Site icon Vistara News

Viduthalai | ವಿಜಯ್​ ಸೇತುಪತಿ ಮತ್ತು ಸೂರಿ ನಟನೆಯ ʻವಿಡುತಲೈʼ ಶೂಟಿಂಗ್‌ ವೇಳೆ ಸ್ಟಂಟ್‌ಮ್ಯಾನ್‌ ಸಾವು

Viduthalai stunt man dead

ಬೆಂಗಳೂರು : ವೆಟ್ರಿಮಾರನ್ ನಿರ್ದೇಶನದ ʻವಿಡುತಲೈʼ (Viduthalai) ಚಿತ್ರದ ಶೂಟಿಂಗ್‌ ವೇಳೆ ಕ್ರೇನ್‌ನಿಂದ 20 ಅಡಿ ಎತ್ತರದಿಂದ ಕೆಳಗೆ ಬಿದ್ದು ಸ್ಟಂಟ್‌ ಮಾಸ್ಟರ್‌ ಸುರೇಶ್‌ ಎಂಬುವವರು ಮೃತಪಟ್ಟಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದೇ ರೀತಿಯ ದುರ್ಘಟನೆ 2 ವರ್ಷದ ಹಿಂದೆ ನಡೆದಿತ್ತು. ʻಇಂಡಿಯನ್‌-2ʼ ಸಿನಿಮಾ ಶೂಟಿಂಗ್ ವೇಳೆ ಕ್ರೇನ್‌ ಉರುಳಿಬಿದ್ದು, ಆಗ ಮೂವರು ಮೃತಪಟ್ಟಿದ್ದರು.

‘ವಿಡುತಲೈ’ ಸೂರಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಚೆನ್ನೈ ಬಳಿಕ ಕೇಲಂಬಕ್ಕಂನಲ್ಲಿ ಸೆಟ್‌ ಹಾಕಿ ʻವಿಡುತಲೈʼ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿತ್ತು. ರೈಲು ಹಳಿ ಹಾಗೂ ರೈಲಿನ ಸೆಟ್ ಹಾಕಲಾಗಿತ್ತು. ರೈಲು ಅಪಘಾತ ಸಂಭವಿಸಿದಂತೆ ಸನ್ನಿವೇಶ ಕಟ್ಟಿಕೊಡಲಾಗಿತ್ತು. ಚಿತ್ರೀಕರಣಕ್ಕಾಗಿ ಸ್ಟಂಟ್‌ಮ್ಯಾನ್ ಸುರೇಶ್ ಸೇರಿದಂತೆ ಕೆಲವರು ಕ್ರೇನ್‌ಗೆ ಹಗ್ಗ ಕಟ್ಟಿಕೊಂಡು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಈ ವೇಳೆ ಹಗ್ಗ ತುಂಡಾಗಿ ಸುರೇಶ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಅಸುನೀಗಿದ್ದಾರೆ.

ಇದನ್ನೂ ಓದಿ | Viduthalai | ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ವಿಜಯ್​ ಸೇತುಪತಿ ಮತ್ತು ಸೂರಿ ನಟನೆಯ ವಿಡುತಲೈ!

ಈ ಚಿತ್ರಕ್ಕೆ ಎಲ್‌ರೆಡ್‌ ಕುಮಾರ್‌ ಬಂಡವಾಳ ಹೂಡಿದ್ದಾರೆ. ಜಿಯಾ ಮೆನನ್‌ ಬರೆದ ʻತುನೈವನ್‌ʼ ಸಣ್ಣ ಕಥೆ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ʻವಿಡುತಲೈʼ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ದೊಡ್ಡ ಬಜೆಟ್‌ ಸಿನಿಮಾ ʻವಿಡುತಲೈʼ!
ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದೆ. ತಮಿಳಿನ ದುಬಾರಿ ಚಿತ್ರಗಳ ಪೈಕಿಗೆ ‘ವಿಡುತಲೈ’ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿದೆ ಎನ್ನಲಾಗಿದೆ.

ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಅವರು ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್​ ಜೈಂಟ್​ ಮೂವೀಸ್​ ವಹಿಸಿಕೊಂಡಿದ್ದು, ಸದ್ಯದಲ್ಲೇ ‘ವಿಡುತಲೈ’ ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Siddaramaiah biopic |ಸಿದ್ದರಾಮಯ್ಯ ಲೈಫ್‌ ಜರ್ನಿ ಸಿನಿಮಾ ಮಾಡಲು ಪ್ಲ್ಯಾನ್‌, ಗಡ್ಡದಾರಿ ಸಿದ್ದು ಪಾತ್ರಕ್ಕೆ ವಿಜಯ್‌ ಸೇತುಪತಿ?

Exit mobile version