ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅಶೋಕ್ ಕುಮಾರ್ ಸಂದರ್ಶನವೊಂದರಲ್ಲಿ, ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಿ ಅವರು ಭಾವುಕರಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಆಪ್ತರೂ ಆಗಿರುವ ಅಶೋಕ್ ಕುಮಾರ್ (Actor Ashok Kumar) ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ನಟ, ವಿಲನ್ ಆಗಿ ಅಭಿನಯಿಸಿದ್ದಾರೆ. ಅಷ್ಟಾಗಿ ಅವಕಾಶ ಸಿಗದ ಕಾರಣದಿಂದ ಚಿತ್ರರಂಗದಿಂದ ದೂರ ಸರಿದ್ದರು.
ಅಶೋಕ್ ಕುಮಾರ್ ಈ ಬಗ್ಗೆ ಮಾತನಾಡಿ ʻʻನನ್ನ ಮಕ್ಕಳಿಬ್ಬರು ಇವತ್ತಿಗೂ ನಿತ್ಯಾನಂದ ಸ್ವಾಮಿಜಿ ಅವರ ಬಳಿ ಇದ್ದಾರೆ. ಹುಡುಗಿ ಹೇಗಿದ್ದಾಳೆ ಎಂದು ನೋಡದೇ ನಾನು ಮದುವೆ ಆಗಿದ್ದೆ. ಮದುವೆ ಮಂಟಪದಲ್ಲಿ ಆಕೆಯನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಮದುವೆ ಆಗುವಂತಾಯಿತು. ಇಷ್ಟವಿಲ್ಲದ ಮದುವೆ ಗೊಂದಲದ ನಡುವೆ ಪೊಲೀಸ್ ಕೆಲಸ ಬಿಟ್ಟೆ. ನಂತರ ನನ್ನ ತಪ್ಪಿನ ಅರಿವಾಗಿ ಆಕೆಯನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು. ಅವರನ್ನು ಚೆನ್ನಾಗಿ ಓದಿಸಿದೆ. ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾದಲ್ಲಿ ಇದ್ದಳು. 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜತೆ ಇದ್ದಾಳೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್ ಏನು ಎನ್ನುವುದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ” ಎಂದರು.
“ಮೊದಲ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆ ಅಮೆರಿಕಾದಲ್ಲಿ ಇದ್ದಳು. ಆಗಲೇ ಆಕೆ ಅಲ್ಲಿ ನಿತ್ಯಾನಂದ ಸ್ವಾಮೀಜಿ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋಗುತ್ತಿದ್ದ ರಂಜಿತಾ ಕೂಡ ಆಕೆಯ ಜತೆ ಆಶ್ರಮಕ್ಕೆ ಹೋಗಲು ಆರಂಭಿದಳು. ಮುಂದೆ ಅವರಿಬ್ಬರೂ ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದರು. ಇವತ್ತಿಗೂ ನನ್ನ ಮಕ್ಕಳು ಆಶ್ರಮದಲ್ಲಿಯೇ ಇದ್ದಾರೆ. ಇಂದಿಗೂ ನನ್ನ ಇಬ್ಬರೂ ಮಕ್ಕಳು ನನಗೆ ಕರೆ ಮಾಡುವುದಿಲ್ಲ. ನಮ್ಮ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಇಬ್ಬರು ಮಕ್ಕಳ ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರುʼʼ ಎಂದು ಅಶೋಕ್ ಕುಮಾರ್ ಭಾವುಕರಾಗಿದ್ದಾರೆ.
ಇದನ್ನೂ ಓದಿ: Swami Nityananda: ನಮ್ಮದು ಗಡಿಯೇ ಇಲ್ಲದ ದೇಶ, ನಾನು ಹಿಂದು ಧರ್ಮದ ಗುರು; ನಿತ್ಯಾನಂದ ಘೋಷಣೆ
ʻʻಒಮ್ಮೆ ನಾನು ಆಶ್ರಮಕ್ಕೆ ಹೋಗಿ ನನ್ನ ಮಕ್ಕಳು ಇಲ್ಲಿ ಯಾಕೆ ಇದ್ದಾರೆ? ಅವರನ್ನು ಕಳುಹಿಸಿ ಕೊಡು ಎಂದು ಕೇಳಿದ್ದೆ. ಅದಕ್ಕೆ ಆತ, ಅವರು ಬಂದರೆ ಕರೆದುಕೊಂಡು ಹೋಗು ಎಂದ. ಆದರೆ ನನ್ನ ಮಕ್ಕಳಿಬ್ಬರು ನನ್ನ ಜತೆ ಬರಲೇ ಇಲ್ಲ. ಇವತ್ತಿಗೂ ಆತನೊಟ್ಟಿಗೇ ಇದ್ದಾರೆʼʼ ಎಂದರು.
‘ಬುದ್ಧಿಮಂತಲು’, ‘ಅಂದಾಲ ರಾಮುಡು’ ಹಾಗೂ ‘ಗುರುವಿನ ಮಿಂಚಿನ ಶಿಷ್ಯಲು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.