Site icon Vistara News

Actor Chetan Kumar Ahimsa: ಸಿಎಂ ಸಿದ್ದರಾಮಯ್ಯಗೆ “ಸೋಮಾರಿ” ಎಂದ ನಟ ಚೇತನ್!‌

actor Chetan Kumar Ahimsa

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ನಟ ಚೇತನ್‌ (Actor Chetan Kumar ahimsa) “ಸೋಮಾರಿ” ಎಂದು ಕರೆದಿದ್ದಾರೆ. ಅವರ ಟ್ವೀಟ್‌ ಇದೀಗ ಕುತೂಹಲವನ್ನು ಹಾಗೂ ಸಿದ್ದು ಅಭಿಮಾನಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ.

“ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್‌ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್ʼ ಕೃತಿಯ ಪ್ರತಿಯನ್ನು ಸಿಎಂ ʼಸೋಮಾರಿ’ ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ” ಎಂದು ಚೇತನ್‌ ವ್ಯಂಗ್ಯವಾಡಿದ್ದಾರೆ.‌

ಅಂಬೇಡ್ಕರ್ (Dr. BR Ambedkar) ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ (ರಾಜಕೀಯ ಹಿಂದೂ ಧರ್ಮ); ಇಂದಿನ ಕಾಂಗ್ರೆಸ್ ಪಕ್ಷ (ಅದೇ ಮನುವಾದ) ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಅಪಹರಿಸಲು ಪ್ರಯತ್ನಿಸುತ್ತಾರೆ. ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು; ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ಹೇಳಿದ್ದಾರೆ.

ಚೇತನ್‌ ಇಂಥ ಅಪ್ರಾಸಂಗಿಕ, ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ನಟ ಚೇತನ್ ವಿರುದ್ಧ ವಕೀಲರೊಬ್ಬರು ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಚೇತನ್ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿದ್ದರು.

ಚೇತನ್ ತಮ್ಮ ಫೇಸ್ಬುಕ್ ಖಾತೆಯಲ್ಲಿ “ಕೆಂಪೇಗೌಡ ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್-ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ” ಎಂದು ಪೋಸ್ಟ್ ಮಾಡಿದ್ದರು.

ಇತ್ತೀಚೆಗೆ, “ಗಾಂಧಿವಾದವನ್ನು ಕಿತ್ತೊಗೆಯಬೇಕು. ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ ಸಾವರ್ಕರ್ ಜೊತೆಗೆ ಮಹಾತ್ಮಾ ಗಾಂಧೀಜಿ ಫೋಟೊವನ್ನು ತೆರವು ಮಾಡಬೇಕು” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Rave Party: ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ, ತೆಲುಗು ನಟಿ ಹೇಮಾ ಪತ್ತೆ; ನಟಿಯರನ್ನು ಕರೆಸಿಕೊಂಡು ಏನ್‌ ಮಾಡ್ತಿದ್ರು?

Exit mobile version