆ ಪ್ರಬಲ ಪೈಪೋಟಿ ಒಡ್ಡಿದ್ದಾರೆ.
2022ರಲ್ಲಿ ತೆರೆಕಂಡ ಈ ಚಿತ್ರಗಳ ಮೂಲಕ ಮಮ್ಮುಟ್ಟಿ ಮತ್ತೊಮ್ಮೆ ತಮ್ಮ ಅಭಿನಯ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ʼರೋಷಾಕ್ʼ ಅನ್ನು ಸಿಸ್ಸಾಮ್ ಬಷೀರ್ ನಿರ್ದೇಶಿಸಿದರೆ, ʼನಾನ್‌ಪಗಲ್ ನೇರತ್ತ್ ಮಯಕ್ಕಂʼ ಸಿನಿಮಾಕ್ಕೆ ಲಿಜೊ ಜೋಸ್ ಪೆಲ್ಲಿಶ್ಶೇರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ʼನಾನ್‌ಪಗಲ್ ನೇರತ್ತ್ ಮಯಕ್ಕಂʼ ಚಿತ್ರಕ್ಕಾಗಿ ಈಗಾಗಲೇ ಮಮ್ಮುಟ್ಟಿ ಕೇರಳ ರಾಜ್ಯ ಚಲನಚಿತ್ರ, ಫಿಲಂಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರೇಕ್ಷಕರಿಂದ, ವಿಮರ್ಷಕರಿಂದ ಮೆಚ್ಚುಗೆ ಗಳಿಸಿದ ಮಮ್ಮುಟಿ 4ನೇ ಬಾರಿ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರಾ? ಕಾದು ನೋಡಬೇಕಿದೆ.