2012ರಲ್ಲಿ ಬಿಡುಗಡೆಯಾಗಿದ್ದ ಒಎಂಜಿ: ಒಹ್ ಮೈ ಗಾಡ್ (OMG Oh My God)ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರ ನಿಭಾಯಿಸಿದ್ದ ನಟ ಅಕ್ಷಯ್ಕುಮಾರ್ (Akshay Kumar) ಈಗ OMG 2 ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಎಂಜಿ-2 ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಲಿದ್ದು, ಸಿನಿಮಾ ಆಗಸ್ಟ್ 11ಕ್ಕೆ ತೆರೆಕಾಣಲಿದೆ. ಇದೇ ಹೊತ್ತಲ್ಲಿ ಅಕ್ಷಯ್ ಕುಮಾರ್ ಅವರ ಹಳೇ ಮಾತುಗಳು ಮತ್ತೆ ವೈರಲ್ ಆಗುತ್ತಿವೆ. ಅಂದರೆ 2012ರಲ್ಲಿ OMG-Oh My God ಸಿನಿಮಾ ಮಾಡುವಾಗಿನ ಪೂರ್ವದಲ್ಲಿ ಅವರಾಡಿದ ಮಾತುಗಳು. ಈ ‘OMG-Oh My God’ ಸಿನಿಮಾಕ್ಕೆ ಸಹಿ ಹಾಕಿದ ಬಳಿಕ ಅಕ್ಷಯ್ ಕುಮಾರ್ ಮಾಂಸಾಹಾರ ತ್ಯಜಿಸಿದ್ದರಂತೆ. ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಅಕ್ಷಯ್ ಕುಮಾರ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. OMG-Oh My God ಸಿನಿಮಾದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದು ನನ್ನ ಪಾಲಿಗೆ ಅತ್ಯಂತ ಸವಾಲಾಗಿತ್ತು ಎಂದೂ ಅವರು ತಿಳಿಸಿದ್ದರು. ಅದರೊಂದಿಗೆ ತಾನು ಮಾಂಸಾಹಾರ ಬಿಟ್ಟಿದ್ದನ್ನೂ, ಅದಕ್ಕೆ ಕಾರಣವನ್ನೂ ಹೇಳಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರು OMG-Oh My God ಸಿನಿಮಾದಲ್ಲಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಗೊತ್ತಾದ ತಕ್ಷಣ ಅವರ ತಾಯಿ ಖುಷಿಪಟ್ಟಿದ್ದರಂತೆ. ಅವರು ಶ್ರೀಕೃಷ್ಣನ ಭಕ್ತೆಯಾಗಿದ್ದರಿಂದ, ಮಾಂಸಾಹಾರ ಬಿಟ್ಟುಬಿಡು ಎಂದು ಮಗ ಅಕ್ಷಯ್ ಕುಮಾರ್ಗೆ ಹೇಳಿದ್ದರಂತೆ. ಅಮ್ಮ ಹೇಳಿದ್ದಾರೆ ಎಂಬ ಕಾರಣಕ್ಕೆ ಅಕ್ಷಯ್ ಕುಮಾರ್ 2012ರಲ್ಲಿ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗುವವರೆಗೂ ನಾನ್ವೆಜ್ ಮುಟ್ಟಿರಲಿಲ್ಲವಂತೆ. ಶ್ರದ್ಧೆಯಿಂದ ಅವರ ಮಾತನ್ನು ಪಾಲಿಸಿದ್ದೆ. ಈ ಬಗ್ಗೆ ನನಗೆ ತೃಪ್ತಿಯಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು.
ಇದನ್ನೂ ಓದಿ: Ranbir Kapoor: ‘ಅನಿಮಲ್’ ಬಿಡುಗಡೆ ದಿನಾಂಕ ಪೋಸ್ಟ್ ಪೋನ್; ಅಕ್ಷಯ್ ಕುಮಾರ್, ಆಲಿಯಾ ಸಿನಿಮಾಗಳಿಂದ ಕ್ಲ್ಯಾಶ್!
ನಟ ಅಕ್ಷಯ್ ಕುಮಾರ್ ಇದೀಗ OMG 2ನಲ್ಲಿ ಶಿವನಾಗಿದ್ದಾರೆ. ಇದೂ ಕೂಡ ವಿಡಂಬನಾತ್ಮಕ ಸಿನಿಮಾವೇ ಆಗಿದ್ದು, OMG-Oh My God ಸಿನಿಮಾದ ಮುಂದುವರಿದ ಭಾಗವಾಗಿದೆ. ಕಳೆದ ವಾರ ಇದರ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ಅರುಣ್ ಗೋವಿಲ್ ಕೂಡ ಅಭಿನಯಿಸಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಅಕ್ಷಯ್ ಕುಮಾರ್ ಅವರ ಶಿವನ ಪಾತ್ರದ ಬಗ್ಗೆ ಇಂಟರ್ನೆಟ್ನಲ್ಲಿ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಸಿನಿಮಾ ಇದು ಎಂಬ ವಿವಾದ ಸಣ್ಣದಾಗಿ ಶುರುವಾಗಿದೆ.