ಬಳ್ಳಾರಿ: ರಾಜಾತಿಥ್ಯದ ಆರೋಪದ ಹಿನ್ನೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ನಟ ದರ್ಶನ್ ನನ್ನು (Actor Darshan) ಬಳ್ಳಾರಿ ಜೈಲಿಗೆ (Bellary Jail) ಸ್ಥಳಾಂತರಿಸಿದ ಬಳಿಕ ಬಳ್ಳಾರಿಯಲ್ಲಿ ದರ್ಶನ್ ಅಭಿನಯದ ಹಳೆ ಸಿನಿಮಾ ಮತ್ತೆ ರಿಲೀಸ್ ಆಗಿದೆ. ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಶಾಸ್ತ್ರಿ, ಕರಿಯ ಚಿತ್ರಗಳು ಕೆಲವು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.
ಬಳ್ಳಾರಿಯ ರಾಘವೇಂದ್ರ ಟಾಕೀಸ್ ನಲ್ಲಿ ಶಾಸ್ತ್ರೀ ಚಿತ್ರ ಬಿಡುಗಡೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಅಭಿಮಾನಿಗಳು ಬರುತ್ತಾರೆಯೇ ಎಂಬುದನ್ನು ಕಾಡು ನೋಡಬೇಕಿದೆ ಎನ್ನುತ್ತಾರೆ ಥಿಯೇಟರ್ ನವರು.
ಪ್ರಸನ್ನ ಥಿಯೇಟರ್ ಎದುರು ಗಲಾಟೆ
ಬೆಂಗಳೂರು ನಗರದ ಪ್ರಸನ್ನ ಥಿಯೇಟರ್ ನಲ್ಲಿ ದರ್ಶನ್ ಅಭಿನಯದ ಕರಿಯ ಚಿತ್ರ ಬಿಡುಗಡೆಯಾಗಿದ್ದು, ಭಾರಿ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದು ಮಾತ್ರವಲ್ಲದೆ ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದ್ದಕ್ಕೆ ಕೆ.ಪಿ. ಅಗ್ರಹಾರ ಪೊಲೀಸರು ಲಾಠಿ ಹಿಡಿದು ದರ್ಶನ್ ಅಭಿಮಾನಿಗಳ ಚದುರಿಸಿದರು.
ಪ್ರಾರಂಭದಲ್ಲಿ ಅಭಿಮಾನಿಗಳ ಮನವೊಲಿಸಲು ಪೊಲೀಸರು ಮುಂದಾಗಿದ್ದು, ಅಭಿಮಾನಿಗಳು ಪೊಲೀಸರ ಮನವಿಗೂ ಸ್ಪಂದಿಸದೇ ಇದ್ದಾಗ ಲಾಠಿ ಬೀಸಿದರು. ಮದ್ಯ ಸೇವಿಸಿ ಬಂದು ಥಿಯೇಟರ್ ಎದುರು ದಾಂದಲೆಗೆ ಮುಂದಾಗಿದ್ದ ದರ್ಶನ್ ಅಭಿಮಾನಿಯೊಬ್ಬನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿದ ಬಳಿಕ ಕ್ಷಮೆಯಾಚಿಸಿದ ಘಟನೆಯೂ ನಡೆಯಿತು.
ಮಾಧ್ಯಮದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ದರ್ಶನ್ ಅಭಿಮಾನಿಯೊಬ್ಬ ಬಳಿಕ ಥಿಯೇಟರ್ ಎದುರು ಬಂದ ಮಾಧ್ಯಮಗಳ ಎದುರು ಕೈಮುಗಿದು ಕ್ಷಮೆ ಯಾಚಿಸಿದ್ದಾನೆ.
21 ವರ್ಷಗಳ ಬಳಿಕ ಕರಿಯ ಚಿತ್ರ ಮತ್ತೆ ಬಿಡುಗಡೆ
ಅಭಿಮಾನಿಗಳ ಪಾಲಿನ ಡಿ ಬಾಸ್ ನಟನೆಯ ಕರಿಯಾ ಚಿತ್ರ ಮತ್ತೆ ಬಿಡುಗಡೆಯಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಸೇರಿದ ಮೇಲೆ ಈ ಚಿತ್ರವನ್ನು ಮತ್ತೆ ಬಿಡುಗಡೆಗೊಳಿಸಲಾಗಿದೆ.
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ ಚೊಚ್ಚಲ ಸಿನಿಮಾ ಕರಿಯಾ ಚಿತ್ರ ಬಿಡುಗಡೆಯಾಗಿ 21 ವರ್ಷಗಳ ಅನಂತರ ಮತ್ತೆ ಬಿಡುಗಡೆ ಮಾಡಲಾಗಿದೆ.
ಬಳ್ಳಾರಿ ಮಾತ್ರವಲ್ಲ ರಾಜ್ಯದ 80 ಥಿಯೇಟರ್ ಗಳಲ್ಲಿ ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರದ ಪ್ರಸನ್ನ ಥಿಯೇಟರ್ ನಲ್ಲಿ ಬೆಳಗ್ಗೆ 7.30 ರ ಶೋ ಹೌಸ್ ಫುಲ್ ಪ್ರದರ್ಶನ ಕಂಡಿದೆ.
ಕರಿಯ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿರುವ ದರ್ಶನ್ ಅಭಿಮಾನಿಗಳಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮಂತ ಕೆಟ್ಟ ಅಭಿಮಾನಿಗಳಿಂದಲೇ ದರ್ಶನ್ ಗೆ ಕೆಟ್ಟ ಹೆಸರು ಎಂದು ಹೇಳಿರುವ ಮಾಗಡಿ ರಸ್ತೆ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ಮಾಧ್ಯಮದ ವಿರುದ್ಧ ಧಿಕ್ಕಾರ ಕೂಗಿದವರಿಗೆ ಪೊಲೀಸ್ ಗದರಿಸಿದರು.
ಕರಿಯ ಚಿತ್ರದ ಮರು ಬಿಡುಗಡೆ ಹಿನ್ನೆಲೆಯಲ್ಲಿ ಪ್ರಸನ್ನ ಥಿಯೇಟರ್ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು ಹತ್ತು ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಬಾಡಿ ವೋನ್ ಕೆಮರಾ ಹಾಕಿ ಕೊಂಡು ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Actor Darshan: ರಾತ್ರಿ ಕಳೆಯೊದ್ರೊಳಗೆ ಮತ್ತೆ ಟ್ರೆಂಡ್ ಆಗ್ತಿದೆ ದರ್ಶನ್ ಖೈದಿ ನಂಬರ್ !!
ಮಾಧ್ಯಮಕ್ಕೆ ಆಕ್ಷೇಪ
ದರ್ಶನ್ ಪರಪ್ಪನ ಆಗ್ರಹಾರದ ಜೈಲಿನಲ್ಲಿ ಸಿಗರೇಟ್, ಕಾಫಿ ಮಗ್ ಹಿಡಿದು ಕುಳಿತಿದ್ದ ಪೋಸ್ಟರ್ ಹಾಕಿದ ಅಭಿಮಾನಿಯೊಬ್ಬ ಕಿಂಗ್ ಇಸ್ ಆಲ್ವೇಸ್ ಕಿಂಗ್ ದಿಸ್ ಈಸ್ ನಾಟ್ ಎ ಬ್ಯಾನರ್ ದೀಸ್ ಈಸ್ ಎ ಹ್ಯಾಂಡ್ ಮೇಡ್ ಆರ್ಟ್ ನಂಬರ್ 511 ಎಂದು ಬರೆಸಿದ್ದಾನೆ.
ಏನ್ರೀ ಮೀಡಿಯಾ, ಜಸ್ಟೀಸ್, ಡಿಗ್ನೀಟಿ, ಈಕ್ವಾಲಿಟಿ , ಪೀಸ್, ಖೈದಿ ನಂಬರ್ 6016 ಎಂದು ಬರೆದಿರುವ ಪೋಸ್ಟರ್ ಅನ್ನು ಪ್ರಸನ್ನ ಥಿಯೇಟರ್ ಮೇಲೆ ಹಾಕಲಾಗಿದೆ, ಇದನ್ನು ಪೊಲೀಸರು ತೆಗೆಸಿದ್ದಾರೆ.