Site icon Vistara News

Actor Darshan: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದವನ ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ಯಾರು ಈ ಪವಿತ್ರಾ?

Actor Darshan

Actor Darshan

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಪೊಲೀಸರು ಸ್ಯಾಂಡಲ್‌ವುಡ್‌ ನಟ ದರ್ಶನ್‌ (Actor Darshan) ಅವರನ್ನು ಬಂಧಿಸಿದ್ದಾರೆ. ದರ್ಶನ್‌ ಅವರಿಗೆ ಆತ್ಮೀಯರಾಗಿರುವ ನಟಿ ಪವಿತ್ರಾ ಗೌಡ ಅವರ ಫೋಟೊಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್‌ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಕೆಲವು ದಿನಗಳ ಹಿಂದೆ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್‌ ಭಾಗಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಹಾಗಾದರೆ ಪವಿತ್ರಾ ಗೌಡ ಯಾರು?

ಫ್ಯಾಷನ್‌ ಡಿಸೈನರ್‌ ಎಂದೆನಿಸಿಕೊಂಡಿರುವ ಪವಿತ್ರಗೌಡ ಅವರು ದರ್ಶನ್‌ ಜತೆ ಆತ್ಮೀಯರಾಗಿದ್ದಾರೆ. ಇವರು ಬೆಂಗಳೂರಿನ ಆರ್.ಆರ್. ನಗರದಲ್ಲಿ ʼರೆಡ್ ಕಾರ್ಪೆಟ್ʼ ಹೆಸರಿನಲ್ಲಿ ಬೋಟಿಕ್ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ದರ್ಶನ್ ಜತೆ ಸ್ನೇಹ ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಅವರು ದರ್ಶನ್‌ ಜತೆ ಇರುವ ಹಲವು ಫೋಟೊಗಳ ರೀಲ್ಸ್‌ ಹಂಚಿಕೊಂಡು ʻನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆʼ ಎಂದು ಕ್ಯಾಪ್ಷನ್‌ ಕೊಟ್ಟು ಶೇರ್‌ ಮಾಡಿಕೊಂಡಿದ್ದರು. ಇದಾದ ಬಳಿಕ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದರು. ಈ ವಿಚಾರ ಭಾರೀ ಸದ್ದು ಮಾಡಿತ್ತು.

ನಟಿಯೂ ಹೌದು

ಪವಿತ್ರಾ ಗೌಡ ಅವರು ಮಾಡೆಲ್‌ ಹಾಗೂ ನಟಿಯೂ ಹೌದು. ʼಅಗಮ್ಯಾʼ, ʼಛತ್ರಿಗಳು ಸಾರ್ ಛತ್ರಿಗಳುʼ, ʼಸಾಗುವ ದಾರಿʼ, ʼಪ್ರೀತಿ ಕಿತಾಬುʼ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮುಂಚೆ ಪವಿತ್ರಾ ಅವರು ದರ್ಶನ್‌ ಅವರ ತಾಯಿ ಹಾಗೂ ಸಹೋದರಿ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದವು. ಇದಾದ ಮೇಲೆ ದರ್ಶನ್‌ ಸಿನಿಮಾ ಸೆಟ್‌ಗಳಲ್ಲಿ ಪವಿತ್ರಾ ಅವರು ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದೂ ಇದೆ. ಕಳೆದ ವರ್ಷ ದರ್ಶನ್‌ ಅವರ ಜನುಮದಿನ ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದ ಚಿತ್ರದಲ್ಲಿ ದರ್ಶನ್ ಜತೆಗೆ ಪವಿತ್ರಾ ಕೂಡ ಇದ್ದರು. ಈ ವೇಳೆ ಮೊದಲ ಬಾರಿಗೆ ಇದರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮೀ ಅವರು ಮೇಘಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಮೇಘಾ ಶೆಟ್ಟಿ ಫೋಟೊ ಡಿಲಿಟ್‌ ಮಾಡಿದ್ದರು.

ಪವಿತ್ರಾ ಗೌಡ ಅವರಿಗೆ ಖುಷಿ ಎಂಬ ಮಗಳಿದ್ದಾಳೆ. ಕೆಲ ತಿಂಗಳ ಹಿಂದಷ್ಟೆ ಪುತ್ರಿ ಜತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಬಂಧನ; ಏನಿದು ಪ್ರಕರಣ?

ಯಾರು ಈ ರೇಣುಕಾಸ್ವಾಮಿ?

ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರು ನಟಿ ಪವಿತ್ರಾ ಗೌಡ ಅವರಿಗೆ ಮೆಸೇಜ್‌ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ದರ್ಶನ್‌ ಅವರು ಹಲವರೊಂದಿಗೆ ತೆರಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿತ್ತು. ಕೊಲೆ ಕುರಿತು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎರಡು ತಿಂಗಳ ಹಿಂದೆ ಹತ್ಯೆ ಮಾಡಲಾಗಿತ್ತು.

Exit mobile version